ಬೆಂಗಳೂರು, ಜ.27: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆ ನಿಗಮ,ಮಂಡಳಿ ನೇಮಕಾತಿ ಮಾಡಿ ಆದೇಶ ಹೊರಡಿಸಿದ ರಾಜ್ಯ ಸರ್ಕಾರ ಇದೀಗ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಮತ್ತು ಅನುಷ್ಠಾನ ಸಮಿತಿಗಳನ್ನು ರಚನೆ ಮಾಡಿ ಆದೇಶ ಹೊರಡಿಸಿದೆ.
ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಅನುಷ್ಠಾನ ಪ್ರಾಧಿಕಾರ, ಬಿಬಿಎಂಪಿ ಮತ್ತು ತಾಲ್ಲೂಕು ಮಟ್ಟದಲ್ಲಿ ರಚನೆಯಾಗಲಿರುವ ಅನುಷ್ಠಾನ ಸಮಿತಿಗಳು ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಜಾರಿಯ ಉದ್ದೇಶ ಹೊಂದಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಗ್ಯಾರಂಟಿ ಯೋಜನೆಗಳ ಜಾರಿಗೆ ರಚನೆಯಾಗಲಿರುವ ರಾಜ್ಯಮಟ್ಟದ ಪ್ರಾಧಿಕಾರದಲ್ಲಿ ಅಧ್ಯಕ್ಷರು, ಐದು ಜನ ಉಪಾಧ್ಯಕ್ಷರು ಇರಲಿದ್ದಾರೆ. ಅಧ್ಯಕ್ಷರಾದವರಿಗೆ ಸಂಪುಟ ದರ್ಜೆ ಸ್ಥಾನಮಾನ ಇರಲಿದೆ. ಉಪಾಧ್ಯಕ್ಷರಿಗೆ ರಾಜ್ಯ ಸಚಿವ ಸ್ಥಾನ ನೀಡಲಾಗುವುದು. ರಾಜ್ಯ ಮಟ್ಟದ ಸಮಿತಿಗೆ 31 ಜನ ಸದಸ್ಯರು ಇರಲಿದ್ದಾರೆ.
ಜಿಲ್ಲಾ ಮಟ್ಟದ ಅನುಷ್ಠಾನ ಪ್ರಾಧಿಕಾರದಲ್ಲಿ ಒಬ್ಬ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಹಾಗೂ 21 ಸದಸ್ಯರು ಇರಲಿದ್ದಾರೆ. ಅವರಿಗೆ ಕಚೇರಿ ವ್ಯವಸ್ಥೆ ಹಾಗೂ ಗೌರವ ಧನ ನೀಡುವ ವ್ಯವಸ್ಥೆ ಆಗಲಿದೆ ಹಾಗೂ 50 ಸಾವಿರ ರೂ.ಗಳನ್ನು ಪ್ರತಿ ತಿಂಗಳು ನೀಡಲಾಗುವುದು.
ಇನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ತಾಲ್ಲೂಕು ಮಟ್ಟದಲ್ಲಿ ಅನುಷ್ಠಾನ ಸಮಿತಿಗಳಿರಲಿದ್ದು,ಇಲ್ಲಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಹಾಗೂ 11 ಸದಸ್ಯರು ಇರಲಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದು ಎಂಟು ತಿಂಗಳಾದರೂ ಕಾರ್ಯಕರ್ತರಿಗೆ ಸೂಕ್ತ ಮಾನ್ಯತೆ ಸಿಗುತ್ತಿಲ್ಲ ಎಂಬ ಆರೋಪ ಸಹಜವಾಗಿದೆ. ಇದೀಗ ನಿಗಮ ಮಂಡಳಿಗಳಿಗೂ ಸಾಕಷ್ಟು ಸಂಖ್ಯೆಯಲ್ಲಿ ಕಾರ್ಯಕರ್ತರೂ ಹಾಗೂ ಎರಡನೇ ಹಂತದ ನಾಯಕರೂ ಆಕಾಂಕ್ಷಿಗಳಾಗಿದ್ದಾರೆ. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರನ್ನು ಸಮಾಧಾನ ಪಡಿಸುವ ನಿಟ್ಟಿನಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಯನ್ನು ರಚನೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಲೋಕಸಭಾ ಚುನಾವಣೆ ಘೋಷಣೆಗೂ ಮುನ್ನ ಇವುಗಳಿಗೆ ನೇಮಕ ಮಾಡುವ ಮೂಲಕ ಅಸಮಾಧಾನ ತಣಿಸಲು ಪ್ರಯತ್ನ ನಡೆಸಲಾಗಿದೆ.