ಬೆಂಗಳೂರು,ಜೂ.28-ನೂರಾರು ಎಕರೆ ಜಮೀನು,ಅಪಾರ ಪ್ರಮಾಣದ ಹಣ,ಕಾರುಗಳು,ಕೋಟ್ಯಾಂತರ ಮೌಲ್ಯದ ಅಕ್ರಮ ಆಸ್ತಿಪಾಸ್ತಿ ಪತ್ತೆಯಾದ ಹಿನ್ನಲೆಯಲ್ಲಿ ಕೆಆರ್ ಪುರಂ ಪೂರ್ವ ತಾಲ್ಲೂಕಿನ ತಹಶೀಲ್ದಾರ್ ಅಜಿತ್ ಕುಮಾರ್ ರೈ ರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ.
ಅಜಿತ್ ರೈ ಕಚೇರಿ,ಹತ್ತು ಕಡೆಗಳಲ್ಲಿ ಮನೆ,ಸಂಬಂಧಿಕರ ಮನೆಗಳ ಮೇಲೆ ನಿನ್ನೆ ಮುಂಜಾನೆಯಿಂದ ಏಕಕಾಲದಲ್ಲಿ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಕೋಟ್ಯಾಂತರ ಮೌಲ್ಯದ ಅಕ್ರಮ ಆಸ್ತಿಪಾಸ್ತಿ ಪತ್ತೆ ಮಾಡಿ ಪರಿಶೀಲನೆ ಕೈಗೊಂಡಿದ್ದರು.
ದಾಳಿ ವೇಳೆ ಅಪಾರ ಪ್ರಮಾಣದಲ್ಲಿ ಚಿನ್ನಾಭರಣ ಸೇರಿದಂತೆ ಮೌಲ್ಯಯುತ ವಸ್ತುಗಳು ಪತ್ತೆಯಾಗಿದ್ದ ಹಿನ್ನಲೆಯಲ್ಲಿ ಅಜಿತ್ ಕುಮಾರ್ ರೈ ರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ.
ಅಜಿತ್ ರೈ ಮನೆ ಹಾಗೂ ಕಚೇರಿ ಮೇಲೆ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ 40 ಲಕ್ಷ ನಗದು ಸೇರಿದಂತೆ 1 ಕೋಟಿ 90 ಲಕ್ಷಕ್ಕೂ ಅಧಿಕ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ. ಅಜಿತ್ ರೈಗೆ ಸಂಬಂಧಿಸಿದ ಸುಮಾರು 11 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದು, ಸಂಬಂಧಿಕರು, ಸ್ನೇಹಿತರ ಹೆಸರಲ್ಲಿ ಬೇನಾಮಿ ಆಸ್ತಿ ಮಾಡಿಟ್ಟಿರುವುದು ಪತ್ತೆಯಾಗಿದೆ. ಜೊತೆಗೆ 4 ಫಾರ್ಚ್ಯುನರ್, 4 ಥಾರ್ ಜೀಪ್, ಒಂದು ಲ್ಯಾಂಡ್ ಕ್ರೂಜರ್ ಸೇರಿದಂತೆ ಐಷಾರಾಮಿ ಕಾರುಗಳು. ನಾಲ್ಕು ಐಶಾರಾಮಿ ಬೈಕ್ಗಳು ಪತ್ತೆಯಾಗಿದೆ. ಇನ್ನು ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ಮುಂದುವರೆಸಿದ್ದು, ಅಜಿತ್ ರೈ ಸುಮಾರು 1000 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಹೊಂದಿದ್ದಾರೆ ಎನ್ನಲಾಗಿದೆ.