ಬೆಂಗಳೂರು.ಜ.7: ಕರ್ನಾಟಕದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅತ್ಯಧಿಕ ಸ್ಥಾನಗಳನ್ನು ಗೆಲ್ಲಬೇಕೆಂದು ರಣತಂತ್ರ ಒಪ್ಪಿಸುತ್ತಿರುವ ಬಿಜೆಪಿ ನಾಯಕರು ಇದೀಗ ಒಕ್ಕಲಿಗ ಸಮುದಾಯದ ಮತಗಳನ್ನು ಸೆಳೆಯಲು ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ.
ಹಳೆ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿ ಸಂಘಟನೆಗೆ ಮಾಡಿದ ಪ್ರಯತ್ನಗಳು ನಿರೀಕ್ಷಿತ ಪ್ರಮಾಣದಲ್ಲಿ ಫಲಿತಾಂಶ ನೀಡದ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ನಾಯಕತ್ವ ಇದೀಗ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದೆ. ಇದನ್ನು ಮತ್ತಷ್ಟು ಬಲಯುತಗೊಳಿಸಲು ನಿರ್ಧರಿಸಿದ್ದು,ಇದೀಗ ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ನಾಯಕ ಕುಮಾರಸ್ವಾಮಿ (HD Kumaraswamy) ಅವರಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ನೀಡಲು ಚಿಂತನೆ ನಡೆಸಿದೆ.
ಈ ಮೂಲಕ, ಒಕ್ಕಲಿಗ ಪ್ರಾಬಲ್ಯವಿರುವ ಪ್ರದೇಶದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ರಾಜ್ಯದ ಆಡಳಿತ ರೂಡ ಕಾಂಗ್ರೆಸ್ ಪಕ್ಷವನ್ನು ಯಶಸ್ವಿಯಾಗಿ ಕಟ್ಟಿ ಹಾಕಬಹುದು ಎಂಬ ಲೆಕ್ಕಾಚಾರ ಮಾಡಿದೆ.ಈ ಹಿನ್ನೆಲೆಯಲ್ಲಿ ಸದ್ಯದಲ್ಲೇ ನಡೆಯಲಿರುವ ಕೇಂದ್ರ ಸಂಪುಟ ವಿಸ್ತರಣೆಯಲ್ಲಿ ಕುಮಾರಸ್ವಾಮಿ ಅವರಿಗೆ ಸ್ಥಾನ ನೀಡುವ ಸಾಧ್ಯತೆಯಿದೆ.
ಈ ಕುರಿತಂತೆ ಕೇಂದ್ರ ಸಚಿವ ಅರ್ಜುನ್ ಮುಂಡಾ ಹಾಗೂ ಪಿಯೂಷ್ ಗೋಯಲ್ ಅವರು ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ದೇವೇಗೌಡ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಕುಮಾರಸ್ವಾಮಿ ಕೇಂದ್ರ ಸಂಪುಟ ಸೇರಲು ಸಮ್ಮತಿಸಿದ್ದಾರೆ.ಆದರೆ ತಮಗೆ ಕೃಷಿ ಖಾತೆಯ ಜವಾಬ್ದಾರಿ ನೀಡಬೇಕು ಎಂದು ಮನವಿ ಮಾಡಿದ್ದಾರೆ ಎಂದು ಗೊತ್ತಾಗಿದೆ
ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕೃಷಿ ಮತ್ತು ರೈತ ಕಲ್ಯಾಣ ಖಾತೆ ಸಚಿವ ನರೇಂದ್ರ ಸಿಂಗ್ ತೋಮರ್, ಗೆದ್ದ ಬಳಿಕ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ಬಳಿಕ, ಸಂಪುಟ ದರ್ಜೆಯ ಖಾತೆ ಖಾಲಿ ಇದೆ. ಕೃಷಿ ಖಾತೆಯ ಬಗ್ಗೆ ಕುಮಾರಸ್ವಾಮಿ ಒಲವು ಹೊಂದಿದ್ದು, ಸಂಪುಟಕ್ಕೆ ಸೇರಿದರೆ ಅದೇ ಖಾತೆ ಸಿಗುವ ಸಂಭವ ಇದೆ ಎಂಬ ಚರ್ಚೆಯೂ ನಡೆದಿದೆ. ಕೃಷಿ ಖಾತೆ ರಾಜ್ಯ ಸಚಿವರಾಗಿ ರಾಜ್ಯದವರೇ ಆದ ಶೋಭಾ ಕರಂದ್ಲಾಜೆ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.
ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಏರ್ಪಟ್ಟ ನಂತರ ಎನ್.ಡಿ.ಎ. ಮೈತ್ರಿಕೂಟದ ಭಾಗವಾಗಿ
ವಿಧಾನಸಭೆ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಕುಮಾರಸ್ವಾಮಿ ಅವರನ್ನು ಕೂರಿಸುವ ಇಂಗಿತ ಪ್ರಧಾನಿ ಮೋದಿ ಅವರದ್ದಾಗಿತ್ತು. ‘ಎರಡು ಬಾರಿ ಮುಖ್ಯಮಂತ್ರಿ, ಒಮ್ಮೆ ವಿರೋಧ ಪಕ್ಷದ ನಾಯಕನಾಗಿ ಕೆಲಸ ಮಾಡಿದ್ದೇನೆ. ಮತ್ತೆ ವಿರೋಧ ಪಕ್ಷದ ನಾಯಕ ಸ್ಥಾನ ಬೇಡ. ಕೇಂದ್ರ ಸಂಪುಟಕ್ಕೆ ಸೇರಿಸಿಕೊಳ್ಳಿ’ ಎಂದು ಕುಮಾರಸ್ವಾಮಿ, ಬಿಜೆಪಿ ವರಿಷ್ಠರಿಗೆ ಹೇಳಿದ್ದರು. ಆ ಸಂದರ್ಭದಲ್ಲಿ, ಬಿಜೆಪಿ ನಾಯಕರು ಅದಕ್ಕೆ ಒಪ್ಪಿಗೆ ಸೂಚಿಸಿರಲಿಲ್ಲ.
ನಂತರದ ಬೆಳವಣಿಗೆಯಲ್ಲಿ, ಎನ್‌ಡಿಎ ಮೈತ್ರಿಕೂಟದ ಭಾಗವಾಗಿರಲು ಜೆಡಿಎಸ್ ನಿರ್ಣಯ ಕೈಗೊಂಡಿತ್ತು. ಎಚ್.ಡಿ. ದೇವೇಗೌಡರು ಕುಟುಂಬ ಸಮೇತರಾಗಿ ಪ್ರಧಾನಿ ಮೋದಿ ಅವರನ್ನು ಇತ್ತೀಚೆಗೆ ಭೇಟಿಯಾಗಿದ್ದರು. ಅದಾದ ಬಳಿಕ, ಹೊಸ ರಾಜಕೀಯ ಬೆಳವಣಿಗೆಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ.
ALSO READ | Latest Kannada News | Kannada News