ಪಾಟ್ನಾ (ಬಿಹಾರ),ಜು.5- ಬಿಹಾರದ ಮಾಜಿ ಶಾಸಕ ಸುರೇಂದ್ರ ಶರ್ಮಾ ತನ್ನ ಸ್ವಂತ ಮಗಳನ್ನು ಕೊಲ್ಲಲು ಬಾಡಿಗೆ ಹಂತಕ (ಕಾಂಟ್ರಾಕ್ಟ್ ಕಿಲ್ಲರ್)ರನ್ನು ನೇಮಿಸಿ ಜೈಲು ಸೇರಿದ್ದಾರೆ.
ತನ್ನ ಮಗಳು ಬೇರೆ ಜಾತಿಯ ಯುವಕನನ್ನು ಮದುವೆಯಾಗಿದ್ದಕ್ಕೆ ಕೋಪಗೊಂಡು ಮಗಳನ್ನು ಕೊಲೆ ಮಾಡಲು ಬಾಡಿಗೆ ಹಂತಕನನ್ನು ನೇಮಕ ಮಾಡಿದ್ದ ವಿಷಯ ಬಯಲಾಗಿ ಅವರನ್ನು ಬಂಧಿಸಲಾಗಿದೆ.
ಈ ಪ್ರಕರಣದಲ್ಲಿ ಇದುವರೆಗೆ ನಾಲ್ವರನ್ನು ಬಂಧಿಸಲಾಗಿದೆ. ಮರ್ಯಾದಾ ಹತ್ಯೆಗಾಗಿ ಕಾಂಟ್ರಾಕ್ಟ್ ಕಿಲ್ಲರ್ಗೆ 20 ಲಕ್ಷ ರೂ.ಗಳನ್ನು ನೀಡಲಾಗಿತ್ತು. ಆದರೆ, ಕೊಲೆ ಮಾಡಲು ಹೋಗಿದ್ದ ಆರೋಪಿಗಳು ಈ ವಿಷಯವನ್ನು ಬಾಯಿಬಿಟ್ಟಿದ್ದರಿಂದ ಸುರೇಂದ್ರ ಶರ್ಮಾ ಅವರನ್ನು ಬಂಧಿಸಲಾಗಿದೆ ಎಂದು ಪಾಟ್ನಾ ನಗರ (ಪೂರ್ವ) ಪೊಲೀಸ್ ವರಿಷ್ಠಾಧಿಕಾರಿ ಪ್ರಮೋದ್ ಕುಮಾರ್ ತಿಳಿಸಿದ್ದಾರೆ.
ಕಳೆದ ಜುಲೈ 1 ಮತ್ತು 2ರ ಮಧ್ಯರಾತ್ರಿ ಸುರೇಂದ್ರ ಶರ್ಮಾ ಅವರ ಮಗಳ ಮೇಲೆ ಕೊಲೆ ಯತ್ನ ನಡೆದಿತ್ತು. ಶ್ರೀ ಕೃಷ್ಣಪುರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸಿಸುವ ಆ ಯುವತಿ ಅಪರಿಚಿತ ವ್ಯಕ್ತಿಗಳು ತನ್ನ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಪೊಲೀಸ್ ದೂರು ದಾಖಲಿಸಿದ್ದಾರೆ. ಗುಂಡು ಹಾರಿಸಿದ ಆರೋಪಿಗಳು ಬೈಕ್ನಲ್ಲಿ ವೇಗವಾಗಿ ಹೋಗಿದ್ದಾರೆ.
ಬೆನ್ನತ್ತಿ ಅವರನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿರುವ ಪೊಲೀಸರು ಮಾಜಿ ಶಾಸಕರ ಮಗಳನ್ನು ಕೊಲ್ಲಲು ಬಾಡಿಗೆ ಪಡೆದಿದ್ದ ಗ್ಯಾಂಗ್ ಬಳಿಯಿಂದ 3 ಪಿಸ್ತೂಲ್‌ಗಳು, ಮದ್ದುಗುಂಡುಗಳು ಮತ್ತು ನಂಬರ್ ಪ್ಲೇಟ್ ಇಲ್ಲದ ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ. ಬಾಡಿಗೆ ಹಂತಕರ ತಂಡದ ನಾಯಕ ಅಭಿಷೇಕ್‌ನನ್ನು ಬಂಧಿಸಲಾಗಿದ್ದು, ಆತನ ಇತರ ಇಬ್ಬರು ಸಹಚರರು ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಸುರೇಂದ್ರ ಶರ್ಮಾ ಈ ಹಿಂದೆ ಸ್ವತಂತ್ರವಾಗಿ ಸ್ಪರ್ಧಿಸಿದ್ದರು. ಇದುವರೆಗೆ ಯಾವುದೇ ಪಕ್ಷದೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ. ಅಭಿಷೇಕ್ ಬಹಿರಂಗಪಡಿಸಿದ ಮಾಹಿತಿಯ ಪ್ರಕಾರ, ಸುರೇಂದ್ರ ಶರ್ಮಾ 1990ರ ದಶಕದಲ್ಲಿ ಸರನ್ ಜಿಲ್ಲೆಯಿಂದ ಶಾಸಕಾಂಗ ಸಭೆಯಲ್ಲಿ ಸೇವೆ ಸಲ್ಲಿಸಿದ್ದಾರೆ.
ಮಗಳ ಕೊಲೆಗೆ ಕಾಂಟ್ರಾಕ್ಟ್ ಕಿಲ್ಲರ್ ನೇಮಿಸಿದ ಮಾಜಿ ಶಾಸಕ ಜೈಲಿಗೆ !
Previous Articleಹಿಂದೂ ಭಾವನೆಗಳಿಗೆ ದಕ್ಕೆ ತಂದ ವ್ಯಕ್ತಿ Arrest!!
Next Article ಅಮೃತ್ ಪೌಲ್ ತೀವ್ರ ವಿಚಾರಣೆ : ಸ್ಫೋಟಕ ಮಾಹಿತಿ