ಬೆಂಗಳೂರು,ಮೇ.31-ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಮರುಪರಿಷ್ಕರಣ ಸಮಿತಿಯನ್ನು ಸರ್ಕಾರ ಕೂಡಲೇ ರದ್ದುಪಡಿಸಿ ಹಿಂದಿನ ವರ್ಷದ ಪಠ್ಯವನ್ನೇ ಮಕ್ಕಳಿಗೆ ವಿತರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ನಗರದಲ್ಲಿ ಇಂದು ಧರಣಿ ಸತ್ಯಾಗ್ರಹ ನಡೆಸಿದರು.
ಗಾಂಧಿನಗರದ ಸ್ವಾತಂತ್ರ್ಯಉದ್ಯಾನವನದಲ್ಲಿ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರ ನೇತೃತ್ವದಲ್ಲಿ ಸೇರಿದ ನೂರಾರು ಕಾರ್ಯಕರ್ತರು ಪಠ್ಯ ಮರುಪರಿಷ್ಕರಣದಲ್ಲಿ ರಾಷ್ಟ್ರಕವಿ ಕುವೆಂಪು ಅವರನ್ನು, ನಾಡಗೀತೆಯನ್ನು, ಕನ್ನಡ ಧ್ವಜವನ್ನು ಅಪಮಾನಿಸಿರುವ ರೋಹಿತ್ ಚಕ್ರತೀರ್ಥ ಬಂಧಿಸಿ, ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.
ರಾಜ್ಯ ಸರ್ಕಾರವು ಪ್ರೊ. ಬರಗೂರು ರಾಮಚಂದ್ರಪ್ಪ ನೇತೃತ್ವದ ಪಠ್ಯ ಪರಿಷ್ಕರಣ ಸಮಿತಿಯ ಶಾಲಾ ಪಠ್ಯ ಪುಸ್ತಕಗಳನ್ನು ತರಾತುರಿಯಲ್ಲಿ ಮರು ಪರಿಷ್ಕರಿಸಲು ರೋಹಿತ್ ಚಕ್ರತೀರ್ಥ ಎಂಬುವವರ ನೇತೃತ್ವದಲ್ಲಿ ಪಠ್ಯ ಮರು ಪರಿಷ್ಕರಣ ಸಮಿತಿ ನೇಮಿಸಿ ಅದರ ಶಿಫಾರಸಿನ ಅನ್ವಯ ಭಾಷಾ ಪಠ್ಯ ಹಾಗು ಸಮಾಜ ವಿಜ್ಣಾನ ಪಠ್ಯಗಳಲ್ಲಿ ಬದಲಾವಣೆ ತಂದಿರುವುದು ಖಂಡನಾರ್ಹ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮರು ಪರಿಷ್ಕರಿಸಿದ ಪಠ್ಯ ಪುಸ್ತಕಗಳನ್ನು ಮಕ್ಕಳಿಗೆ ಹಂಚಲು ಹೊರಟಿರುವ ಸರ್ಕಾರ ಕ್ರಮ ಅತ್ಯಂತ ಬೇಜವಾಬ್ದಾರಿತನದಿಂದ ಕೂಡಿದ್ದು ಇದರಿಂದ ಲಕ್ಷಾಂತರ ಮಕ್ಕಳ ಭವಿಷ್ಯ ಮತ್ತು ಶಿಕ್ಷಣದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ನಾರಾಯಣಗೌಡ ಆತಂಕ ವ್ಯಕ್ತಪಡಿಸಿದರು. ಪಠ್ಯ ಪುಸ್ತಕಗಳಲ್ಲಿ ಯಾವುದೇ ಬದಲಾವಣೆ ತರುವುದನ್ನು ಮನಸಿಗೆ ಬಂದ ರೀತಿಯಲ್ಲಿ ಮಾಡುವಂತಿಲ್ಲ. ಅದಕ್ಕೆ ತನ್ನದೇ ರೀತಿ ನೀತಿ ಘನತೆಗಳಿರುತ್ತವೆ. ರಾಷ್ಟ್ರೀಯ ಪಠ್ಯ ಚೌಕಟ್ಟುಗಳ ಮಾರ್ಗಸೂಚಿಯಿರುತ್ತದೆ. ಸಂವಿಧಾನದ ತತ್ವಗಳಿಗೆ ಅನುಸಾರವಾಗಿ ಇಂತಹ ಸಮಿತಿಗಳನ್ನು ರಚಿಸಬೇಕಾಗಿದ್ದು
ಅದೆಲ್ಲವುಗಳನ್ನು ರಾಜ್ಯ ಸರ್ಕಾರ ಗಾಳಿಗೆ ತೂರಿ ಯಾರದೋ ಅಜೆಂಡಾವನ್ನು ಶಿಕ್ಷಣದಲ್ಲಿ ತೂರಿಸಲು ಒಂದೇ ಸಿದ್ದಾಂತ ಸಂಘಟನೆಯ ಬೆಂಬಲಿಗರನ್ನು ಸಮಿತಿಯಲ್ಲಿ ಇರಿಸಿ ದುಂಡಾವರ್ತನೆ ಪ್ರದರ್ಶಿಸಿದೆ ಎಂದು ದೂರಿದರು.
ಸಂವಿಧಾನಬದ್ಧ ರೀತಿ ನೀತಿ ಅನುಸರಿಸದೇ ರಚನೆಯಾದ ಈ ಸಮಿತಿ ನೀಡಿರುವ ಎಲ್ಲಾ ಶಿಫಾರಸುಗಳನ್ನು ಅಸಿಂಧುಗೊಳಿಸಿ ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದಲ್ಲಿ ಯಾವ ಯಾವ ಪರಿಷ್ಕರಣೆಗಳನ್ನು ಮಾಡಲಾಗಿತ್ತೋ ಅದೇ ಪ್ರಕಾರ ಕಳೆದ ವರ್ಷದ ಪಠ್ಯಕ್ರಮದ ಪ್ರಕಾರವೇ ಮಕ್ಕಳಿಗೆ ಪುಸ್ತಕ ರಚಿಸಿ ಹಂಚಬೇಕು ಇಲ್ಲದಿದ್ದರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.