ಮೈಸೂರು,ಜೂ.12- ಕಬಿನಿ ಹಿನ್ನೀರಿನಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದ “ಭೋಗೇಶ್ವರ’ ಎಂದೇ ಪ್ರಸಿದ್ಧಿಯಾಗಿದ್ದ ಬೃಹತ್ ದಂತಗಳ ಸಲಗ ಅನಾರೋಗ್ಯದಿಂದ ಮೃತಪಟ್ಟಿದೆ.
ಉದ್ದ ದಂತ, ನಡಿಗೆ ಶೈಲಿಯಿಂದ ಇತರೆ ಆನೆಗಳಿಗಿಂತ ವಿಭಿನ್ನವಾಗಿ ಕಾಣಿಸಿ ಕೊಳ್ಳುತ್ತಿದ್ದ ಈ ಆನೆ, 4 ಅಡಿಗಿಂತಲೂ ಹೆಚ್ಚು ಉದ್ದವಿರುವ ದಂತಹೊಂದಿತ್ತು.
ಈ ದಂತಗಳು ನೆಲಕ್ಕೆ ತಾಕುತ್ತಿದ್ದುದ್ದಲ್ಲದೆ, ಒಂದಕ್ಕೊಂದು ಕೂಡಿಕೊಂಡಿದ್ದು, ಆಹಾರ ಸೇವನೆಗೂ ತೊಡಕಾಗಿದ್ದರೂ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿತ್ತು.
ಬಂಡೀಪುರ, ನಾಗರಹೊಳೆ ಉದ್ಯಾನದಲ್ಲಿ ಬರುವ ಕಬಿನಿ ಹಿನ್ನೀರಿನಲ್ಲಿ ಬೇಸಿಗೆಯಲ್ಲಿ ಆನೆಗಳ ಹಿಂಡು ಕಾಣಿಸಿಕೊಳ್ಳುತ್ತವೆ. ಈ ಗಜರಾಜ ದರ್ಶನ ನೀಡುವುದು ತೀರಾ ಅಪರೂಪವಾಗಿತ್ತು.
ರಾಜ್ಯದಲ್ಲಿ 80 ಹಾಗೂ 90ರದ ದಶಕದಲ್ಲಿ ವೀರಪ್ಪನ್, ಕೇರಳದ ದಂತಚೋರರ ಕಾಟ ಜೋರಾಗಿತ್ತು. ಆ ದಿನಗಳಲ್ಲಿ ನಡೆದ ಆನೆಗಳ ಮಾರಣ ಹೋಮದಿಂದ ಬಂಡೀಪುರ ಮತ್ತು ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ದಂತಚೋರರ ಕಣ್ಣಿಗೆ ಬೀಳದೆ ಅಳಿದುಳಿದ ಆನೆಗಳಲ್ಲಿ ಈ ಭೋಗೇಶ್ವರ ಆನೆಯೂ ಒಂದು.
65 ವಯಸ್ಸು ದಾಟಿದ ಕೂಡು ಕೋರೆಯ ವಿಶೇಷ ಆನೆಗಳು ನೀಲಗಿರೀಸ್ ವ್ಯಾಪ್ತಿಯಲ್ಲಿ ಕಾಣಸಿಗುವುದು ಕೇವಲ 7. ಇವುಗಳು ಹೊಂದಿರುವ ವಿಶೇಷ ದಂತ ರಚನೆಯೇ ಇತರೆ ಆನೆಗಳಿಂದ ವಿಭಿನ್ನವಾಗಿ ಕಾಣಲು ಕಾರಣವಾಗಿದೆ.
ದಿನಕ್ಕೆ 65ರಿಂದ 70 ಕಿ.ಮೀ. ದೂರದಷ್ಟು ತಾನು ಗುರುತಿಸಿಕೊಂಡಿರುವ ವ್ಯಾಪ್ತಿಯೊಳಗೆ ಓಡಾಡುತ್ತಿದ್ದಂತ ಈ ಆನೆ, ಒಂದೇ ಪ್ರದೇಶದಲ್ಲಿ ಹೆಚ್ಚು ಕಾಣಸಿಗುತ್ತಿರಲಿಲ್ಲ. ಮೃತ ಆನೆಗೆ ಸುಮಾರು 76 ವರ್ಷ ವಯಸ್ಸಾಗಿತ್ತು ಎಂದು ಅಂದಾಜಿಸಲಾಗಿದೆ.