ಬೆಂಗಳೂರು: ರಾಜಾಸ್ಥಾನದ ಜೈಪುರದ ಅಕ್ರಮ ಕ್ಯಾಸಿನೋದಲ್ಲಿ ಕುಡಿದು ಕುಪ್ಪಳಿಸುತ್ತಾ ಜೂಜಾಡುತ್ತಿದ್ದ ಕರ್ನಾಟಕದ ಹಿರಿಯ ಅಧಿಕಾರಿಗಳು ಪೊಲೀಸ್ ಬಲೆಗೆ ಬಿದ್ದಿದ್ದಾರೆ.
ಪೊಲೀಸ್ ಇನ್ಸ್ಪೆಕ್ಟರ್ ಅಂಜಯ್ಯ, ಬೆಂಗಳೂರಿನ ತಹಶೀಲ್ದಾರ್ ಶ್ರೀನಾಥ್ ಮತ್ತು ಕಾಲೇಜು ಪ್ರಾಧ್ಯಾಪಕ ಕೆ.ಎಲ್. ರಮೇಶ್ ಸೇರಿದಂತೆ ಅನೇಕ ಮಂದಿ ಹಿರಿಯ ಅಧಿಕಾರಿಗಳು ರಾಜಾಸ್ಥಾನ ಪೊಲೀಸರ ಅತಿಥಿಗಳಾಗಿದ್ದಾರೆ.
ಜೈಪುರ ಹೊರವಲಯದ ಜೈಸಿಂಗ್‌ಪುರ ಖೋರ್ ಪೊಲೀಸ್ ಠಾಣೆ ವ್ಯಾಪ್ತಿಯ ಫಾರ್ಮ್ ಹೌಸ್‌ನಲ್ಲಿ ಅಕ್ರಮವಾಗಿ ಪಾರ್ಟಿ ನಡೆಸಲಾಗುತ್ತಿದೆ ಎಂಬ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು ಅಲ್ಲಿನ ಪರಿಸ್ಥಿತಿ ಕಂಡು ಬೆಚ್ಚಿದ್ದಾರೆ. ವಶಕ್ಕೆ ಪಡೆದವರ ವಿವರ ಕಲೆ ಹಾಕಿದಾಗ ಕರ್ನಾಟಕ, ತೆಲಂಗಾಣ, ಹರಿಯಾಣ, ಪಂಜಾಬ್, ಉತ್ತರ ಪ್ರದೇಶ, ದೆಹಲಿ ಮತ್ತು ಮಹಾರಾಷ್ಟ್ರದ ಅಧಿಕಾರಿಗಳೇ ಹೆಚ್ಚಿನ ಸಂಖ್ಯೆಯಲ್ಲಿರುವುದು ಗೊತ್ತಾಗಿದೆ.
ದಾಳಿಯಲ್ಲಿ 9 ಹುಕ್ಕಾಗಳು, 21 ಜೋಡಿ ಕಾರ್ಡ್‌ಗಳು, 7 ಟೇಬಲ್‌ಗಳು, 100 ಕ್ಕೂ ಹೆಚ್ಚು ಮದ್ಯದ ಬಾಟಲಿಗಳು ಮತ್ತು 23 ಲಕ್ಷದ 71 ಸಾವಿರದ 408 ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ.
ಈವೆಂಟ್ ಮ್ಯಾನೇಜರ್ ನರೇಶ್ ಮಲ್ಹೋತ್ರಾ ಅಲಿಯಾಸ್ ರಾಹುಲ್, ಅವರ ಮಗ ಮನ್ವೇಶ್, ಫಾರ್ಮ್ ಹೌಸ್ ಮ್ಯಾನೇಜರ್ ಮೋಹಿತ್ ಸೋನಿ, ಮೀರತ್ ನಿವಾಸಿ ಮನೀಶ್ ಶರ್ಮಾ ಅವರನ್ನು ಮಾನವ ಕಳ್ಳಸಾಗಣೆಯ ಸೆಕ್ಷನ್‌ಗಳ ಅಡಿಯಲ್ಲಿ ಬಂಧಿಸಲಾಗಿದೆ ಎಂದು ಜೈಪುರ ಪೊಲೀಸರು ತಿಳಿಸಿದ್ದಾರೆ.