ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ರೈಲು ಹಳಿಗಳ ಮೇಲೆ ಗುಡ್ಡ ಕುಸಿತಗೊಂಡಿದೆ.ಮಂಗಳೂರು ಹೊರವಲಯದ ಪಡೀಲು ಬಳಿ ರೈಲು ಹಳಿಗಳ ಮೇಲೆ ಗುಡ್ಡ ಕುಸಿತಗೊಂಡಿದೆ. ಹೀಗಾಗಿ, ರೈಲ್ವೆ ಇಲಾಖೆ ಎರಡು ರೈಲುಗಳ ಸಂಚಾರ ಸ್ಥಗಿತಗೊಳಿಸಿದೆ. ಮಂಗಳೂರು-ಸುಬ್ರಹ್ಮಣ್ಯ ಮಾರ್ಗದ ಎರಡು ವಿಶೇಷ ರೈಲು (06488 ಮತ್ತು 06489) ಸಂಚಾರ ಸ್ಥಗಿತಗೊಳಿಸಲಾಗಿದ್ದು, ಗುಡ್ಡ ತೆರವು ಕಾರ್ಯಾಚರಣೆ ಮುಂದುವರೆದಿದೆ. ಇನ್ನು ಉಡುಪಿ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಕಡಲ ಅಲೆಗಳ ಅಬ್ಬರ ಹೆಚ್ಚಾಗಿದೆ. ಅಲೆಗಳ ಅಬ್ಬರಕ್ಕೆ ದಡಕ್ಕೆ ಹಾಕಿದ ಕಲ್ಲುಗಳು ಕೊಚ್ಚಿಕೊಂಡು ಸಮುದ್ರ ಸೇರುತ್ತಿವೆ. ಹಲವೆಡೆ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.