ಎಲ್ಲಿ ನೋಡಿದರೂ ಭಾರತದ ಜಿಡಿಪಿಯದೇ ಸುದ್ದಿ. ಭಾರತ ಬಹಳ ಬೇಗವೇ ಐದು ಟ್ರಿಲಿಯನ್ ಡಾಲರ್ ವ್ಯವಹಾರದ ದೇಶವಾಗಲಿದೆ ಎಂದು ಹೇಳುತ್ತಿದ್ದಾರೆ. ಅದು ಆಗಬಹುದು ಕೂಡ. ಆದರೆ ಜಿಡಿಪಿ ಬೆಳೆಯುವುದರಿಂದ ದೇಶದ ಸಾಮಾನ್ಯ ಜನರಿಗೆ ಯಾವ ರೀತಿಯ ಪ್ರಯೋಜನ ವೆಂದು ಯೋಚಿಸಿದರೆ ಒಂದಷ್ಟು ಆತಂಕಕಾರಿ ಮಾಹಿತಿ ಹೊರಬಿದ್ದಿದೆ. ಸಾಮಾನ್ಯ ಭಾರತೀಯರು ಎಂದರೆ ಮಧ್ಯಮವರ್ಗದವರು ಬ್ಯಾಂಕ್ನಲ್ಲಿ ವ್ಯವಹರಿಸುವವರು ಇಲ್ಲಿ ಮುಖ್ಯವಾಗುತ್ತಾರೆ. ಅವರ ಪೈಕಿ ದಿನೇದಿನೇ ಹೆಚ್ಚು ಹೆಚ್ಚು ಮಂದಿ ಸಾಲತೆಗೆದುಕೊಳ್ಳುತ್ತಿದ್ದಾರೆ ಮತ್ತು ಅನೇಕರು ಸಾಲದ ಸುಳಿಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ. ಜನ ಹಣ ಉಳಿತಾಯ ಮಾಡುವುದಕ್ಕಿಂತ ಹೆಚ್ಚಾಗಿ ಸಾಲ ತೆಗೆದುಕೊಂಡು ಮನೆ ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ಹೊರಬಂದಿದೆ. ಆರ್ಥಿಕ ವರ್ಷ 24-25 ರಲ್ಲಿ ಸುಮಾರು 28.5 ಕೋಟಿ ಜನ ಸಾಲ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಹೊರಬಂದಿದೆ. ಅನೇಕ ಮನೆಗಳಲ್ಲಿ ಮನೆಯ ಯಜಮಾನನ ಹೆಸರಿನಲ್ಲಿ ಸಾಲ ಪಡೆಯಲಾಗುತ್ತದೆ ಆದ್ದರಿಂದ ಕುಟುಂಬದ ಇನ್ನಿತರರೂ ಸಾಲದಲ್ಲಿ ಬದುಕುತ್ತಿರುತ್ತಾರೆ. ಸಾಲ ಪಡೆದವರ ಸರಾಸರಿ ತೆಗೆದುಕೊಂಡರೆ ಅತ್ಯಂತ ಹೆಚ್ಚು ಸಾಲದಿಂದ ಹಿಡಿದು ಅತ್ಯಂತ ಕಡಿಮೆ ಸಾಲವನ್ನು ನೋಡಿ ಒಟ್ಟು ಸಾಲವನ್ನು ವಿಭಜಿಸಿದರೆ ಪ್ರತಿ ಸಾಲ ಪಡೆದವರ ತಲೆಯ ಮೇಲೆ ಸರಾಸರಿ ಸುಮಾರು ೫ ಲಕ್ಷದಷ್ಟು ಸಾಲದ ಹಣ ಇದೆ ಎನ್ನಲಾಗಿದೆ.ಅನೇಕರಿಗೆ ಈ ಸಾಲ ವನ್ನು ಬಡ್ಡಿಯೊಂದಿಗೆ ತೀರಿಸುವ ಶಕ್ತಿ ಇಲ್ಲದಿರುವುದು ಕಳವಳಕಾರಿ ವಿಷಯವಾಗಿದೆ. ಇದು ಬ್ಯಾಂಕ್, App ಮೂಲಕ ಎಂದರೆ ಸಕ್ರಮವಾಗಿ ಪಡೆದ ಸಾಲವಾಗಿದ್ದರೆ ಇನ್ನು ಕೈಸಾಲ ಎಷ್ಟು ಪಡೆದಿದ್ದಾರೆ ಎನ್ನುವ ಮಾಹಿತಿ ಹೊರಬಂದಿಲ್ಲ. ಹಿಂದೆಲ್ಲ ಮನೆ ಕೊಂಡುಕೊಳ್ಳಲು ಜನ ಸಾಲ ತೆಗೆದುಕೊಳ್ಳುತ್ತಿದ್ದರು ಆದರೆ ಮನೆಗಳು ಮತ್ತು ಸೈಟ್ಗಳು ದುಬಾರಿಯಾಗಿರುವ ಈ ಕಾಲದಲ್ಲಿ ಜನ ವೈಯಕ್ತಿಕ ಖರ್ಚುಗಳಿಗೆ, ಕ್ರೆಡಿಟ್ ಕಾರ್ಡ್ ಬಳಕೆಗೆ, ವಾಹನ ಖರೀದಿಗೆ, ಟೂರ್ ಹೋಗುವುದಕ್ಕೆ, ಮನೆ ಖರ್ಚುಗಳಿಗೆ ಮತ್ತು ಕೌಟುಂಬಿಕ ಸಮಾರಂಭಗಳಿಗಾಗಿ ಸಾಲ ತೆಗೆದುಕೊಳ್ಳುತ್ತಿದ್ದಾರೆ ಎನ್ನುವುದು ಕಂಡುಬಂದಿದೆ.
ಸಾಲ ಮಾಡಿಯಾದರೂ ತುಪ್ಪ ತಿನ್ನು ಎನ್ನುವುದನ್ನು ಅನೇಕರು ರೂಡಿಸಿಕೊಂಡಂತಿದೆ. ಹೀಗೆ ಸಾಲ ಮಾಡಿಕೊಂಡವರು ಮುಂದೊಂದು ದಿನ ಕೆಲಸ ಕಳೆದುಕೊಂಡರೆ ನಷ್ಟ ಅನುಭವಿಸಿದರೆ ಅಥವಾ ಅನಾರೋಗ್ಯಕ್ಕೆ ಈಡಾದರೆ ಪರಿಸ್ಥಿತಿ ಏನಾಗಬಹುದು? ದೇಶದಲ್ಲಿ ಕೆಲವೇ ಜನ ದಿನೇದಿನೇ ಶ್ರೀಮಂತರಾಗುತ್ತಿರುವಾಗ ಬಹುತೇಕ ಭಾರತೀಯರು ಸಾಲದಲ್ಲಿ ಮುಳುಗುತ್ತಿರುವುದು ವಿಚಿತ್ರವೆನ್ನಿಸುತ್ತಿದೆ.
Previous Articleದಿನೇಶ್ ಗುಂಡೂರಾವ್ ಸಿಎಂ ಆಗಬೇಕಂತೆ.
Next Article ಪರಪ್ಪನ ಅಗ್ರಹಾರದಲ್ಲಿ ಟ್ರ್ಯಾಕಿಂಗ್ ಸಿಸ್ಟಂ

