ಬೆಂಗಳೂರು,ಮೇ 30- ವಿಧಾನಸಭೆ ಚುನಾವಣೆಗೂ ಮುನ್ನ ರಾಜ್ಯದ ಜನತೆಗೆ ಕಾಂಗ್ರೆಸ್ ನೀಡಿದ್ದ ಭರವಸೆಯಂತೆ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಲು ಮುಂದಾಗಿರುವ ಸರ್ಕಾರಕ್ಕೆ ಫಲಾನುಭವಿಗಳ ಆಯ್ಕೆ ಇದೀಗ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಯೋಜನೆ ಜಾರಿಗೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ದಿನಗಳಿಂದ ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಹಣಕಾಸು ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಸಮಗ್ರ ಮಾಹಿತಿ ಪಡೆದುಕೊಂಡಿದ್ದಾರೆ.
ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಮುನ್ನ ತಮ್ಮ ಸಂಪುಟದ ಸಹೋದ್ಯೋಗಿಗಳೊಂದಿಗೆ ಪೂರ್ವಭಾವಿ ಸಮಾಲೋಚನೆ ನಡೆಸಿ ಆನಂತರ ಸಂಪುಟ ಸಭೆಯಲ್ಲಿ ಚರ್ಚಿಸಿ ಅನುಮೋದನೆ ಪಡೆದುಕೊಳ್ಳಲಿದ್ದಾರೆ.
ತಕ್ಷಣದಿಂದಲೇ ಜಾರಿಗೆ ಬರುವಂತೆ ಎಲ್ಲ ಯೋಜನೆಗಳು ಅನುಷ್ಠಾನಕ್ಕೆ ಬರಲಿವೆಯಾದರೂ ಫಲಾನುಭವಿಗಳ ಗುರುತಿಸುವಿಕೆ ಮತ್ತು ಅರ್ಜಿ ಸ್ವೀಕಾರ ಪ್ರಕ್ರಿಯೆಗಳು ವಿಳಂಬವಾಗುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಜೂನ್ 1ರಿಂದ ಯೋಜನೆ ಜಾರಿಯ ಘೋಷಣೆ ಮಾಡಲಿದ್ದು, ಅದಕ್ಕಾಗಿ ಫಲಾನುಭವಿಗಳು ಅರ್ಜಿ ಸಲ್ಲಿಸಬೇಕಿದೆ. ಅರ್ಜಿ ಸಲ್ಲಿಸಲು ಕೆಲವು ದಾಖಲಾತಿಗಳು ಅಗತ್ಯವಿದೆ. ಅವುಗಳನ್ನು ಹೊಂದಿಸಿಕೊಳ್ಳಲು ಜನ ಸಾಮಾನ್ಯರಿಗೆ ಸಮಯವಕಾಶಬೇಕಾಗಿದೆ ಎಂದು ಹೇಳಲಾಗುತ್ತಿದೆ.
ಗೃಹಲಕ್ಷ್ಮೀ, ಗೃಹಜ್ಯೋತಿ, ಅನ್ನಭಾಗ್ಯ, ಯುವನಿಧಿ ಮತ್ತು ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವುದರಿಂದ ಖಜಾನೆ ಮೇಲೆ ಉಂಟಾಗುವ ಹೊರೆ ಹಾಗೂ ಸಂಪನ್ಮೂಲ ಕ್ರೋಡಿಕರಣಕ್ಕೆ ಅನುಸರಿಸಬೇಕಾದ ಮಾರ್ಗಗಳ ಕುರಿತಂತೆ ಹಣಕಾಸು ಇಲಾಖೆಯ ಅಧಿಕಾರಿಗಳು ನೀಡಿದ್ದಾರೆ.
ಒಂದು ಅಂದಾಜುನ ಪ್ರಕಾರ ಈ ಐದು ಯೋಜನೆಗಳ ಜಾರಿಗೆ ಸರ್ಕಾರಕ್ಕೆ ವಾರ್ಷಿಕ 46, 500 ಕೋಟಿ ರೂಪಾಯಿ ವೆಚ್ಚವಾಗಲಿದೆ.ಸದ್ಯ ಸಂಪನ್ಮೂಲಗಳನ್ನು ಕ್ರೂಡೀಕರಿಸಿ ಮಾಡಿದ ಅಂದಾಜಿನಂತೆ ಸುಮಾರು ಹತ್ತು ಸಾವಿರ ಕೋಟಿ ಹೆಚ್ಚುವರಿ ಸಂಪನ್ಮೂಲ ಬೇಕಾಗಿದ್ದು ಅದನ್ನು ಸಂಗ್ರಹಿಸಲು ಲಭ್ಯವಿರುವ ಮಾರ್ಗಗಳನ್ನು ಹುಡುಕುವಂತೆ ಹಣಕಾಸು ಇಲಾಖೆ ಅಧಿಕಾರಿಗಳಿಗೆ ಸಿಎಂ ಸಲಹೆ ಮಾಡಿರುವುದಾಗಿ ಉನ್ನತ ಮೂಲಗಳು ತಿಳಿಸಿವೆ.
ಯಾರಿಗೆ ಲಾಭ:
ಇನ್ನು ಈ ಯೋಜನೆಯನ್ನು ಯಾರು ಯಾರಿಗೆ ನೀಡಬೇಕು ಎಂಬ ಬಗ್ಗೆ ಮಾರ್ಗಸೂಚಿಗಳನ್ನು ರಚಿಸಲಾಗುತ್ತಿದೆ ಮೂಲಗಳ ಪ್ರಕಾರ ಅನ್ನಭಾಗ್ಯ ಯೋಜನೆಗೆ ಫಲಾನುಭವಿಗಳ ಬಗ್ಗೆ ಸ್ಪಷ್ಟತೆ ಇದೆ. ಉಳಿದಂತೆ ಗೃಹಜ್ಯೋತಿ, ಗೃಹಲಕ್ಷ್ಮೀ, ಯುವನಿಧಿ, ಶಕ್ತಿ ಯೋಜನೆಗಳು ಸಂಪೂರ್ಣ ಹೊಸ ಕಲ್ಪನೆಯಾಗಿದ್ದು, ರೂಪುರೇಷೆಯಿಂದ, ಫಲಾನುಭವಿಗಳವರೆಗೂ ಎಲ್ಲವನ್ನೂ ಹೊಸದಾಗಿ ಕಂಡುಕೊಳ್ಳಬೇಕಿದೆ
ಗೃಹಲಕ್ಷ್ಮಿ ಯಾರು.?
ಪ್ರಮುಖವಾಗಿ ಗೃಹಲಕ್ಷ್ಮೀ ಯೋಜನೆಗೆ ಫಲಾನುಭವಿ ಯಾರು ಎಂಬ ಚರ್ಚೆಗಳಿವೆ. ಮನೆಯಲ್ಲಿ ಸರ್ಕಾರ ಅತ್ತೆಗೆ ಅಥವಾ ಸೊಸೆ, ಯಾರಿಗೆ ಹಣ ನೀಡಲಿದೆ ಎಂಬ ಗೊಂದಲಗಳಿವೆ. ಹಿರಿಯರು ಎಂಬ ಕಾರಣಕ್ಕೆ ಅತ್ತೆಗೆ ಮಾಸಿಕ ಎರಡು ಸಾವಿರ ನೀಡಬೇಕು ಎಂದು ಅಭಿಪ್ರಾಯಗಳು ವ್ಯಕ್ತವಾಗಿವೆ.ಆದರೆ ಮನೆಯ ಖರ್ಚು ವೆಚ್ಚಗಳನ್ನು ನಿಭಾಯಿಸುವವರು ಸೊಸೆಯಾಗಿದ್ದರೆ ಯೋಜನೆಯ ಉದ್ದೇಶ ಈಡೇರದೆ ಹೋಗಬಹುದು. ಒಂದೇ ಮನೆಯಲ್ಲೇ ಎರಡು ಅರ್ಜಿಗಳು ಬಂದರೆ ಅದನ್ನು ಗುರುತಿಸುವುದು ಹೇಗೆ. ಒಂದೇ ಮನೆಯಲ್ಲಿ ಇಬ್ಬರು ಫಲಾನುಭವಿಗಳು ಸೌಲಭ್ಯ ಪಡೆದರೆ ಯಾವ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಅಧಿಕಾರಿಗಳು ಹಗಲು ರಾತ್ರಿ ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಯೋಜನೆ ಜಾರಿಗೊಳಿಸುವ ವೇಳೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಗಳ ಬಗ್ಗೆಯೂ ಸಮಾಲೋಚನೆಗಳು ನಡೆದಿವೆ.
200 ಯೂನಿಟ್ ಉಚಿತ ವಿದ್ಯುತ್ ನೀಡುವ ಯೋಜನೆಯಲ್ಲಿ ಮನೆಗಳ ಮೀಟರ್ ಗ ಳ ಆಧಾರದ ಮೇಲೆ ಸೌಲಭ್ಯ ನೀಡಬಹುದಾಗಿದ್ದರೂ ಮನೆ ಮಾಲೀಕರು ಹಾಗೂ ಬಾಡಿಗೆದಾರರ ನಡುವಿನ ವ್ಯತ್ಯಾಸ ಗುರುತಿಸುವುದು ಸವಾಲಿನ ಕೆಲಸವಾಗಿದೆ. ಅದಕ್ಕಾಗಿ ಬಾಡಿಗೆ ಕರಾರು ಸೇರಿದಂತೆ ಹಲವು ದಾಖಲಾತಿಗಳು ಅಗತ್ಯವಿದೆ. ಇವುಗಳನ್ನು ಆನ್‍ಲೈನ್ ಮೂಲಕ ಸ್ವೀಕರಿಸಬೇಕೋ ಅಥವಾ ಭೌತಿಕವಾಗಿ ಸಂಗ್ರಹಿಸಬೇಕೋ ಎಂಬ ಚರ್ಚೆಗಳು ನಡೆಯುತ್ತಿವೆ.
ಸಾರಿಗೆ ಬಸ್‍ಗಳಲ್ಲಿ ರಾಜ್ಯದ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸುವ ಕುರಿತು ಮಾರ್ಗಸೂಚಿಗಳು ರೂಪುಗೊಳ್ಳುತ್ತವೆ. ಸರ್ಕಾರಿ ಉದ್ಯೋಗಿಗಳು, ಆದಾಯ ತೆರಿಗೆ ಪಾವತಿಸುವ ಮಹಿಳೆಯರಿಗೆ ಸಾಲಭ್ಯ ನೀಡಬೇಕೋ ಬೇಡವೋ ಎಂಬ ಗೊಂದಲಗಳಿವೆ. ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ವೇತನ ಮಿತಿ ಅಥವಾ ಆದಾಯ ಮಿತಿಯನ್ನು ವಿಧಿಸುವ ಹಾಗೂ ಮಾಸಿಕ ಪಾಸ್ ವ್ಯವಸ್ಥೆ ಅಥವಾ ದಿನದ ಪಾಸ್ ಸೌಲಭ್ಯಗಳನ್ನು ಜಾರಿಗೆ ತರುವ ಮೂಲಕ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸಬಹುದೇ ಎಂದು ಅಧಿಕಾರಿಗಳು ಚರ್ಚೆ ನಡೆಸುತ್ತಿದ್ದಾರೆ.
ಇನ್ನೂ ಯುವನಿಧಿ ಯೋಜನೆಗೆ ಪ್ರಸಕ್ತ ಶೈಕ್ಷಣಿಕ ಸಾಲಿನ ಪದವೀಧರರನ್ನು ಪರಿಗಣಿಸುವುದಾಗಿ ಹೇಳಿರುವುದರಿಂದ ಶಿಕ್ಷಣ ಸಂಸ್ಥಗಳಿಂದಲೇ ಮಾಹಿತಿ ಪಡೆದು, ಅರ್ಜಿ ಆಹ್ವಾನಿಸಿ ಫಲಾನುಭವಿಗಳನ್ನು ಗುರುತಿಸಲು ಪರಿಶೀಲನೆ ನಡೆಯುತ್ತಿದೆ
Previous Articleಗಂಗೆಯಲ್ಲಿ ಮೆಡಲ್ ವಿಸರ್ಜನೆ
Next Article 83ನೇ ವಯಸ್ಸಿನಲ್ಲಿ ತಂದೆಯಾದ Al Pacino