ಬೆಂಗಳೂರು,ನ. 29-
ರಂಗೋಲಿ ಕೆಳಗೆ ನುಸುಳಿದ ಕತೆ ಇದು. ತೆರಿಗೆ ಕಳ್ಳತನ ತಪ್ಪಿಸುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಜಿಎಸ್‌ಟಿ ಜಾರಿಗೆ ತಂದಿದೆ. ಇದರಲ್ಲಿಯೂ ಕೆಲ ಅಂಶಗಳನ್ನು ಪತ್ತೆ ಹಚ್ಚಿರುವ ವ್ಯಾಪಾರಿಗಳು ತೆರಿಗೆ ವಂಚನೆ ಮಾಡುತ್ತಿದ್ದಾರೆ.
ಈ ಬಗ್ಗೆ ಖಚಿತ ಮಾಹಿತಿ ಪಡೆದ ಆದಾಯ ತೆರಿಗೆ ಹಾಗೂ ಜಿಎಸ್‌ಟಿ ಇಲಾಖೆಗಳು ಅಧಿಕಾರಿಗಳು ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸಿ 100 ಕೋಟಿ ರೂ. ಮೌಲ್ಯದ ಮರೆಮಾಚಿದ್ದ ವಹಿವಾಟು ಪತ್ತೆ ಮಾಡಿದ್ದಾರೆ.
ಅಧಿಕಾರಿಗಳ ದಾಳಿಯಿಂದ ವ್ಯಾಪಕ ತೆರಿಗೆ ವಂಚನೆ ಜಾಲ ಬಯಲಾಗಿದ್ದು, ಕೇಂದ್ರ ವಿಭಾಗ ಸೇರಿದಂತೆ ಚಿಕ್ಕಪೇಟೆ, ಅವೆನ್ಯೂ ರಸ್ತೆ, ಬಿವಿಕೆ ರಸ್ತೆ, ಜೆಸಿ ರಸ್ತೆ, ಎಸ್‌ಪಿ ರೋಡ್ ಪ್ರದೇಶಗಳಲ್ಲಿನ ಹಲವು ವ್ಯಾಪಾರಸ್ಥರ ಮಳಿಗೆಗಳ ಮೇಲೆ ದಾಳಿ ನಡೆದಿದೆ.
ದಾಳಿಯಲ್ಲಿ ಎಲೆಕ್ಟ್ರಾನಿಕ್ಸ್, ವಾಹನ ಬಿಡಿಭಾಗಗಳು, ಉಡುಗೊರೆಗಳು, ಒಣಹಣ್ಣುಗಳು ಸೇರಿದಂತೆ ವಿವಿಧ ಸಾಮಗ್ರಿಗಳ ಖರೀದಿ–ಮಾರಾಟದಲ್ಲಿ ತೆರಿಗೆ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತೆರಿಗೆ ಬಿಲ್ ಇಲ್ಲದೇ ಸರಕು ಖರೀದಿ,ಖರೀದಿ ಬಿಲ್‌ಗಳಿಗಿಂತ ಹೆಚ್ಚಾಗಿ ಸರಕು ಖರೀದಿ,ಬಿಲ್ ನೀಡದೆ ಸರಕು ಮಾರಾಟ,ಕಬ್ಬಿಣ, ಉಕ್ಕು, ಹಾರ್ಡ್‌ವೇರ್, ಸಿಮೆಂಟ್ ವ್ಯಾಪಾರಿಗಳಿಂದ ತೆರಿಗೆ ತಪ್ಪಿಸಲು ಮಾಲುಗಳ ಜತೆಯಲ್ಲದ ನಕಲಿ ಬಿಲ್‌ಗಳನ್ನು ನೀಡಿರುವುದು ದಾಳಿ ವೇಳೆ ಪತ್ತೆಯಾಗಿದೆ.
ಗುತ್ತಿಗೆದಾರರಿಗೆ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ಪಡೆಯಲು ಸಹಾಯಕವಾಗುವ ನಕಲಿ ಬಿಲ್ ಜಾಲ,40 ಲಕ್ಷ ರೂ. ಮೀರಿದ ವಹಿವಾಟು ಇದ್ದರೂ ಜಿಎಸ್ ಟಿ ನೋಂದಣಿ ಮಾಡದೇ ವ್ಯವಹಾರ ಪತ್ತೆಹಚ್ಚಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 1,000 ಚೀಲ ಗುಟ್ಕಾ ಮತ್ತು ಪಾನ್ ಮಸಾಲಾ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ವಶಪಡಿಸಿಕೊಳ್ಳಲಾಗಿದೆ.
ಕಳೆದ 15 ದಿನಗಳಲ್ಲಿ ಬೆಂಗಳೂರಿನಲ್ಲಿ ಐಟಿ ಹಾಗೂ ಜಿಎಸ್‌ಟಿ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. 500 ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ಮಾಡಿ, 100 ಕೋಟಿ ರೂ. ಮರೆಮಾಚಿದ್ದ ವಹಿವಾಟು ಪತ್ತೆ ಮಾಡಿದ್ದಾರೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

