ಜರ್ಮನಿ ಮೂಲಕ ಚಿಲ್ಲರೆ ವ್ಯಾಪಾರ ಸಂಸ್ಥೆ ‘ಮೆಟ್ರೋ ಎಜಿ’ ಅರ್ಥಾತ್ ಮೆಟ್ರೋ ಕ್ಯಾಷ್ ಅಂಡ್ ಕ್ಯಾರಿ ಭಾರತದಲ್ಲಿ ತನ್ನ ವಹಿವಾಟು ಸ್ಥಗಿತಗೊಳಿಸಿ ಸ್ವದೇಶಕ್ಕೆ ವಾಪಾಸ್ಸಾಗಲಿದೆಯಾ…?
ಹೌದು. ಎನ್ನುತ್ತವೆ ವ್ಯಾಪಾರ ಮತ್ತು ವಾಣಿಜ್ಯವಲಯದ ಮೂಲಗಳು. ಇದಕ್ಕೆ ಕಾರಣ ಭಾರತ ಸರ್ಕಾರದ ಧೋರಣೆಗಳು, ಹೆಚ್ಚಿದ ರಿಯಲ್ ಎಸ್ಟೇಟ್ ದರ ಹಾಗು ಅನೈತಿಕ ಸ್ಪರ್ಧೆ. ಇದನ್ನು ಎದುರಿಸಲಾಗದ ಮೆಟ್ರೋ ಎಜಿ ಸಂಸ್ಥೆ ದೇಶದಿಂದ ಹೊರ ನಡೆಯಲು ಸಿದ್ದತೆ ನಡೆಸಿದೆ.
ಸಗಟು ಮತ್ತು ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ಜಗತ್ತಿನಲ್ಲಿ ಸಾಕಷ್ಟು ಹೆಸರು ಮಾಡಿರುವ ಮೆಟ್ರೋ ಭಾರತದಲ್ಲಿ ಕಾರ್ಯಾಚರಣೆ ಆರಂಭಿಸಲು ಮುಂದಾದಾಗ ಸಾಕಷ್ಟು ಪ್ರತಿರೋಧ ಎದುರಿಸಬೇಕಾಯಿತು. ರೈತರು, ಕಿರಾಣಿ ಅಂಗಡಿಗಳು, ಎಪಿಎಂಸಿಗಳ ಪ್ರತಿನಿಧಿಗಳು ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ವ್ಯಕ್ತಪಡಿಸಿದರು. ಇಂತಹ ಪ್ರತಿಭಟನೆ ಲೆಕ್ಕಿಸದ ಅಂದಿನ ಕರ್ನಾಟಕ ಸರ್ಕಾರ ಮೆಟ್ರೋ ಕಾರ್ಯಾಚರಣೆಗೆ ಅವಕಾಶ ನೀಡಿತು.
ಇದನ್ನು ಸದುಪಯೋಗ ಪಡಿಸಿಕೊಂಡ ಮೆಟ್ರೋ ಕೆಲವೇ ವರ್ಷಗಳಲ್ಲಿ ರೈತ ಸ್ನೇಹಿ, ಕಿರಾಣಿ ಅಂಗಡಿಗಳ ಮಿತ್ರನಾಗಿ ಪರಿಣಮಿಸಿತು. ಜೊತೆ ಜೊತೆಗೆ ತನ್ನ ವಹಿವಾಟು ವಿಸ್ತರಣೆ ಮಾಡಿತು. ಹೀಗಾಗಿ ದೇಶದೆಲ್ಲೆಡೆ ತನ್ನ ಮಳಿಗೆಗಳನ್ನು ಆರಂಭಿಸಿತು
ಮೆಟ್ರೋ ತನ್ನ ‘ಕ್ಯಾಷ್ ಆಂಡ್ ಕ್ಯಾರಿ’ ಮಾದರಿಯ 31 ಬೃಹತ್ ಮಳಿಗೆಗಳನ್ನು ನಿರ್ವಹಿಸುತ್ತಿದೆ. ಆದರೆ ಈಗ ತೀವ್ರತರವಾದ ಬಿಕ್ಕಟ್ಟು ಎದುರಿಸುತ್ತಿದೆ. ಕೋವಿಡ್ ನಂತರದ ಸಮಸ್ಯೆಗಳ ಜೊತೆಗೆ ಆಳುವ ಸರ್ಕಾರದ ಧೋರಣೆ ಮೆಟ್ರೋ ಸಂಸ್ಥೆಗೆ ಅರಗಿಸಿಕೊಳ್ಳದಂತಾಗಿದೆ.
ಸದ್ಯ ತೀವ್ರವಾದ ಮಾರುಕಟ್ಟೆ ಸ್ಪರ್ಧೆ ಮತ್ತು ಕಾರ್ಯಾಚರಣೆಗಳನ್ನು ಉಳಿಸಿಕೊಳ್ಳಲು ದೊಡ್ಡ ಮಟ್ಟದ ಹೂಡಿಕೆ ಮಾಡಬೇಕಾದ ಅನಿವಾರ್ಯತೆ ಮೆಟ್ರೋ ಗೆ ಉಂಟಾಗಿದೆ. ಇಂತಹದೊಂದು ಪರಿಸ್ಥಿತಿಗೆ ಸರ್ಕಾರದ ನೀತಿಯೇ ಕಾರಣ ಎನ್ನಲಾಗುತ್ತಿದೆ.
ಸರ್ಕಾರದ ಈ ಅನಾರೋಗ್ಯಕರ ವಾತಾವರಣ ಎದುರಿಸಲಾಗದ ಸ್ಥಿತಿಯನ್ನು ಮೆಟ್ರೋ ತಲುಪಿದೆ. ಈ ಹಿನ್ನೆಲೆಯಲ್ಲಿ ಮೆಟ್ರೋ ಭಾರತ ತೊರೆಯಲು ನಿರ್ಧರಿಸಿದೆ. ದೇಶದಲ್ಲಿ ವಿದೇಶಿ ಕಂಪನಿಗಳಿಗೆ ಗ್ರಾಹಕರಿಗೆ ನೇರವಾಗಿ ಸರಕುಗಳನ್ನು ಮಾರಾಟ ಮಾಡಲು ಅವಕಾಶವಿಲ್ಲವಾದರೂ, ಕ್ಯಾಷ್ ಆಂಡ್ ಕ್ಯಾರಿ ಹಾಗು ಸಗಟು ಕಾರ್ಯಾಚರಣೆಗಳಲ್ಲಿ ಶೇ. 100ರಷ್ಟು ವಿದೇಶಿ ಹೂಡಿಕೆಗೆ ಅನುಮತಿ ಇದೆ. ನೋಂದಾಯಿಸಿಕೊಂಡಿರುವ ಸಣ್ಣ ಪುಟ್ಟ ವ್ಯಾಪಾರಿಗಳು ಈ ಮಳಿಗೆಗಳಿಗೆ ಭೇಟಿ ನೀಡಿ ತಮ್ಮ ವ್ಯಾಪಾರಕ್ಕೆ ಬೇಕಾದ ಸರಕುಗಳನ್ನು ಖರೀದಿಸಬಹುದಾಗಿದೆ.
2021ನೇ ಆರ್ಥಿಕ ವರ್ಷದಲ್ಲಿ 6,738.3 ಕೋಟಿ ರೂ. ವಹಿವಾಟು ನಡೆಸಿರುವ ಕಂಪನಿ ಈ ಬಾರಿ ಸುಮಾರು 8,000 ಕೋಟಿ ರೂ. ವಹಿವಾಟಿನ ನಿರೀಕ್ಷೆಯಲ್ಲಿದೆ. ಇದರ ನಡುವೆ ರಿಲಯನ್ಸ್ ಮತ್ತು ಉಡಾನ್‌ನಂತಹ ಸ್ಪರ್ಧಿಗಳ ವಿರುದ್ಧ ಹೋರಾಡಲು ಅಲ್ಪಾವಧಿಯಲ್ಲಿ 300 ಮಿಲಿಯನ್ ಡಾಲರ್ (2,310 ಕೋಟಿ ರೂ.) ಅಗತ್ಯವಾಗಿದ್ದು, ಇದನ್ನು ನೀಡಲು ಮಾತೃಸಂಸ್ಥೆ ಸಿದ್ಧವಿಲ್ಲ ಎಂದು ಹೇಳಲಾಗುತ್ತಿದೆ.
ಭಾರತದ ಬದಲಿಗೆ ಜಗತ್ತಿನ ಇತರೆಡೆ ತನ್ನ ಜಾಲ ವಿಸ್ತರಣೆ ಮಾಡುವುದು ಸೂಕ್ತ ಎಂಬ ನಿರ್ಧಾರಕ್ಕೆ ಮೆಟ್ರೋ ಆಡಳಿತ ಮಂಡಳಿ ಬಂದಿದೆ ತನ್ನ ಜಾಗತಿಕ ಕಾರ್ಯಾಚರಣೆಗಳು ಆಹಾರ ಮತ್ತು ದಿನಸಿ ಸಗಟು ವ್ಯಾಪಾರದಲ್ಲಿ ಮಾರುಕಟ್ಟೆ ನಾಯಕತ್ವದಿಂದ ಲಾಭ ಗಳಿಸುವತ್ತ ಗಮನಹರಿಸುತ್ತಿದ್ದು, ಭಾರತದಿಂದ ನಿರ್ಗಮಿಸಲು ನಿರ್ಧರಿಸಿದೆ ಎನ್ನಲಾಗಿದೆ.
ಗುಡ್ ಬೈ ಹೇಳಲಿರುವ Metro Cash and Carry..
Previous Articleಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಖ್ಯಾತ ಜ್ಯೋತಿಷಿ ಯಾರು ಗೊತ್ತಾ?
Next Article ISROಗೆ SSLV ಉಡಾವಣೆಯಲ್ಲಿ ಹಿನ್ನಡೆ