ಉಡುಪಿ,ಜು.29-
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಮಾದರಿಯಲ್ಲಿ ತಂಡ ಕಟ್ಟಿಕೊಂಡು ಬಂದ ಅಪರಿಚಿತ ದುಷ್ಕರ್ಮಿಗಳು ಮನೆಯ ಲೂಟಿಗೆ ಯತ್ನಿಸಿ ವಿಫಲವಾದ ಘಟನೆ ಉಡುಪಿ ಜಿಲ್ಲೆಯಬ್ರಹ್ಮಾವರ ತಾಲೂಕಿನ ಮಣೂರಿನಲ್ಲಿ ನಡೆದಿದೆ
ಮನೆಗೆ ಅಳವಡಿಸಿದ್ದ ಸೈನ್ ಇನ್ ಸೆಕ್ಯುರಿಟಿ ಸಂಸ್ಥೆಯ ಲೈವ್ ಸರ್ವೈಲೆನ್ಸ್ ತಕ್ಷಣ ಅಲರ್ಟ್ ನೀಡಿದ ಪರಿಣಾಮ ಮನೆಯವರು ಬಾಗಿಲು ತೆಗೆಯದೇ ಮುಂಜಾಗ್ರತೆ ವಹಿಸಿದ್ದಾರೆ ಇದರಿಂದ ಸಂಭಾವ್ಯ ದರೋಡೆಯಿಂದ ಪಾರಾಗಿದ್ದಾರೆ.
ಮಣೂರಿನ ಕವಿತಾ ಅವರ ಮನೆಗೆ ಅಪರಿಚಿತ ದುಷ್ಕರ್ಮಿಗಳು ಎರಡು ಇನ್ನೋವಾ ಹಾಗೂ ಸ್ವಿಫ್ಟ್ ಕಾರುಗಳಲ್ಲಿ ಸರ್ಕಾರಿ ಅಧಿಕಾರಿಗಳಂತೆ ಆಗಮಿಸಿದ್ದಾರೆ.
ಅದೂ ಜುಲೈ 25ರ ಬೆಳಗ್ಗೆ 8.30ರ ವೇಳೆಗೆ.ಇಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದಾಗ ಹಾಗೂ ಯಾರೂ ಇಲ್ಲದ ಸಮಯ ನೋಡಿ ತಂಡ ಆಗಮಿಸಿತ್ತು. ಗೇಟ್ ತಳ್ಳಿ ತೆರೆಯಲು ಯತ್ನಿಸಿ, ಅದು ತೆರೆದುಕೊಳ್ಳದೆ ಇದ್ದಾಗ ಮುರಿಯಲು ನೋಡಿದ್ದಾರೆ.
ಗೇಟ್ ತೆರೆಯದೆ ಇದ್ದಾಗ ಇನ್ನೊಂದು ಕಡೆಯಿಂದ ಕಂಪೌಂಡ್ ಜಿಗಿದು ಆವರಣ ಪ್ರವೇಶಿಸಿ ಬಾಗಿಲು ಬಡಿದು ಮನೆಯವರನ್ನು ಕರೆದಿದ್ದಾರೆ. ಆದರೆ ಈ ಮನೆಗೆ ಸೈನ್ ಇನ್ ಸೆಕ್ಯುರಿಟಿ ಸಂಸ್ಥೆಯ ಲೈವ್ ಸರ್ವೈಲೆನ್ಸ್ ಅಳವಡಿಸಿದ್ದ ಕಾರಣ, ಸಂಸ್ಥೆಯವರು ಕೂಡಲೇ ಮನೆ ಮಾಲಕಿಗೆ ಅಲರ್ಟ್ ನೀಡಿದ್ದಾರೆ. ಯಾರೋ ಅಕ್ರಮವಾಗಿ ಕೌಂಪೌಂಡ್ ಪ್ರವೇಶಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಎಚ್ಚೆತ್ತುಕೊಂಡ ಮಾಲಕಿ ಬಾಗಿಲು ತೆರೆದಿಲ್ಲ. ಸ್ವಲ್ಪ ಹೊತ್ತು ಕಾದು ತಂಡ ವಾಪಾಸು ಹೋಗಿದೆ.
ಸಿಸಿಟಿವಿಯಲ್ಲಿ ಅಪರಿಚಿತ ತಂಡದ ಕೃತ್ಯದ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಕುಂದಾಪುರ ವ್ಯಾಪ್ತಿಯಲ್ಲಿ ಹಲವು ಕಳ್ಳತನಗಳನ್ನು ಸೈನ್ ಇನ್ ಸೆಕ್ಯೂರಿಟಿ ವಿಫಲಗೊಳಿಸಿದೆ.
ಇದು ಸಿಸಿಟಿವಿ ಅಳವಡಿಸಿರುವ ಮನೆಗೆ 24 ಗಂಟೆಯೂ ಭದ್ರತೆ ನೀಡುತ್ತದೆ. ಯಾವುದಾದ್ರೂ ಅನಪೇಕ್ಷಿತ ಬೆಳವಣಿಗೆ ಕಂಡರೆ ಅಲರ್ಟ್ ಮಾಡುತ್ತದೆ.
ಸುಮಾರು 6-8 ಜನರು ಇದ್ದ ಈ ದುಷ್ಕರ್ಮಿಗಳ ಟೀಮ್‌ನಲ್ಲಿ ಎಲ್ಲರೂ ಟಿಪ್‌ಟಾಪಾಗಿ ದಿರಿಸು ತೊಟ್ಟಿದ್ದರು. ಅವರಲ್ಲಿ ಒಬ್ಬಾತ ಪೊಲೀಸ್ ಪೇದೆಯಂತೆ ಡ್ರೆಸ್ ಧರಿಸಿದ್ದ. ಸಿಸಿಟಿವಿಯಲ್ಲಿ ಮುಖ ಕಾಣದಂತೆ ನೋಡಿಕೊಳ್ಳಲು ಇವರು ಯತ್ನಿಸಿದ್ದಾರೆ. ಮನೆ ಮಾಲಕಿ ಕವಿತಾ ಅವರು ಈ ಬಗ್ಗೆ ದೂರು ನೀಡಿದ್ದು, ಕೋಟ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
Previous Articleಕುಮಾರಸ್ವಾಮಿ ಶೀಘ್ರದಲ್ಲಿ ಸಿಎಂ ಆಗುತ್ತಾರಂತೆ.
Next Article Peenya ಫ್ಲೈ ಓವರ್ ಸಂಚಾರಕ್ಕೆ ಮುಕ್ತ.