ಬೆಂಗಳೂರು,ಸೆ.6:
ಕರ್ನಾಟಕದ ಐಟಿ ಕ್ಷೇತ್ರದ ದಿಗ್ಗಜ ಸಂಸ್ಥೆ ಇನ್ಫೋಸಿಸ್ ವಿರುದ್ಧ ಇದೀಗ ಶೋಷಣೆ ಆರೋಪದ ಪ್ರಕರಣ ದಾಖಲಾಗಿದೆ. ಐಟಿ ಪದವೀಧರರನ್ನು ಈ ಸಂಸ್ಥೆ ಶೋಷಣೆ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು ಇದರ ಬಗ್ಗೆ ಪರಿಶೀಲನೆ ನಡೆಸಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಮಾಹಿತಿ ತಂತ್ರಜ್ಞಾನ ಸೇವಾ ಕಂಪನಿ ಇನ್ಫೊಸಿಸ್ ‘ಐ.ಟಿ. ಪದವೀಧರರನ್ನು ಶೋಷಣೆಗೆ ಗುರಿಪಡಿಸಿದೆ’ ಎಂಬ ಆರೋಪ ಕೇಂದ್ರ ಸರ್ಕಾರವನ್ನು ತಲುಪಿದೆ. ಈ ದೂರಿನ ಬಗ್ಗೆ ಪರಿಶೀಲನೆ ನಡೆಸುವಂತೆ ಕೇಂದ್ರ ಕಾರ್ಮಿಕ ಸಚಿವಾಲಯವು ರಾಜ್ಯದ ಕಾರ್ಮಿಕ ಇಲಾಖೆಗೆ ಸೂಚನೆ ನೀಡಿದೆ.
ಸಿಸ್ಟಂ ಎಂಜಿನಿಯರ್ ಮತ್ತು ಡಿಜಿಟಲ್ ಸ್ಪೆಷಲಿಸ್ಟ್ ಎಂಜಿನಿಯರ್ ಹುದ್ದೆಗಳಿಗೆ (ಒಟ್ಟು 2,500 ಮಂದಿಗೆ) ನೇಮಕ ಮಾಡಿಕೊಳ್ಳುವುದಾಗಿ ಕಂಪನಿಯು 2022ರಲ್ಲಿಯೇ ಹೇಳಿ ಪ್ರಕ್ರಿಯೆ ಪೂರ್ಣಗೊಳಿಸಿದೆ. ಆದರೂ ಇಲ್ಲಿಯವರೆಗೆ ತಮ್ಮನ್ನು ನೇಮಕಾತಿ ಮಾಡಿಕೊಂಡಿಲ್ಲ ಈ ಬಗ್ಗೆ ಯಾವುದೇ ಮಾಹಿತಿಯನ್ನು ನೀಡುತ್ತಿಲ್ಲ ನಾವು ಬೇರೆ ಕಡೆ ಕೆಲಸಕ್ಕೂ ಸೇರದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಐಟಿ ಪದವೀಧರರು ಆಪಾದಿಸಿದ್ದಾರೆ.
ಈ ಕುರಿತಂತೆ ಐ.ಟಿ. ಉದ್ಯೋಗಿಗಳ ಸಂಘಟನೆಯಾದ ಎನ್‌ಐಟಿಇಎಸ್‌ನ ಅಧ್ಯಕ್ಷ ಹರಪ್ರೀತ್ ಸಿಂಗ್ ಸಲುಜಾ ಎಂಬುವರು ಇ-ಮೇಲ್ ಮೂಲಕ ಕೇಂದ್ರ ಕಾರ್ಮಿಕ ಇಲಾಖೆಗೆ ಸಲ್ಲಿಸಿದ ದೂರಿಗೆ ಪ್ರತಿಯಾಗಿ ಕೇಂದ್ರವು, ಅಗತ್ಯ ಕ್ರಮವನ್ನು ಕೈಗೊಳ್ಳುವಂತೆ ರಾಜ್ಯಕ್ಕೆ ಸೆಪ್ಟೆಂಬರ್ 3ರಂದು ಬರೆದ ಪತ್ರದಲ್ಲಿ ಹೇಳಿದೆ.