ಬೆಂಗಳೂರು, ನ. 09: ಬೆಂಗಳೂರು (Bengaluru) ನಗರದಲ್ಲಿ ಇನ್ನು ಮುಂದೆ ಎಲ್ಲೆಂದರಲ್ಲಿ ಬೋರ್ ವೆಲ್ ಕೊರೆಯುವಂತಿಲ್ಲ.ಅನಧಿಕೃತವಾಗಿ ಬೋರ್ ವೆಲ್ ಗಳನ್ನು ಕೊರೆಯುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ವಿಶೇಷ ತಂಡವನ್ನು ರಚಿಸಲಾಗಿದೆ ಈ ಬಗ್ಗೆ ಮಾಹಿತಿ ನೀಡಿರುವ ಸಣ್ಣ ನೀರಾವರಿ, ಸಚಿವ ಎನ್ ಎಸ್ ಭೋಸರಾಜು,ಬೆಂಗಳೂರು ನಗರ ಜಿಲ್ಲೆಯಲ್ಲಿ ಅನಧಿಕೃತ ಕೊಳವೆಬಾವಿಗಳನ್ನು ಕೊರೆಯಲಾಗುತ್ತಿದೆ.ಇದರಿಂದ ಪರಿಸರ ಅಸಮತೋಲನ ಉಂಟಾಗುತ್ತಿದೆ.ಹೀಗಾಗಿ ಇದರ ವಿರುದ್ದ ಕ್ರಮ ಕೈಗೊಳ್ಳುವುದು ಬಹಳ ಆದ್ಯತೆಯ ವಿಷಯವಾಗಿದೆ ಎಂದಿದ್ದಾರೆ
ಅನಧಿಕೃತ ಕೊಳವೆ ಬಾವಿಗಳಿಂದ ಅಂತರ್ಜಲ ಮಟ್ಟ ಕಡಿಮೆ ಆಗುತ್ತದೆ. ಅಂತರ್ಜಲ ಶೋಷಣೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಕೊಳವೆ ಬಾವಿಗಳನ್ನು ಕೊರೆಸುವುದಕ್ಕೆ ಅನುಮತಿ ಪಡೆದುಕೊಳ್ಳುವುದು ಅಗತ್ಯ.
ಆದರೆ, ಇತ್ತೀಚಿನ ದಿನಗಳಲ್ಲಿ ಇದನ್ನ ಸರಿಯಾಗಿ ಪಾಲಿಸಲಾಗುತ್ತಿಲ್ಲ. ಅನುಮತಿ ಪಡೆದುಕೊಳ್ಳದೇ ಕೊಳವೆ ಬಾವಿಗಳನ್ನ ಕೊರೆಸುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಬಂದಿದ್ದ ಹಿನ್ನಲೆಯಲ್ಲಿ ಸೂಕ್ತ ಕ್ರಮಕ್ಕಾಗಿ ಅಂತರ್ಜಲ ನಿರ್ದೇಶನಾಲಯದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಈ ಸೂಚನೆಯ ಅನ್ವಯ ವಿಶೇಷ ತಂಡವನ್ನು ರಚಿಸಲಾಗಿದೆ.
ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಪ್ರದೇಶದಲ್ಲಿ ನಿಯಮಿತವಾಗಿ ತಪಾಸಣೆ ನಡೆಸುವಂತೆ ವಿಶೇಷ ತಂಡಕ್ಕೆ ಸೂಚಿಸಲಾಗಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಪ್ರಧಾನ ಮುಖ್ಯ ಇಂಜಿನಿಯರ್ ಗೂ ತಮ್ಮ ಅಧೀನದ ಅಧಿಕಾರಿಳಿಗೆ ಸೂಚನೆ ನೀಡುವಂತೆ ಸೂಚಿಸಲಾಗಿದೆ. ಅಲ್ಲದೇ, ರಾಜ್ಯಾದ್ಯಂತ ಅನಧಿಕೃತ ಕೊಳವೆ ಬಾವಿಗಳನ್ನು ಕೊರೆಸುವುದನ್ನ ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನ ಕೈಗೊಳ್ಳುವಂತೆ ಅಂತರ್ಜಲ ಇಲಾಖೆಯ ಅಧಿಕಾರಿಗಳಿಗೂ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಸಚಿವರ ಸೂಚನೆಯಂತೆ ಅಂತರ್ಜಲ ನಿರ್ದೇಶನಾಲಯದ ಉಪನಿರ್ದೇಶಕರಾದ ಜಿ. ಜಯಣ್ಣ ಹಾಗೂ ಹಿರಿಯ ಭೂವಿಜ್ಞಾನಿಗಳಾದ ಹೆಚ್.ಎಂ ನಾಗರಾಜ ಅವರ ನೇತೃತ್ವದ ತಂಡವನ್ನು ರಚಿಸಲಾಗಿದೆ.