ಬೆಂಗಳೂರು, ಫೆ.22- ಈ ಬಾರಿ ರಾಜ್ಯದಲ್ಲಿ ಅತ್ಯಧಿಕ ಸಂಸದರನ್ನು ಆಯ್ಕೆ ಮಾಡಬೇಕೆಂದು ಪಣತೊಟ್ಟಿರುವ ಕಾಂಗ್ರೆಸ್ ಪಕ್ಷ ಇದೀಗ ಬೆಳಗಾವಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಅವರ ಪುತ್ರ ಮಋಣಆಲ್ ಅವರನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸಿದೆ.
ಬೆಳಗಾವಿಯ ಎರಡು ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಜಿಲ್ಲೆಯ ಎಲ್ಲಾ ಶಾಸಕರು ಮತ್ತು ಮಂತ್ರಿಗಳು ಒಟ್ಟಾಗಿ ಕುಳಿತು ಒಮ್ಮತದ ನಿರ್ಧಾರ ಕೈಗೊಂಡು ತಮಗೆ ತಿಳಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೂಚನೆ ನೀಡಿದ್ದರು.
ಈ ಹಿನ್ನಲೆಯಲ್ಲಿ ಕಳೆದ ರಾತ್ರಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಸಭೆ ಸೇರಿದ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಶಾಸಕರು ಮತ್ತು ಪ್ರಮುಖ ನಾಯಕರು ಚಿಕ್ಕೋಡಿ ಮತ್ತು ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಬೇಕಾದರೆ ಯಾವ ರೀತಿಯ ರಣತಂತ್ರ ರೂಪಿಸಬೇಕು ಎಂದು ಚರ್ಚಿಸಿದ್ದಾರೆ.
ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಹೈಕಮಾಂಡ್ ನಡೆಸಿರುವ ಎರಡು ಸಮೀಕ್ಷಾ ವರದಿಗಳ ವಿವರಗಳ ಬಗ್ಗೆ ಪ್ರಮುಖವಾಗಿ ಚರ್ಚೆ ನಡೆಸಲಾಗಿದೆ.
ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವ ಸಾಧ್ಯತೆಗಳು ಹೆಚ್ಚಾಗಿವೆ ಆದರೆ ಇದಕ್ಕಾಗಿ ಜಿಲ್ಲೆಯ ಪಕ್ಷದ ಎಲ್ಲ ಜನಪ್ರತಿನಿಧಿಗಳು ಮತ್ತು ಪ್ರಮುಖ ನಾಯಕರು ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದು ಸಮೀಕ್ಷಾ ವರದಿಗಳು ತಿಳಿಸಿವೆ.
ಈ ವರದಿಗಳನ್ನು ಉಲ್ಲೇಖಿಸಿ ಮಾತನಾಡಿದ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಎರಡು ಕ್ಷೇತ್ರಗಳಲ್ಲಿ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕಾಗಿದೆ. ಆಗ ಮಾತ್ರ ಬಿಜೆಪಿಯನ್ನು ಹಿಮ್ಮಟ್ಟಿಸಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ವಿವರಿಸಿರುವದಾಗಿ ಗೊತ್ತಾಗಿದೆ.
ಬೆಳಗಾವಿಯಲ್ಲಿ ವೀರಶೈವ ಪಂಚಮಸಾಲಿ ಸಮುದಾಯಕ್ಕೆ ಸೇರಿದವರಿಗೆ ಟಿಕೆಟ್ ನೀಡಬೇಕು ಅದೇ ರೀತಿ ಚಿಕ್ಕೋಡಿ ಕ್ಷೇತ್ರದಲ್ಲಿ ವೀರಶೈವರಿಗೆ ಟಿಕೆಟ್ ನೀಡಿದರೆ ಅನುಕೂಲವಾಗಲಿದೆ ಆದರೂ ಕೂಡ ಈ ಕ್ಷೇತ್ರದಿಂದ ಸಚಿವ ಸತೀಶ್ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕ ಕಣಕ್ಕಿಳಿದರೆ ಗೆಲುವು ಸುಲಭವಾಗಿದೆ ಎಂದು ಚರ್ಚಿಸಲಾಗಿದೆ.
ಈ ಕ್ಷೇತ್ರವನ್ನು ಹಿಂದುಳಿದ ಕುರುಬ ಸಮುದಾಯಕ್ಕೆ ಬಿಟ್ಟುಕೊಡಬೇಕು ಈ ನಿಟ್ಟಿನಲ್ಲಿ ಸಮುದಾಯದ ಪ್ರಮುಖ ನಾಯಕರಾದ ಚಿಂಗಳೆ ಅವರನ್ನು ಕಣಕ್ಕಿಳಿಸಬೇಕು ಎಂದು ಸತೀಶ್ ಜಾರಕಿಹೊಳಿ ಹೇಳಿದರಾದರು ಅದಕ್ಕೆ ಲಕ್ಷ್ಮಣ ಸವದಿ ಅವರು ವಿರೋಧ ವ್ಯಕ್ತಪಡಿಸಿದ್ದಾರೆ ಈ ಸಭೆಯಲ್ಲಿ ಹಾಜರಿದ್ದ ಚಿಂಗಳೆ ಅವರ ಸಮ್ಮುಖದಲ್ಲಿಯೇ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ ಸವದಿ ಅವರು ಬಿಜೆಪಿಗೆ ತಕ್ಕ ಎದುರಾಳಿ ಕಣಕ್ಕಿಳಿಯಬೇಕು ಈ ನಿಟ್ಟಿನಲ್ಲಿ ಜಾರಕಿಹೊಳಿ ಅವರ ಪುತ್ರಿ ಸೂಕ್ತ ಅಭ್ಯರ್ಥಿ ಚಿಂಗಳೇ ಅವರಿಗೆ ಪಕ್ಷ ಉನ್ನತ ಸ್ಥಾನಮಾನ ನೀಡಿ ಗೌರವಿಸಬೇಕು ಎಂದು ಹೇಳಿದ್ದಾರೆ.
ಅದೇ ರೀತಿ ಬೆಳಗಾವಿ ಕ್ಷೇತ್ರಕ್ಕೆ ಮಂತ್ರಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಪುತ್ರ ಕಣಕ್ಕಿಳಿದರೆ ಮಾತ್ರ ಕಾಂಗ್ರೆಸ್ ಗೆಲ್ಲಲು ಸಾಧ್ಯವಾಗಲಿದೆ ಇದು ಜಿಲ್ಲೆಯ ಎಲ್ಲ ಶಾಸಕರ ಒಮ್ಮತದ ಅಭಿಪ್ರಾಯವಾಗಿದ್ದು ಇಬ್ಬರು ಮಂತ್ರಿಗಳು ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು ಎಂದು ಸವದಿ ಸಭೆಗೆ ತಿಳಿಸಿದರು ಎನ್ನಲಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕ್ಷೇತ್ರ ವ್ಯಾಪ್ತಿಗೆ ಬರುವ ಅರಭಾವಿ ಮತ್ತು ಗೋಕಾಕ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಹೆಚ್ಚಿನ ಮತ ತಂದು ಕೊಡುವುದಾಗಿ ಸತೀಶ್ ಜಾರಕಿಹೊಳಿಯವರು ಭರವಸೆ ನೀಡಿದರೆ ತಮ್ಮ ಪುತ್ರನನ್ನು ಕಣಕ್ಕಿಳಿಸಲು ಸಿದ್ಧ ಎಂದು ಹೇಳಿದರೆನ್ನಲಾಗಿದೆ.
ಇದಕ್ಕೆ ಸತೀಶ್ ಜಾರಕಿಹೊಳಿ ಅವರು ಸಹಮತ ವ್ಯಕ್ತಪಡಿಸಿದ್ದು ಕ್ಷೇತ್ರದ ಎಲ್ಲ ಮುಖಂಡರು ಕಾಂಗ್ರೆಸ್ ಅಭ್ಯರ್ಥಿಯ ಪರ ಕೆಲಸ ಮಾಡಲಿದ್ದಾರೆ ಎಂಬ ಭರವಸೆ ನೀಡಿದ್ದಾರೆ ಆದರೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ತಮ್ಮ ಪುತ್ರಿ ಪ್ರಿಯಾಂಕ ಅವರನ್ನು ಕಣಕ್ಕಿಳಿಸುವ ಕುರಿತಂತೆ ಸ್ವಲ್ಪ ಸಮಯದ ನಂತರ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು ಎಂದು ಉನ್ನತ ಮೂಲಗಳು ತಿಳಿಸಿವೆ.
ಈ ಸಂಬಂಧ ಸೋಮವಾರ ಮತ್ತೊಮ್ಮೆ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಶಾಸಕರು ಮತ್ತು ಪ್ರಮುಖ ನಾಯಕರು ಸಭೆ ಸೇರಿ ತಮ್ಮ ಅಂತಿಮ ನಿರ್ಧಾರವನ್ನು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳಿಗೆ ತಿಳಿಸಲಿದ್ದಾರೆ ಎಂದು ಗೊತ್ತಾಗಿದೆ.