ಮುಂಬೈ, ಅ 1೦-ಭಾರತದ ಹೆಮ್ಮೆಯ ಉದ್ಯಮಿ 1 ಲಕ್ಷಕ್ಕೆ ನ್ಯಾನೋ ಕಾರು ನೀಡಿ ಜನ ಸಾಮಾನ್ಯರು ಸಹ ಕಾರಿನಲ್ಲಿ ಓಡಾಡುವ ಕನಸನ್ನು ನನಸು ಮಾಡಿದ ಉತ್ತಮ ಚಿಂತಕ, ಟಾಟಾ ಸನ್ಸ್ ಅಧ್ಯಕ್ಷ ರತನ್ ಟಾಟಾ ಮುಂಬೈನಲ್ಲಿ 86 ನೇ ವಯಸ್ಸಿನಲ್ಲಿ ಬುಧವಾರ ರಾತ್ರಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಇವರು ಚಿಕಿತ್ಸೆಗಾಗಿ ಮೊನ್ನೆಯಷ್ಟೇ ಮುಂಬೈನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಮತ್ತೆ ಅವರ ಅನಾರೋಗ್ಯ ಉಲ್ಬಣಿಸಿದಾಗ ಆಸ್ಪತ್ರೆಗೆ ಸೇರಿಸಲಾಗಿತ್ತು. ಬುಧವಾರ ರಾತ್ರಿ ರತನ್ ಟಾಟಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
1937 ರಲ್ಲಿ ಶ್ರೀಮತಿ ಸೂನಿ ಮತ್ತು ನಾವಲ್ ಹರ್ಮುಸ್ ಜಿ ಟಾಟಾ ದಂಪತಿಯ ಹಿರಿಯ ಮಗನಾಗಿ ರತನ್ ಟಾಟಾ ಬೊಂಬಾಯಿನಲ್ಲಿ ಜನಿಸಿದರು. 1991 ರಲ್ಲಿ ಟಾಟಾ ಕಂಪನಿಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡು ಕೈಗಾರಿಕಾ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದವರು. ಜೊತೆಯಲ್ಲಿ ಅನೇಕ ಪ್ರಮುಖ ಟಾಟಾ ಉದ್ಯಮಗಳಾದ ಟಾಟಾ ಸ್ಟೀಲ್, ಟಾಟಾ ಮೋಟರ್ಸ್, ಟಾಟಾ ಪವರ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಟಾಟಾ ಟೀ, ಟಾಟಾ ತಂತ್ರಜ್ಞಾನ, ಇಂಡಿಯನ್ ಹೋಟೆಲ್ಸ್ ಮತ್ತು ಟಾಟಾ ಟೆಲಿ ಸರ್ವಿಸಸ್ ಮುಂತಾದ ಕಂಪನಿಗಳನ್ನು ಸ್ಥಾಪಿಸಿದ್ದರು. 2008 ರಲ್ಲಿ ಭಾರತ ಸರ್ಕಾರ ರತನ್ ಟಾಟಾ ಅವರಿಗೆ ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣವನ್ನು ನೀಡಿ ಗೌರವಿಸಿತು.
ಇವರು ಕೇವಲ ಕೈಗಾರಿಕೋದ್ಯಮ, ವ್ಯಾಪಾರ ಸಾಮ್ರಾಜ್ಯದಲ್ಲಿ ಮಾತ್ರವಲ್ಲದೇ ಸಮಾಜ ಸೇವೆ, ಪರೋಪಕಾರದಲ್ಲೂ ಅವರಿಗೆ ಸರಿಸಾಟಿ ಯಾರೂ ಇಲ್ಲ, ದಾನ ಧರ್ಮಗಳಲ್ಲಿ ರತನ್ ಟಾಟಾ ನಿಜಕ್ಕೂ ಉದಾತ್ತ ವ್ಯಕ್ತಿಯಾಗಿದ್ದು, ತಮ್ಮ ಗಳಿಕೆಯ ಬಹುಪಾಲನ್ನು ಸಾಮಾಜಿಕ ಸೇವೆ, ದಾನ ಧರ್ಮಗಳಲ್ಲಿ ವಿನಿಯೋಗಿಸಿದ್ದಾರೆ.
ಇಂತಹ ಉದ್ಯಮ ದಿಗ್ಗಜನಿಗೆ ಮಾನ್ಯ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು, ರಕ್ಷಣಾ ಸಚಿವ ರಾಜನಾಥ್ ಸಿಂಗ್,ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಅಮಿತ್ ಷಾ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.