ಬಹುಭಾಷ ನಟ ಮಾಧವನ್ ಪುತ್ರ ವೇದಾಂತ್ ಮತ್ತೊಮ್ಮೆ ಈಜಿನಲ್ಲಿ ಚಿನ್ನದ ಪದಕ ಗೆದ್ದು ದಾಖಲೆ ಬರೆದಿದ್ದಾರೆ. 48ನೇ ಜೂನಿಯರ್ ರಾಷ್ಟ್ರೀಯ ಅಕ್ವಾಟಿಕ್ ಚಾಂಪಿಯನ್‌ಶಿಪ್‌ನಲ್ಲಿ 1500 ಮೀ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಚಿನ್ನ ಗೆಲ್ಲುವ ಮೂಲಕ ವೇದಾಂತ್ ಹೊಸ ಇತಿಹಾಸ ಸೃಷ್ಟಿಸಿದರು. ಅದು ಕೂಡ ದಾಖಲೆಯ ಮೂಲಕ ಎಂಬುದು ವಿಶೇಷ. 1500 ಮೀ ಫ್ರೀಸ್ಟೈಲ್ ಈಜು ಸ್ಪರ್ಧೆಯಲ್ಲಿ ವೇದಾಂತ್ ಕೇವಲ 16:01.73 ಸೆಕೆಂಡ್ ಗಳಲ್ಲಿ ಗುರಿ ಮುಟ್ಟಿದ್ದರು. ಇದಕ್ಕೂ ಮುನ್ನ 2017 ರಲ್ಲಿ 16:06.43 ಸೆಕೆಂಡ್ ಗಳ ಅಂತರದಲ್ಲಿ ಗುರಿ ತಲುಪುವ ಮೂಲಕ ಅದ್ವೈತ್ ದಾಖಲೆ ಬರೆದಿದ್ದರು. ಇದೀಗ 5 ವರ್ಷಗಳ ಹಿಂದಿನ ರಾಷ್ಟ್ರೀಯ ದಾಖಲೆಯನ್ನು ಮುರಿದು ವೇದಾಂತ್ ಹೊಸ ಇತಿಹಾಸ ಬರೆದಿದ್ದಾರೆ.