ಬೆಂಗಳೂರು,ಮಾ.24- ಲೋಕಸಭೆ ಚುನಾವಣೆ ಅಖಾಡಕ್ಕೆ ಭರ್ಜರಿ ರಂಗು ಬಂದಿದೆ. ಗಣಿನಾಡು ಬಳ್ಳಾರಿಯಲ್ಲಿ ಬಿಸಿಲೇರಿದಂತೆ ರಾಜಕೀಯ ಚಟುವಟಿಕೆಗಳು ಬಿರುಸಾಗಿ ನಡೆಯ ತೊಡಗಿವೆ.
ಬಿಜೆಪಿ ಅಭ್ಯರ್ಥಿಯಾಗಿ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಬಿ ಶ್ರೀರಾಮುಲು ಅವರು ಕಣಕ್ಕೆ ಇಳಿದಿದ್ದು ಕಾಂಗ್ರೆಸ್ಸಿನಿಂದ ಈ ಬಾರಿ ಅವರು ಪ್ರಬಲ ಪೈಪೋಟಿ ಎದುರಿಸುತ್ತಿದ್ದಾರೆ. ಅದರಲ್ಲೂ ಶಾಸಕ
ಇ.ತುಕಾರಾಂ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವುದರಿಂದ ಶ್ರೀರಾಮುಲು ಗೆಲುವಿನ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ಹೀಗಾಗಿ ತಮ್ಮ ಒಂದು ಕಾಲದ ಗೆಳೆಯ ಹಾಗೂ ಮಾಜಿ ಸಚಿವ ಜನಾರ್ಧನ ರೆಡ್ಡಿ ಅವರನ್ನು ಪಕ್ಷಕ್ಕೆ ಕರೆ ತರಲು ಸತತ ಪ್ರಯತ್ನ ನಡೆಸಿದ್ದು ಇದೀಗ ಯಶಸ್ವಿಯಾಗಿದ್ದಾರೆ.
ಜನಾರ್ಧನ ರೆಡ್ಡಿ ಅವರು ನಾಳೆ ದೆಹಲಿಯಲ್ಲಿ ಪಕ್ಷದ ಹಿರಿಯ ನಾಯಕ ಅಮಿತ್ ಶಾ ಅವರ ಸಮ್ಮುಖದಲ್ಲಿ
ಬಿಜೆಪಿಗೆ ಮರು ಸೇರ್ಪಡೆಯಾಗುತ್ತಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯ ಸಮಯದಲ್ಲಿ ಬಿಜೆಪಿ ಸೇರಲು ಸಾಕಷ್ಟು ಪ್ರಯತ್ನ ನಡೆಸಿದ್ದ ಜನಾರ್ಧನರೆಡ್ಡಿ ಅದರಲ್ಲಿ ಯಶಸ್ವಿಯಾಗದ ಹಿನ್ನೆಲೆಯಲ್ಲಿ ಪ್ರತ್ಯೇಕ ಪಕ್ಷ ಕಟ್ಟಿದ್ದರು. ಇದರಿಂದಾಗಿ ಬಳ್ಳಾರಿ ಸೇರಿದಂತೆ ರೆಡ್ಡಿ ಅವರ ಪ್ರಾಬಲ್ಯವಿರುವ ಜಿಲ್ಲೆಗಳಲ್ಲಿ ಬಿಜೆಪಿ ಸಾಕಷ್ಟು ಹಿನ್ನಡೆ ಅನುಭವಿಸಿತ್ತು. ಇದಾದ ನಂತರ ಅವರನ್ನು ಮತ್ತೆ ಬಿಜೆಪಿಗೆ ತರುವ ಪ್ರಯತ್ನಗಳು ನಡೆದಿದ್ದವು.
ಕಳೆದ ವಾರವಷ್ಟೇ ರೆಡ್ಡಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾಗಿ ಪಕ್ಷ ಸೇರ್ಪಡೆಯ ಇಂಗಿತವನ್ನು ವ್ಯಕ್ತಪಡಿಸಿದರು. ನಾನು ಯಾವುದೇ ಷರತ್ತು ಇಲ್ಲದೆ ಬಿಜೆಪಿಗೆ ಬರುತ್ತೇನೆ. ರಾಜ್ಯ ಘಟಕಕ್ಕೆ ಸೂಚನೆ ನೀಡಬೇಕೆಂದು ಮನವಿ ಮಾಡಿದ್ದರು.ಈ
ಹಿನ್ನಲೆಯಲ್ಲಿ ಅಮಿತ್ ಷಾ ಅವರು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಮತ್ತಿತರರ ಜೊತೆ ಮಾತನಾಡಿ, ರೆಡ್ಡಿ ಸೇರ್ಪಡೆಗೆ ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸುವಂತೆ ಸೂಚಿಸಿದ್ದರು.
ಜನಾರ್ಧನ ರೆಡ್ಡಿ ಪಕ್ಷ ಸೇರ್ಪಡೆಯಿಂದಾಗಿ ಬಳ್ಳಾರಿ, ಕೊಪ್ಪಳ, ರಾಯಚೂರು, ಗದಗ, ಹಾವೇರಿ ಜಿಲ್ಲೆಗಳಲ್ಲಿ ಬಿಜೆಪಿಗೆ ಆನೆ ಬಲ ಬಂದಂತಾಗಿದೆ.
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಬಿಐ 2011ರ ಸೆಪ್ಟೆಂಬರ್ 5ರಂದು ಬಂಧಿಸಿತ್ತು.
ಈ ಪ್ರಕರಣದ ನಂತರ ರೆಡ್ಡಿ ರಾಜಕೀಯ ಭವಿಷ್ಯವೇ ಮುಳುಗಿ ಹೋಗಿತ್ತು. ಸುಪ್ರೀಂಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದ ಬಳಿಕ ಜೈಲಿನಿಂದ ಆಚೆ ಬಂದ ನಂತರ ಸಕ್ರಿಯ ರಾಜಕಾರಣಕ್ಕೆ ಮರಳಿದ್ದರು. ಈಗಲೂ ಕೂಡ ಜನಾರ್ಧನ ರೆಡ್ಡಿ ತವರು ಜಿಲ್ಲೆ ಬಳ್ಳಾರಿ ಪ್ರವೇಶಕ್ಕೆ ನಿರ್ಬಂಧವಿದೆ. ಇದೀಗ ಬಿಜೆಪಿಗೆ ಆಗಮನವಾಗುತ್ತಿರುವುದರಿಂದ ಬಳ್ಳಾರಿಯಲ್ಲಿ ರಾಜಕೀಯ ಏರಿಳಿತಗಳು ಉಂಟಾಗುವ ಸಂಭವವಿದೆ.