ಬೆಂಗಳೂರು, ಜ.29: ಮುಂಬರುವ ಲೋಕಸಭಾ ಚುನಾವಣೆಯು ಅತ್ಯಧಿಕ ಸ್ಥಾನಗಳಿಸಬೇಕೆಂದು ಮಾಡಿಕೊಂಡಿರುವ ರಾಜ್ಯದ ಎನ್ ಡಿ ಎ ಮೈತ್ರಿಕೂಟದ ಮೊದಲ ಅಭ್ಯರ್ಥಿ ಚುನಾವಣೆ ಅಖಾಡಕ್ಕೆ ಧುಮುಕುವ ಮೂಲಕ ಗಮನ ಸೆಳೆದಿದ್ದಾರೆ.
ಫೆಬ್ರವರಿ16 ರಂದು ನಡೆಯಲಿರುವ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಗೆ ಎನ್ ಡಿ ಎ ಅಭ್ಯರ್ಥಿಯಾಗಿ ಜೆಡಿಎಸ್ ಎ.ಪಿ.ರಂಗನಾಥ್ ಬಿಜೆಪಿ ಹಾಗೂ ಜೆಡಿಎಸ್ (JDS) ಮುಖಂಡರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ವಿಧಾನ ಪರಿಷತ್ʼಗೆ ನಡೆಯಲಿರುವ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಣಕ್ಕಿಳಿಯಲು ಜೆಡಿಎಸ್ ಎಲ್ಲಾ ಸಿದ್ಧತೆ ನಡೆಸಿತ್ತು. ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ.ರಂಗನಾಥ್ ಮತದಾರರ ನೊಂದಣಿ ಸೇರಿ ಎಲ್ಲಾ ತಯಾರಿ ನಡೆಸಿದ್ದರು.
ಈ ನಡುವೆ ಬಿಜೆಪಿ ಕೂಡ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸಿದ್ದತೆ ನಡೆಸಿತ್ತು. ವಿಧಾನ ಪರಿಷತ್ ಮಾಜಿ ಸದಸ್ಯ ಅಶ್ವಥ್ ನಾರಾಯಣ, ಅಥವಾ ಯುವ ಮುಖಂಡ ಸಪ್ತಗಿರಿ ರಾಮಚಂದ್ರ ಗೌಡ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿತ್ತು.
ಈ ವೇಳೆ ಹಠಾತ್ ಮಧ್ಯಪ್ರವೇಶಿಸಿದ ಕುಮಾರಸ್ವಾಮಿ ಬಿಜೆಪಿ ನಾಯಕರ ಜೊತೆ ಮಾತುಕತೆ ನಡೆಸಿ ಗೊಂದಲ ಬಗೆಹರಿಸಿದರು.
ಇದೀಗ ಈ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಡಲಾಗಿದ್ದು, ಇದೀಗ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾದ ಎ.ಪಿ.ರಂಗನಾಥ್ ಚುನಾವಣಾಧಿಕಾರಿಗಳು ಹಾಗೂ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.
ಈ ವೇಳೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿ ಹಿರಿಯ ನಾಯಕ ಅಶ್ವತ್ಥನಾರಾಯಣ ಅವರು,ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡರು ಉಪಸ್ಥಿತರಿದ್ದರು.