ಬೆಂಗಳೂರು, ಜ.29- ಚಿನ್ನಾಭರಣಗಳ ಹಾಲ್‌ಮಾರ್ಕ್ ಹಾಗೂ ಜಿ ಎಸ್ ಟಿ ದಾಖಲೆಗಳ ಪರಿಶೀಲನೆಯ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಅಧಿಕಾರಿಗಳು ಎಂದು ಹೇಳಿಕೊಂಡು ಚಿನ್ನಾಭರಣ ದೋಚಿ ಪರಾರಿಯಾಗುವ ವೇಳೆ ದರೋಡೆಕೋರರು ಸಿನಿಮೀಯ ರೀತಿಯಲ್ಲಿ ಸಿಕ್ಕಿ ಬಿದ್ದಿದ್ದಾರೆ.
ಕೇರಳದ ಎರಾಕುಲಂ ಜಿಲ್ಲೆಯ ಸಂಬತ್ ಕುಮಾರ್ ಅಲಿಯಾಸ್ ಸಂಪತ್(55) ತ್ರಿಶೂರ್ ಜಿಲ್ಲೆಯ ಜೋಶಿ(54) ಉತ್ತರಪ್ರದೇಶದ ಗಾಜಿಯಾಬಾದ್ ಜಿಲ್ಲೆಯ ಸಂದೀಪ್ ಶರ್ಮಾ(48) ಹಾಗೂ ಅವಿನಾಶ್ ಕುಮಾರ್(27) ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತ ಆರೋಪಿಗಳು ಇನ್ನೊವಾ ಕಾರಿನಲ್ಲಿ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ನ ಸ್ಟಿಕ್ಕರ್ ಅಂಟಿಸಿಕೊಂಡು ತಾವು ಬಿಐಎಸ್ ಅಧಿಕಾರಿಗಳು ಎಂದು ಹೇಳಿಕೊಂಡು ಕೆಆರ್ಪುರಂನ ಭಟ್ಟರಹಳ್ಳಿಯ ಆರ್ ಎಂ ಎಸ್ ಕಾಲೋನಿಯ ಮಹಾಲಕ್ಷ್ಮಿ ಜ್ಯುವೆಲರ್ಸ್ ಮೇಲೆ ದಾಳಿ ಮಾಡಿ 45 ನಿಮಿಷ ಕಾರ್ಯಾಚರಣೆ ನಡೆಸಿದರು. ಹಾಲ್ ಮಾರ್ಕ್ ಹಾಕಿಲ್ಲ ಎಂದು ಅಂಗಡಿಯಲ್ಲಿದ್ದ 80 ಲಕ್ಷ ಮೌಲ್ಯದ 1 ಕೆಜಿಗೂ ಅಧಿಕ ಚಿನ್ನ ತೆಗೆದುಕೊಂಡು ಇವೆಲ್ಲವನ್ನೂ ಜಪ್ತಿ ಮಾಡುವುದಾಗಿ ಹೇಳಿದರು.
ಅಂಗಡಿ ಮಾಲೀಕರಿಗೆ ಬಿಐಎಸ್ ಅಧಿಕಾರಿಗಳ ಹೆಸರಲ್ಲಿ ಜಪ್ತಿ ಪ್ರಮಾಣ ಪತ್ರ ನೀಡಿ ಮುಂದಿನ ವಾರ ಚೆನ್ನೈನ ಕಚೇರಿಗೆ ಬಂದು ಕಾನೂನು ಪ್ರಕ್ರಿಯೆ ಮುಗಿಸಿ ಚಿನ್ನ ವಾಪಸ್ ತೆಗೆದುಕೊಂಡು ಹೋಗುವಂತೆ ಹೇಳಿದರು
ಆನಂತರ ಜಪ್ತಿ ಮಾಡಿದ ಚಿನ್ನವನ್ನು ಕಾರಿನಲ್ಲಿ ತುಂಬಿಕೊಂಡು ಹೋಗುವಾಗ ಸಿಸಿಟಿವಿ ಡಿವಿಆರ್ ತೆಗೆದುಕೊಂಡು ಹೋಗಿದ್ದಾರೆ. ಇದನ್ನು ಕಂಡು ಅನುಮಾನಗೊಂಡ ಚಿನ್ನದ ಅಂಗಡಿ ಕೆಲ ಸಿಬ್ಬಂದಿಗಳು,ಮತ್ತೊಂದು ವಾಹನದಲ್ಲಿ ಇವರ ಕಾರನ್ನು ಹಿಂಬಾಲಿಸಿದ್ದಾರೆ.ಅವರನ್ನು ಕಂಡ ಆರೋಪಿಗಳು ಹೆದರಿ ತಪ್ಪಿಸಿಕೊಳ್ಳಲು ಮುಂದಾಗಿ ಟಿಸಿ ಪಾಳ್ಯದಲ್ಲಿ ಬೈಕ್ಗಳಿಗೆ ಡಿಕ್ಕಿ ಹೊಡೆದಿದ್ದಾರೆ.
ಮತ್ತೊಂದೆಡೆ ಅಂಗಡಿ ಮಾಲಿಕರಿಗೂ ಈ ಬಗ್ಗೆ ಅನುಮಾನ ಬಂದು ಕೆಆರ್ಪುರಂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದರ ಬೆನ್ನಲ್ಲೇ ಪೊಲೀಸರಿಗೆ ಸರಣಿ ಅಪಘಾತದ ಮಾಹಿತಿ ದೊರೆತಿದೆ.
ಕೂಡಲೇ ಎಚ್ಚರಗೊಂಡ ಪೊಲೀಸರು ಟಿಸಿ ಪಾಳ್ಯದ ಕಡೆಗೆ ಹೋಗಿದ್ದು, ಪೊಲೀಸರು ಬರುವುದನ್ನು ಕಂಡ ನಕಲಿ ಅಧಿಕಾರಿಗಳು ಪರಾರಿಯಾಗಲು ಯತ್ನಿಸಿದ್ದಾರೆ. ಅವರನ್ನು ಬೆನ್ನತ್ತಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾ ಬಂದಿತಸಂಬತ್ ಕುಮಾರ್ ಅಲಿಯಾಸ್ ಸಂಪತ್ ಹಿಂದೆ ಮಂಡ್ಯದಲ್ಲಿ ಕಳ್ಳತನ ಕೃತ್ಯ ನಡೆಸಿ ಬಂಧಿತನಾಗಿ ಜೈಲು ವಾಸ ಅನುಭವಿಸಿ ಬಿಡುಗಡೆಯಾಗಿದ್ದನು. ಅದಾದ ಬಳಿಕ ತಮಿಳುನಾಡು ಮೂಲದ ಓರ್ವ ವ್ಯಕ್ತಿಯ ಸಂರ್ಪಕಕ್ಕೆ ಬಂದಿದ್ದಾನೆ. ಆತನ ನಿರ್ದೇಶನದಂತೆ ಈ ಕೃತ್ಯಕ್ಕೆ ಕೈ ಹಾಕಿದ್ದಾನೆ.
ಆರೋಪಿಗಳು ಬಂಧಿತರಾಗುತ್ತಿದ್ದಂತೆ ತಮಿಳುನಾಡು ಮೂಲದ ಮಾಸ್ಟರ್ ಮೈಂಡ್ ನಾಪತ್ತೆಯಾಗಿದ್ದಾನೆ. ಕೆಆರ್ಪುರಂ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.
ಕಳ್ಳತನವಾಗಿದ್ದ ಸಂಪೂರ್ಣ ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದಿರುವ ಕೆಆರ್ ಪುರಂ ಪೊಲೀಸ್ ಇನ್ಸ್‌ಪೆಕ್ಟರ್ ಮಂಜುನಾಥ್ ಮತ್ತವರ ಸಿಬ್ಬಂದಿ ಮುಂದಿನ. ತನಿಖೆಯನ್ನು ಕೈಗೊಂಡಿದ್ದಾರೆ ಎಂದು ಡಿಸಿಪಿ ಶಿವಕುಮಾರ್ ತಿಳಿಸಿದರು.