ನವದೆಹಲಿ: ನಿರೀಕ್ಷೆಯಂತೆಯೇ ಗುಜರಾತ್‌ನ ಪಾಟಿದಾರ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್ ಅವರು ಬಿಜೆಪಿ ಸೇರಿದ್ದಾರೆ. 28 ವರ್ಷದ ಹಾರ್ದಿಕ್ ಅವರಿಗೆ ಗುಜರಾತ್‌ನ ಗಾಂಧಿನಗರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಕೇಸರಿ ಶಾಲು ಮತ್ತು ಟೊಪ್ಪಿ ಹಾಕಿ ಪಕ್ಷಕ್ಕೆ ಸ್ವಾಗತಿಸಲಾಗಿದೆ. ಗುಜರಾತ್ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳಿರುವಾಗ, ಒಂದು ಕಾಲದ ಹಾರ್ಡ್‌ಕೋರ್ ಬಿಜೆಪಿ ವಿರೋಧಿ ಹಾರ್ದಿಕ್ ಪಟೇಲ್ ಅವರು ಕಾಂಗ್ರೆಸ್‌ನಿಂದ ಬಿಜೆಪಿಗೆ ಜಿಗಿದಿದ್ದಾರೆ.
ಹಾರ್ದಿಕ್ ಪಟೇಲ್ ಆಗಮನ ಬಿಜೆಪಿಗೆ ವರದಾನವೇ ಅಥವಾ ಶಾಪವೇ ಎಂಬ ಬಗ್ಗೆ ಚರ್ಚೆಗಳು ಶುರುವಾಗಿವೆ. ಆದರೆ ಅವರ ಪಕ್ಷ ಸೇರ್ಪಡೆ ಬಿಜೆಪಿಯ ಅನೇಕ ನಾಯಕರಿಗೆ ಅಸಮಾಧಾನ ಮೂಡಿಸಿದೆ ಎನ್ನುವುದು ಅವರ ಸೇರ್ಪಡೆ ಕಾರ್ಯಕ್ರಮವೇ ಸೂಚನೆ ನೀಡಿದೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸಿಆರ್ ಪಾಟೀಲ್ ಅವರನ್ನು ಹೊರತುಪಡಿಸಿ ಗುಜರಾತ್ ಬಿಜೆಪಿಯ ಯಾವ ನಾಯಕರೂ ಹಾಜರಿರಲಿಲ್ಲ. ಕಾಂಗ್ರೆಸ್‌ನಲ್ಲಿ ಉನ್ನತ ಹುದ್ದೆ ನೀಡಿದ್ದರೂ, ತಮ್ಮನ್ನು ಪಕ್ಷದ ಚಟುವಟಿಕೆಗಳಲ್ಲಿ ಕಡೆಗಣಿಸಲಾಗುತ್ತಿದೆ ಮತ್ತು ತಮ್ಮನ್ನು ಯಾವ ನಾಯಕರೂ ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿ ಅವರು ಕಾಂಗ್ರೆಸ್ ತೊರೆದಿದ್ದರು. ಪಕ್ಷ ತ್ಯಜಿಸುವ ದಿನ ಹತ್ತಿರವಾದಾಗ ಬಿಜೆಪಿಯನ್ನು ಹೊಗಳುವ ರಾಜಕಾರಣ ಆರಂಭಿಸಿದ್ದರು. ‘ಯಶಸ್ವಿ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಸಣ್ಣ ಸಿಪಾಯಿಯಂತೆ ದೇಶ ಸೇವೆ ಕೆಲಸ ಮಾಡುತ್ತೇನೆ’ ಎಂದು ಬರೆದುಕೊಂಡಿದ್ದರು.
ಸೈದ್ಧಾಂತಿಕ ನಿಲುವು ಹೊಂದಿರುವ ಪಕ್ಷಕ್ಕೆ ಜಿಗಿದಿರುವ ಕುರಿತು ಕೇಳಿದ ಪ್ರಶ್ನೆಗಳಿಗೆ ಹಾರ್ದಿಕ್ ಪಟೇಲ್ ಉತ್ತರ ನೀಡದೆ ನುಣುಚಿಕೊಂಡಿದ್ದಾರೆ.
ರಾಜಕೀಯ ಮಹತ್ವಾಕಾಂಕ್ಷೆಗಿಂತ ಹಲವು ಕೇಸ್‌ಗಳನ್ನು ಹೊತ್ತುಕೊಂಡಿರುವ ಹಾರ್ದಿಕ್ ಪಟೇಲ್, ಮತ್ತೆ ಜೈಲಿಗೆ ಹೋಗುವ ಅನಿವಾರ್ಯತೆ ತಪ್ಪಿಸಿಕೊಳ್ಳಲು ಅಥವಾ ಜೈಲಿಗೆ ಹೋಗುವ ಭಯದಿಂದ ದೂರವಾಗಲು ಬಿಜೆಪಿ ಸೇರಿದ್ದಾರೆ ಎನ್ನಲಾಗುತ್ತಿದೆ.
ಈ ವಿಚಾರದಲ್ಲಿ ಹಾರ್ದಿಕ್ ಪಟೇಲ್ ಬಿಜೆಪಿಯ ಒತ್ತಡ ತಂತ್ರಕ್ಕೆ ಬಲಿಯಾದರಾ ಎಂಬ ಚರ್ಚೆಗಳು ಗುಜರಾತ್‌ನಲ್ಲಿ ಜೋರಾಗಿಯೇ ನಡೆದಿವೆ.
ಪಾಟಿದಾರ್ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂದು 2017-18ರಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ನೇತೃತ್ವ ವಹಿಸಿದ್ದ ಹಾರ್ದಿಕ್ ಪಟೇಲ್, ನಾಯಕರಾಗಿ ಗುರುತಿಸಿಕೊಂಡಿದ್ದರು. ಬಳಿಕ ಹೋದಲ್ಲಿ ಬಂದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು.
ಪಾಟಿದಾರ್ ಪ್ರತಿಭಟನೆಯಲ್ಲಿ ಹಾರ್ದಿಕ್ ಪಟೇಲ್ ಗುರುತಿಸಿಕೊಂಡಾಗಲೇ ವಿವಾದದ ಕೇಂದ್ರಬಿಂದುವಾಗಿದ್ದರು. ಅವರು ಗನ್ ಮತ್ತು ಪಿಸ್ತೂಲುಗಳನ್ನು ಹಿಡಿದುಕೊಂಡಿರುವ ಚಿತ್ರಗಳು ವೈರಲ್ ಆಗಿದ್ದವು. ಪ್ರತಿಭಟನೆಯ ವೇಳೆ ಕೂಡ ಸೊಂಟಕ್ಕೆ ಗನ್ ಸಿಕ್ಕಿಸಿಕೊಂಡು ಬಂದಿದ್ದರು. ನನಗೆ ಗನ್ ಮತ್ತು ರೈಫಲ್‌ಗಳ ಹುಚ್ಚು ಎಂದು ಹೇಳಿಕೊಂಡಿದ್ದರು.
ಪಾಟಿದಾರ್ ಅನಾಮತ್ ಆಂದೋಲನ ಸಮಿತಿ (ಪಿಎಎಎಸ್) ಮುಖ್ಯಸ್ಥರಾಗಿದ್ದ ಹಾರ್ದಿಕ್ ಪಟೇಲ್, ಯುವತಿ ಜತೆಗೆ ಸರಸ ಸಲ್ಲಾಪದಲ್ಲಿರುವ ವಿಡಿಯೋ ಕೂಡ 2017ರಲ್ಲಿ ವೈರಲ್ ಆಗಿತ್ತು.
ನಾನು ಇನ್ನೂ ಮದುವೆಯಾಗಬೇಕಿದೆ. ನಾನೇನು ನಪುಂಸಕನಲ್ಲ. ಬಿಜೆಪಿಯು ಕೆಳಮಟ್ಟದ ರಾಜಕಾರಣಕ್ಕೆ ಇಳಿದಿದೆ. ನನ್ನ ಹೆಸರು ಕೆಡಿಸಲು ಬಿಜೆಪಿ ಸೆಕ್ಸ್ ಸಿಡಿ ಬಿಡುಗಡೆ ಮಾಡಿದೆ ಎಂದು ದೂರಿದ್ದರು.
ಹಾರ್ದಿಕ್ ಪಟೇಲ್ ಮುಖ್ಯಸ್ಥರಾಗಿದ್ದ ಪಿಎಎಎಸ್‌ನಲ್ಲಿ ಸಂಚಾಲಕರಾಗಿದ್ದ ಬಿಜೆಪಿ ಮುಖಂಡ ವರುಣ್ ಪಟೇಲ್ ಅವರು ಹಾರ್ದಿಕ್ ಪಟೇಲ್ ಪಕ್ಷ ಸೇರ್ಪಡೆಗೆ ನೇರ ವಿರೋಧ ವ್ಯಕ್ತಪಡಿಸಿದ್ದರು. “ಹಾರ್ದಿಕ್ ಪಟೇಲ್ ವಿರುದ್ಧ ಬಿಜೆಪಿ ಕಾರ್ಯಕರ್ತರು ಸಾಕಷ್ಟು ಹೋರಾಟ ನಡೆಸಿದ್ದಾರೆ. ಇದು ಎರಡು ರಾಜಕೀಯ ಪಕ್ಷಗಳ ಜಗಳವಷ್ಟೇ ಆಗಿರಲಿಲ್ಲ. ಇದು ಬಹಳ ವೈಯಕ್ತಿಕ ವಿಚಾರ. ನಾವು ವೈಯಕ್ತಿಕ ದಾಳಿಗಳಿಗೆ ಒಳಗಾಗಿದ್ದೆವು. ಹೀಗಾಗಿ ಬಿಜೆಪಿಯ ತಳಮಟ್ಟದ ಕಾರ್ಯಕರ್ತರು, ಹಾರ್ದಿಕ್ ಪಟೇಲ್ ಬಿಜೆಪಿ ಸೇರುವುದನ್ನು ಇಷ್ಟಪಡುವುದಿಲ್ಲ” ಎಂದಿದ್ದರು. ಬಿಜೆಪಿ ಸೇರ್ಪಡೆಗೂ ಮುನ್ನ, ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಸೇರಿದಂತೆ ಪಕ್ಷದ ನಾಯಕರ ವಿರುದ್ಧ ಹಾರ್ದಿಕ್ ಪಟೇಲ್ ಈ ಹಿಂದೆ ನೀಡಿದ್ದ ಹೇಳಿಕೆಗಳು ಮತ್ತು ವಿಡಿಯೋಗಳು ಮತ್ತೆ ಚಾಲ್ತಿಗೆ ಬಂದಿವೆ. ಆದರೆ ಬಿಜೆಪಿ ಹಾಗೂ ಅದರ ನಾಯಕರ ವಿರುದ್ಧ ತಾವು ಮಾಡಿದ್ದ ಹಳೆಯ ಪೋಸ್ಟ್‌ಗಳನ್ನು ಅವರು ತಮ್ಮ ಖಾತೆಗಳಿಂದ ಡಿಲೀಟ್ ಮಾಡಿದ್ದಾರೆ. ಆದರೂ ಈ ಬಗೆಗಿನ ಚರ್ಚೆ ಮಾತ್ರ ನಿಂತಿಲ್ಲ.