ಬೆಂಗಳೂರು,ಆ.30 – ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ನೂರು ದಿನ ತುಂಬಿದ ಸಂಭ್ರಮದಲ್ಲಿ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹ ಲಕ್ಷ್ಮಿ (Gruha Lakshmi) ಯೋಜನೆಗೆ ಅದ್ದೂರಿ ಚಾಲನೆ ನೀಡಲಾಗಿದೆ.
ಈ ಕಾರ್ಯಕ್ರಮವನ್ನು ಹರ್ಷೋದ್ಗಾರಗಳ ನಡುವೆ ಕಾಂಗ್ರೆಸ್ ಕಾರ್ಯಕರ್ತರು ಸ್ವಾಗತಿಸಿ, ಸಂಭ್ರಮಿಸಿದ್ದಾರೆ. ಕಾಂಗ್ರೆಸ್ ಶಾಸಕರಿರುವ ಕ್ಷೇತ್ರಗಳಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಬಿಜೆಪಿ ನಾಯಕರು ಈ ಕಾರ್ಯಕ್ರಮವನ್ನು ಒಂದು ಗಿಮಿಕ್ ಎಂದು ಟೀಕಿಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದರ ನಡುವೆ,ಬಿಜೆಪಿಯ ಶಾಸಕ ಹಾಗೂ ಮಾಜಿ ಮಂತ್ರಿ ಎಸ್.ಟಿ.ಸೋಮಶೇಖರ್ ತಮ್ಮ ನಾಯಕತ್ವಕ್ಕೆ ಸೆಡ್ಡು ಹೊಡೆದು ರಾಜ್ಯ ಸರ್ಕಾರದ ಕಾರ್ಯಕ್ರಮಕ್ಕೆ ಅದ್ದೂರಿ ಸ್ವಾಗತ ಕೋರಿದ್ದಾರೆ.
ಅತ್ತ ಮೈಸೂರಿನ ಮಹಾರಾಜ ಕಾಲೇಜಿನ ಮೈದಾನದಲ್ಲಿ ಅದ್ದೂರಿ ಸಮಾರಂಭ ನಡೆಯುತ್ತಿದ್ದರೆ,ಇತ್ತ ಸೋಮಶೇಖರ್ ಪ್ರತಿನಿಧಿಸುವ ಬೆಂಗಳೂರಿನ ಯಶವಂತಪುರ ಕ್ಷೇತ್ರದಲ್ಲೂ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡಲಾಯಿತು.
ಮೈಸೂರಿನ ಕಾರ್ಯಕ್ರಮಗಳ ವೀಕ್ಷಣೆಗೆ ಎಲ್‌ಇಡಿ ಪರದಗಳನ್ನ ಅಳವಡಿಸಲಾಗಿತ್ತು. ಈ ಮೂಲಕ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ, ಪಂಚ ಗ್ಯಾರಂಟಿಯಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯನ್ನ ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ ಭರ್ಜರಿಯಾಗಿ ಜಾರಿಗೊಳಿಸಿರುವುದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.
ಈ ವೇಳೆ ಮಾತನಾಡಿದ ಎಸ್.ಟಿ.ಸೋಮಶೇಖರ್ ಗೃಹಲಕ್ಷ್ಮೀ ಯೋಜನೆ ಜಾರಿಗೆ ನನ್ನದು ಕೂಡಾ ಒಂದು ಅಳಿಲು ಸೇವೆ ಇದೆ. ನನ್ನ ಕ್ಷೇತ್ರದಲ್ಲೂ ಯೋಜನೆ ಬಗ್ಗೆ ಮಾಹಿತಿ ನೀಡುವ ಕೆಲಸ ಮಾಡಿದ್ದೇನೆ ಎಂದು ಹೇಳಿದರು.
ಇದು ಅರೆಬೆಂದ ಯೋಜನೆ ಎಂದು ಬಸವರಾಜ ಬೊಮ್ಮಾಯಿ ಮಾಡಿರುವ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಮಾಜಿ ಸಿಎಂ ಬೊಮ್ಮಾಯಿ ದೊಡ್ಡವರು. ಏನುಬೇಕಾದರೂ ಮಾತಾಡಲಿ. ಇದು ನನ್ನ ಕ್ಷೇತ್ರದಲ್ಲಿ ನಡೆಯುತ್ತಿರುವ ಕಾರ್ಯಕ್ರಮ. ಇದು ಸರ್ಕಾರದ ಯೋಜನೆ, ಮಹಿಳೆಯರಿಗೆ 2 ಸಾವಿರ ರೂ. ಸಿಗುತ್ತದೆ. ಗೃಹಲಕ್ಷ್ಮೀ ಯೋಜನೆಯಲ್ಲಿ ಯಾವುದೇ ನ್ಯೂನತೆ ನನಗೆ ಕಾಣುತ್ತಿಲ್ಲ. ಸರ್ಕಾರದ ಯೋಜನೆ ಬಗ್ಗೆ ಜನರಿಗೆ ತಿಳಿಸುವ ಕೆಲಸ ಮಾಡಿದ್ದೇನೆ. ಯೋಜನೆ ಜನರಿಗೆ ತಲುಪಿಸಲು ಏನು ಬೇಕೋ ಅದನ್ನು ಮಾಡಿರುವೆ ಎಂದು ಸಮರ್ಥಿಸಿದರು.
ಈ ಮೂಲಕ ಕಳೆದೊಂದು ತಿಂಗಳನಿಂದ ಸೋಮಶೇಖರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಲಿದ್ದಾರೆ ಎಂದು ಕೇಳಿಬರುತ್ತಿರುವ ಸುದ್ದಿಗಳಿಗೆ ನಾನು ಬಿಜೆಪಿ ಬಿಡುವುದಿಲ್ಲ ಎನ್ನುತ್ತಿರುವ ಸೋಮಶೇಖರ್ ಈಗ ನಡೆದುಕೊಂಡಿರುವ ವೈಖರಿ ಅಚ್ಚರಿ ಮೂಡಿಸುತ್ತದೆ.