ಹೈದರಾಬಾದ್ (ತೆಲಂಗಾಣ),ಜು.14- ಪ್ರತಿಷ್ಠಿತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡ ಭೂಪನೊಬ್ಬ ಇದುವರೆಗೆ 11 ಮಂದಿ ಮಹಿಳೆಯರನ್ನು ಮದುವೆಯಾಗಿ ವಂಚನೆ ನಡೆಸಿರುವುದು ಬೆಳಕಿಗೆ ಬಂದಿದೆ.
ಖದೀಮನು ಸಚಿವರೊಬ್ಬರ ಸಂಬಂಧಿಯೂ ಆಗಿದ್ದು, ಇದೇ ಈತನ ಬಂಡ ಧೈರ್ಯದ ಕಾರಣ ಎನ್ನುವುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.
ಗುಂಟೂರು ಜಿಲ್ಲೆಯ ಬೇತಂಪುಡಿಯ ಅಡಪ ಶಿವಶಂಕರ್ ಎನ್ನುವ ಖದೀಮನೇ 11ಮಂದಿ ಮಹಿಳೆಯರ ಮದುವೆಯಾಗಿ ವಂಚಿಸಿದ್ದಾನೆ. ವಿವಾಹಿತ ಮತ್ತು ವಿಚ್ಛೇದಿತ ಮಹಿಳೆಯರನ್ನೇ ಗುರಿಯಾಗಿಸಿಕೊಳ್ಳುತ್ತಿದ್ದ ಈತ, ಮದುವೆ ಪರಿಚಯ ವೇದಿಕೆಗಳ ಮೂಲಕ ಮಹಿಳೆಯರನ್ನು ಕಂಡುಕೊಳ್ಳುತ್ತಿದ್ದ. ಹೀಗೆ ಒಬ್ಬರಿಗೆ ಗೊತ್ತಿಲ್ಲದೇ ಮತ್ತೊಬ್ಬರನ್ನು ಮದುವೆಯಾಗಿದ್ದಾನೆ.
ಅಚ್ಚರಿ ಎಂದರೆ ಈತನಿಂದ ವಂಚನೆಗೆ ಒಳಗಾದವರೆಲ್ಲರೂ ಉನ್ನತ ಶಿಕ್ಷಣ ಪಡೆದವರಾಗಿದ್ದಾರೆ.
ಒಟ್ಟಿಗೆ ಇಬ್ಬರು ಪತ್ನಿಯರು ಪ್ರತ್ಯಕ್ಷ: ಶಿವಶಂಕರ್ನ ಮೋಸಕ್ಕೆ ಬಲಿಯಾದ 11 ಮಂದಿಯ ಪೈಕಿ ಇಬ್ಬರು ಮಹಿಳೆಯರು ಒಟ್ಟಿಗೆ ಪ್ರತ್ಯಕ್ಷವಾದಾಗ ಈತನ ಬಂಡವಾಳ ಬಯಲಿಗೆ ಹಾಕಿದ್ದಾರೆ.
ಹೈದರಾಬಾದ್ ಪ್ರೆಸ್ಕ್ಲಬ್ನಲ್ಲಿ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದ ಈ ಇಬ್ಬರು, ನಮ್ಮಂತೆ ಶಿವಶಂಕರ್ ಈಗಾಗಲೇ ಹಲವರಿಗೆ ವಂಚನೆ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅಲ್ಲದೇ, ಮದುವೆ ಹೆಸರಲ್ಲಿ ಮೋಸ ಮಾಡಿ ಸುಮಾರು 60 ಲಕ್ಷ ನಗದು ಹಾಗು ಚಿನ್ನಾಭರಣ ನೀಡಿದ್ದಾನೆ ಎಂದು ಅಳಲು ತೋಡಿಕೊಂಡರು.
ದೊಡ್ಡ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವುದರಿಂದ ಪರಿಚಯ ಮಾಡಿಕೊಂಡು ಶಿವಶಂಕರ್ ಮದುವೆಯಾಗುತ್ತಾನೆ. ಅದೊಂದು ದೊಡ್ಡ ಕೆಲಸ, ಯಾವಾಗ ಬೇಕಾದರೂ ಹೋಗಬೇಕಾಗುತ್ತದೆ ಎಂದು ಹೇಳುತ್ತಾನೆ. ಆದರೆ, ನಿಜವಾಗಿಯೂ ಯಾವುದೇ ಕೆಲಸವನ್ನು ಮಾಡುವುದಿಲ್ಲ. ಕೆಲಸ ಇಲ್ಲದ ಶಿವಶಂಕರ್, ‘ಗ್ರಾಹಕರ’ ಬಳಿ ಹೋಗುವುದಾಗಿ ಹೇಳಿ ಬೇರೆ ಪತ್ನಿಯರ ಬಳಿ ಹೋಗುತ್ತಿದ್ದ ಎಂದು ಸಂತ್ರಸ್ತ ಪತ್ನಿಯರು ಹೇಳಿಕೊಂಡಿದ್ದಾರೆ.
ಅಲ್ಲದೇ, ವಂಚನೆಗೊಳಗಾದ 11 ಮಂದಿ ಮಹಿಳೆಯರಲ್ಲಿ ಏಳು ಮಂದಿ ಕೊಂಡಾಪುರ ಪ್ರದೇಶದವರೇ ಆಗಿದ್ದಾರೆ. ಮುಂದೆ ಬೇರೆ ಯಾವ ಮಹಿಳೆಯರು ಕೂಡ ಶಿವಶಂಕರ್ನಿಂದ ಮೋಸ ಹೋಗಬಾರದು ಎಂಬ ಉದ್ದೇಶದಿಂದ ಮಾಧ್ಯಮಗಳ ಮುಂದೆ ಬಂದಿರುವುದಾಗಿ ತಿಳಿಸಿದ್ದಾರೆ. ಜೊತೆಗೆ ಶಿವಶಂಕರ್ ವಿರುದ್ಧ ಈಗಾಗಲೇ ಹಲವು ಠಾಣೆಗಳಲ್ಲಿ ಪ್ರಕರಣಗಳಿದ್ದರೂ, ಪೊಲೀಸರು ಕ್ರಮಕ್ಕೆ ಮುಂದಾಗಿಲ್ಲ. ಈಗಲಾದರೂ, ಶಿವಶಂಕರ್ಗೆ ಕಠಿಣ ಶಿಕ್ಷೆ ವಿಧಿಸಿ ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಸಂತ್ರಸ್ತ ಮಹಿಳೆಯರು ಆಗ್ರಹಿಸಿದ್ದಾರೆ.