ಬೆಂಗಳೂರು,ಅ.10:
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಕರ್ಮಕಾಂಡ ಆರೋಪದ ಬೆನ್ನಲ್ಲೇ ಬಹು ಚರ್ಚಿತವಾಗುತ್ತಿರುವ ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ಕಾಂಗ್ರೆಸ್ ಹೈಕಮಾಂಡ್ ಚುಚ್ಚುಮದ್ದು ನೀಡಿದೆ.
ಇನ್ನು ಮುಂದೆ ರಾಜ್ಯದ ಯಾವುದೇ ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಮಾತನಾಡಿದರೆ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಹೈಕಮಾಂಡ್ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಸೂಚನೆ ನೀಡಿದೆ.
ಇದಷ್ಟೇ ಅಲ್ಲದೆ ಇನ್ನು ಮುಂದೆ ಮಂತ್ರಿಗಳು ಮತ್ತು ಶಾಸಕರು ಉಪಹಾರ ಇಲ್ಲವೇ ಔತಣಕೂಟದ ಹೆಸರಿನಲ್ಲಿ ಸಭೆ ಸೇರಿ ನಾಯಕತ್ವ ಬದಲಾವಣೆ ಕುರಿತಂತೆ ಮಾತುಕತೆ ನಡೆಸುವ ವಿದ್ಯಮಾನಗಳಿಗೆ ಪೂರ್ಣ ವಿರಾಮ ಹಾಕುವಂತೆ ತಾಕೀತು ಮಾಡಿದೆ.
ಸಂಪುಟ ಸಭೆಯಲ್ಲಿ ಈ ವಿಷಯ ತಿಳಿಸಿದ ಸಿಎಂ ಮತ್ತು ಡಿಸಿಎಂ ಇತ್ತೀಚಿನ ದಿನಗಳಲ್ಲಿ ಕೆಲವರು ಪ್ರತ್ಯೇಕವಾಗಿ ಸಭೆ ನಡೆಸುತ್ತಿರುವ ವಿಚಾರಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು ಎನ್ನಲಾಗಿದೆ.
ಮುಖ್ಯಮಂತ್ರಿ ಬದಲಾವಣೆ ಹಾಗೂ ದಲಿತ ಮುಖ್ಯಮಂತ್ರಿ ವಿಚಾರ ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಚರ್ಚೆಯಾಗುತ್ತಿದೆ ಇದು ಕಾಂಗ್ರೆಸ್ಸಿನಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಸಂದೇಶವನ್ನು ರವಾನಿಸಿದಂತಾಗುತ್ತಿದೆ ಹೀಗಾಗಿ ಇದರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಹೈಕಮಾಂಡ್ ನಾಯಕರು, ತಮಗೆ ಸೂಚಿಸಿರುವದಾಗಿ ತಿಳಿಸಿದರು ಎಂದು ಮೂಲಗಳು ತಿಳಿಸಿವೆ.
ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ತಮ್ಮೊಂದಿಗೆ ಮಾತನಾಡಿದ್ದು ಉಪಹಾರ ಮತ್ತು ಔತಣಕೂಟದ ಹೆಸರಿನಲ್ಲಿ ರಾಜಕೀಯ ಸಭೆ ನಡೆಸುವ ಸಚಿವರನ್ನು ಮಂತ್ರಿಮಂಡಲದಿಂದ ಕೈಬಿಡುವಂತೆ ಸೂಚಿಸಿದ್ದಾರೆ ಎಂದು ಈ ನಾಯಕರು ಸಭೆಗೆ ವಿವರಿಸಿದರು ಎಂದು ಗೊತ್ತಾಗಿದೆ.
ನಾಯಕತ್ವ ಬದಲಾವಣೆ ವಿಚಾರವಾಗಿ ನಡೆಯುತ್ತಿರುವ ಸಭೆಗಳು ತಕ್ಷಣವೇ ನಿಲ್ಲಬೇಕು ಎಂದು ಟಾಕೀಟು ಮಾಡಿದ ಈ ಇಬ್ಬರು ನಾಯಕರು ಮಂತ್ರಿಗಳು ರಾಜಕೀಯ ಸಭೆಗಳನ್ನು ಬಿಟ್ಟು ಅಭಿವೃದ್ಧಿ ಯೋಜನೆಗಳನ್ನು ಗಮನಹರಿಸಬೇಕು ತಮ್ಮ ಇಲಾಖೆಯಲ್ಲಿ ಈ ಹಿಂದೆ ಬಿಜೆಪಿ ಆಡಳಿತ ಇದ್ದ ಸಮಯದಲ್ಲಿ ನಡೆದ ಅಕ್ರಮಗಳ ಬಗ್ಗೆ ಗಮನಹರಿಸಿ ಆ ಕುರಿತು ಕ್ರಮಕ್ಕೆ ಮುಂದಾಗಬೇಕು ಎಂದು ಸೂಚಿಸಿರುವುದಾಗಿ ತಿಳಿದುಬಂದಿದೆ.
ರಾಜ್ಯ ಕಾಂಗ್ರೆಸ್ ಗೆ ಹೈಕಮಾಂಡ್ ಚುಚ್ಚುಮದ್ದು.
Previous Articleಕೋವಿಡ್-19 ಅವ್ಯವಹಾರ – ಡಿಸಿಎಂ ಡಿ.ಕೆ.ಶಿ ನೇತೃತ್ವದಲ್ಲಿ ಉಪಸಮಿತಿ ರಚನೆ
Next Article ಅಕ್ಟೋಬರ್ 11 ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನ