ಬೆಂಗಳೂರು, ಮೇ6- ಕರ್ನಾಟಕದಲ್ಲಿ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿಯಬೇಕಾದರೆ ರಾಜಧಾನಿ ಬೆಂಗಳೂರಿನಲ್ಲಿ ಅತಿಹೆಚ್ಚು ಕ್ಷೇತ್ರಗಳನ್ನು ಗೆಲ್ಲಬೇಕೆಂದು ರಣತಂತ್ರ ರೂಪಿಸಿರುವ ಬಿಜೆಪಿ, ಪ್ರಧಾನಿ ನರೇಂದ್ರಮೋದಿ ಮೂಲಕ ಮೆಗಾ ರೋಡ್ ಶೋ ನಡೆಸಿ ಪಕ್ಷದ ಪರ ಅಲೆ ಎಬ್ಬಿಸುವ ಪ್ರಯತ್ನ ನಡೆಸಿತು
ಗುಜರಾತ್‍ನಲ್ಲಿ ಈ ಹಿಂದೆ ವಿಧಾನಸಭೆ ಚುನಾವಣೆ ವೇಳೆ ಮೋದಿ ಅವರು ಅಹಮದಾಬಾದ್‍ನಿಂದ ಗಾಂಧಿನಗರದವರೆಗೆ 50 ಕಿ.ಮೀ ರೋಡ್ ಶೋ ನಡೆಸಿದ ನಂತರ ಬೆಂಗಳೂರಿನಲ್ಲಿ ಇಂದು ನಡೆಸಿದ 2ನೇ ಅತಿದೊಡ್ಡ ರೋಡ್ ಶೋ ಇದಾಗಿದೆ ಎಂದು ಬಿಜೆಪಿ ವ್ಯಾಖ್ಯಾನಿಸಿದೆ.
ಬೆಳಗ್ಗೆ 10.20ಕ್ಕೆ ಸರಿಯಾಗಿ ಜೆಪಿನಗರ ಕೋಣನಕುಂಟೆ ಬಳಿಯ ಶ್ರೀ ಸೋಮೇಶ್ವರ ಸಭಾಭವನದಿಂದ ರೋಡ್ ಶೋ ಆರಂಭವಾಯಿತು. ಅಲ್ಲಿಂದ ಜೆಪಿನಗರ 5ನೇ ಹಂತ, ಜಯನಗರ 5ನೇ ಬ್ಲಾಕ್, ಜಯನಗರ 4ನೇ ಬ್ಲಾಕ್, ಸೌತ್‍ಎಂಡ್ ಸರ್ಕಲ್, ಮಾಧವರಾವ್ ವೃತ್ತ, ರಾಮಕೃಷ್ಣ ಆಶ್ರಮ, ಉಮಾ ಥಿಯೇಟರ್ ಸಿಗ್ನಲ್, ಮೈಸೂರು ಬ್ಯಾಂಕ್ ಸಿಗ್ನಲ್, ಟೋಲ್ಗೇಟ್ ಸಿಗ್ನಲ್, ಗೋವಿಂದರಾಜನಗರ, ಮಾಗಡಿ ರೋಡ್ ಜಂಕ್ಷನ್, ಶಂಕರಮಠ ಚೌಕ, ಮಲ್ಲೇಶ್ವರಂ ವೃತ್ತ, 18ನೇ ಅಡ್ಡರಸ್ತೆ ಜಂಕ್ಷನ್, ಸಂಪಿಗೆ ರಸ್ತೆ ಹೀಗೆ ಒಟ್ಟು ಸುಮಾರು 28 ಕಿಲೋಮೀಟರ್ ರೋಡ್ ಶೋ ನಡೆಸಿದರು.
ರೋಡ್ ಶೋ ಗಾಗಿ ರಾಜ್ಯ ಬಿಜೆಪಿ ಕಾರ್ಯಕರ್ತರು ಮತ್ತು ಪೊಲೀಸ್ ಇಲಾಖೆ ಸಾಕಷ್ಟು ತಯಾರಿ ನಡೆಸಿದ್ದರು. ಪ್ರಧಾನಿ ಅವರಿಗೆ ಝೆಡ್ ಪ್ಲಸ್ ಶ್ರೇಣಿಯ ಭದ್ರತೆ ಇರುವ ದೃಷ್ಟಿಯಿಂದ ರೋಡ್ ಶೋ ಸಾಗಿ ಬರುವ ರಸ್ತೆಯ ಇಕ್ಕೆಲ ಗಳಲ್ಲಿದ್ದ ಸುಮಾರು 2000ಕ್ಕೂ ಅಧಿಕ ಮರಗಳ ರೆಂಬೆ ಕೊಂಬೆಗಳನ್ನು ಕತ್ತರಿಸಿ ಹಾಕಲಾಯಿತು.
ರೋಡ್ ಶೋ ಸಾಗಿ ಬರುವ ರಸ್ತೆಯಲ್ಲಿನ ಆಪ್ಟಿಕಲ್ ಫೈಬರ್ ಕೇಬಲ್ ಗಳನ್ನು ತೆರವು ಮಾಡಲಾಯಿತು ಪ್ರಧಾನಿ ಅವರ ಯಾತ್ರೆ ಸಾಗಿ ಬರುವ ರಸ್ತೆಯಲ್ಲಿ ಬೆಳಗಿನಿಂದ ಮಧ್ಯಾಹ್ನದವರೆಗೆ ವಾಹನ ಸಂಚಾರದ ಮೇಲೆ ನಿರ್ಬಂಧ ವಿಧಿಸಲಾಗಿತ್ತು ವಾಹನ ನಿಲುಗಡೆ ಸಂಪೂರ್ಣ ರದ್ದುಪಡಿಸಲಾಗಿತ್ತು ಹೋಟೆಲ್ ಸೇರಿದಂತೆ ಎಲ್ಲಾ ರೀತಿಯ ವಾಣಿಜ್ಯ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಲಾಗಿತ್ತು ಹೀಗಾಗಿ ಬೆಳಗ್ಗೆ ಈ ಪ್ರದೇಶದಲ್ಲಿ ಅಂಗಡಿ ಮುಂಗಟ್ಟುಗಳೆಲ್ಲಾ ಬಂದ್ ಆಗಿದ್ದವು. ಜನಸಾಮಾನ್ಯರ ಹೋರಾಟದ ಮೇಲೆ ಸಂಪೂರ್ಣ ನಿಯಂತ್ರಣ ಹೇರಲಾಗಿತ್ತು. ರೋಡ್ ಶೋ ಸಾಗಿ ಬರುವ ಇಕ್ಕೆಲಗಳಲ್ಲಿ ಪ್ರಧಾನಿ ಅವರನ್ನು ವೀಕ್ಷಿಸಲು ಬಂದ ಜನತೆ ಮತ್ತು ಬಿಜೆಪಿ ಕಾರ್ಯಕರ್ತರನ್ನು ಹೊರತುಪಡಿಸಿ ಬೇರೆಯವರ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು. ರೋಡ್ ಶೋ ವೀಕ್ಷಿಸುವವರು ಕೂಡ ತಮಗೆ ನಿಗಧಿಪಡಿಸಿದ ಸ್ಥಳ ಬಿಟ್ಟು ಬೇರೆ ಕಡೆ ಓಡಾಡಲು ಅವಕಾಶವಿರಲಿಲ್ಲ.
ರೋಡ್ ಶೋ ಸಾಗಿ ಬರುವ ಪ್ರದೇಶದಲ್ಲಿನ ಮನೆಗಳ ನಿವಾಸಿಗಳು, ಇಚ್ಛೆ ಪಟ್ಟರೆ ಹೊರಗೆ ಬಂದು ರಸ್ತೆಯಲ್ಲಿ ನಿಂತು ರೋಡ್ ಶೋ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಅವರು ತಮ್ಮ ಮನೆಯ ಮುಂಭಾಗದಲ್ಲಿ ಇಲ್ಲವೆ ಮಹಡಿ ಮೇಲೆ ಬಾಲ್ಕಾನಿಯಲ್ಲಿ ನಿಲ್ಲಲು ಅವಕಾಶವಿರಲಿಲ್ಲ ಅನೇಕ ನಿವಾಸಿಗಳ ಮನೆಗಳ ಗೇಟ್ ಗಳಿಗೆ ಬೀಗ ಜಡಿಯಲಾಗಿತ್ತು.
ಇಂತಹ ಅಭೂತಪೂರ್ವ ವ್ಯವಸ್ಥೆಯಿಂದಾಗಿ ಶೇಕಡ 80 ರಷ್ಟು ಬೆಂಗಳೂರಿನಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತು ಬೆಳಗೆಯೇ ಕಾಲೇಜು ವಿದ್ಯಾರ್ಥಿಗಳು ಕಾಲೇಜಿಗೆ ತೆರಳಲು ಸಾಧ್ಯವಾಗದೆ ಪರದಾಡಿದರೆ ಕಚೇರಿ ಕಾರ್ಖಾನೆ ಗೆ ತೆರಳಬೇಕಾದ ಜನತೆ ಅವರ ರಸ್ತೆಯಲ್ಲಿ ನಿಲ್ಲುವಂತಾಯಿತು. ಹಣ್ಣು ಹೂವು ತರಕಾರಿ ತಳ್ಳುಗಾಡಿ ಮಾರಾಟಗಾರರು ರಸ್ತೆ ಬದಿಯ ವ್ಯಾಪಾರಿಗಳು ಒಂದು ದಿನ ತಮ್ಮ ವಹಿವಾಟು ನಿಲ್ಲಿಸುವ ಮೂಲಕ ಸಾಕಷ್ಟು ತೊಂದರೆ ಅನುಭವಿಸಿದರು. ಶನಿವಾರದ ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಳೂರು ರೋಡ್ ಸಾಕಷ್ಟು ಸಮಸ್ಯೆಗಳನ್ನು ಸೃಷ್ಟಿಸಿದರೂ ಮಾಧ್ಯಮಗಳಲ್ಲಿ ಈ ಬಗ್ಗೆ ಯಾವುದೇ ಚಕಾರ ಇರಲಿಲ್ಲ ಅದರಲ್ಲೂ ದೃಶ್ಯ ಮಾಧ್ಯಮಗಳಲ್ಲಂತೂ ಮೋದಿ ಅವರ ರೋಡ್ ಶೋ ಕುರಿತಾದ ವಿಜೃಂಭಣೆಯ ವರದಿಗಳೇ ರಾರಾಜಿಸುತ್ತಿದ್ದವು. ಪ್ರಧಾನಿ ಮೋದಿ ಅವರ ರೋಡ್ ಶೋನಿಂದಾಗಿ ಬೆಂಗಳೂರಿನಲ್ಲಿ ಬಿಜೆಪಿಯ ಪರವಾಗಿ ಸುನಾಮಿ ಎದ್ದಿದೆ ಎಂದೆಲ್ಲಾ ವರ್ಣಿಸುತ್ತಿದ್ದ ದೃಶ್ಯ ಮಾಧ್ಯಮಗಳು ಈ ರಸ್ತೆಯಲ್ಲಿ ಜನಸಾಮಾನ್ಯರು ಬೀದಿ ಬದಿಯ ವ್ಯಾಪಾರಿಗಳು ತಳ್ಳುಗಾಡಿ ಮಾರಾಟಗಾರರು ವಿದ್ಯಾರ್ಥಿಗಳು ಸೇರಿದಂತೆ ಜನಸಾಮಾನ್ಯರು ಅನುಭವಿಸಿದ ಸಂಕಷ್ಟ ಮರಗಳ ರೆಂಬೆ ಕೊಂಬೆಗಳನ್ನ ಕತ್ತರಿಸಿದ್ದರಿಂದ ಉಂಟಾದ ಸಮಸ್ಯೆ ಆಫ್ಟಿಕಲ್ ಫೈಬರ್ ತುಂಡರಿಸಿದ್ದರಿಂದ ಇಂಟರ್ನೆಟ್ ಸಂಪರ್ಕದಲ್ಲಿ ಆದ ವ್ಯತ್ಯಯ ಸೇರಿದಂತೆ ಯಾವುದೇ ತೊಂದರೆಗಳ ಬಗ್ಗೆ ಚಕಾರ ಎತ್ತಲೇ ಇಲ್ಲ ಈ ಮೂಲಕ ದೃಶ್ಯ ಮಾಧ್ಯಮಗಳು ಬಿಜೆಪಿ ಮತ್ತು ಮೋದಿ ಅವರ ವಿಜೃಂಭಣೆಯಲ್ಲಿ ತೊಡಗಿದ್ದವು.
ಇದೇ ರೀತಿಯಾದ ರೋಡ್ ಶೋ ಅನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯಾಗಲಿ ಮಾಜಿ ಮುಖ್ಯಮಂತ್ರಿ ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರಾಗಲಿ ನಡೆಸಿ ಇದರಿಂದ ಜನಸಾಮಾನ್ಯರಿಗೆ ಇಂತಹ ತೊಂದರೆ ಅಥವಾ ಸಮಸ್ಯೆ ಉಂಟಾಗಿದ್ದರೆ ಅಂತಹ ರೋಡ್ ಶೋ ಅನ್ನು ಒಂದು ರೀತಿಯಲ್ಲಿ ಮಹಾ ಅಪರಾಧ ಸಂವಿಧಾನಕ್ಕೆ ಮಾಡಿದ ಅಪಚಾರ ಎಂಬಂತೆ ಚಿತ್ರಿಸುತ್ತಿದ್ದವು. ಆದರೆ ಈ ವಿಷಯದಲ್ಲಿ ಮಾತ್ರ ಬೇರೆ ರೀತಿಯ ಧೋರಣೆ ಅನುಸರಿಸುತ್ತಿವೆ. ಎಂದು ಜನಸಾಮಾನ್ಯರು ಅಭಿಪ್ರಾಯ ಪಡುತ್ತಿದ್ದಾರೆ
Previous Articleಚಿನ್ನದ ವ್ಯಾಪಾರಿಗೆ ಹಾಕಿದರು ಮಕ್ಮಲ್ ಟೋಪಿ
Next Article ಬೆಂಗಳೂರಿನ ಅಧಿಪತಿ ಯಾರಾಗಲಿದ್ದಾರೆ?