ಬೆಂಗಳೂರು,ಆ.2-ದೊಣ್ಣೆಯಿಂದ ಹೊಡೆದು ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ದುರ್ಘಟನೆ ಆನೇಕಲ್ ತಾಲೂಕಿನ ಲಕ್ಷ್ಮಿಸಾಗರದಲ್ಲಿ ನಡೆದಿದೆ.
ತಮಿಳುನಾಡಿನ ಡೆಂಕಣಿಕೋಟೆ ಮೂಲದ ಮಾದಮ್ಮ ಕೊಲೆಯಾದವರು. ಕೆಲ ವರ್ಷಗಳ ಹಿಂದೆ ಪತಿ ತೀರಿಕೊಂಡ ಹಿನ್ನೆಲೆಯಲ್ಲಿ ಮಾದಮ್ಮ ತಮಿಳುನಾಡಿನಿಂದ ಆನೇಕಲ್ ತಾಲೂಕಿನ ಲಕ್ಷ್ಮಿಸಾಗರ ಗ್ರಾಮಕ್ಕೆ ಬಂದು ಕಟ್ಟಡ ನಿರ್ಮಾಣದ ಕೆಲಸ ಮಾಡಿಕೊಂಡಿದ್ದರು.
ಈ ವೇಳೆ ಮಣಿ ಎಂಬಾತನ ಪರಿಚಯವಾಗಿ ಪರಿಚಯ ಅನೈತಿಕ ಸಂಬಂಧಕ್ಕೆ ತಿರುಗಿದ್ದು, ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದರು.
ಪ್ರತಿದಿನ ಇಬ್ಬರು ಕಟ್ಟಡ ನಿರ್ಮಾಣ ಕೆಲಸಕ್ಕೆ ಹೋಗಿ ಬಂದು ಸಂಜೆ ವೇಳೆಯಲ್ಲಿ ಮದ್ಯ ಸೇವನೆ ಮಾಡುತ್ತಿದ್ದರು. ಅದೇ ರೀತಿ ಇಂದು ಸಹ ಮದ್ಯ ಸೇವನೆ ಮಾಡುವಾಗ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿದ್ದು, ಅಲ್ಲಿಯೇ ಇದ್ದ ದೊಣ್ಣೆಯಿಂದ ಮಾದಮ್ಮನ ತಲೆಗೆ ಹೊಡೆದು ಬರ್ಬರವಾಗಿ ಹತ್ಯೆಗೈದು ಆರೋಪಿ ಮಣಿ ಪರಾರಿಯಾಗಿದ್ದಾನೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಆನೇಕಲ್ ಉಪವಿಭಾಗದ ಡಿವೈಎಸ್‍ಪಿ ಮಲ್ಲೇಶ್ ಹಾಗು ಸೂರ್ಯನಗರ ಪೊಲೀಸ್ ಇನ್ಸ್ಪೆಕ್ಟರ್ ರಾಘವೇಂದ್ರ ಗೌಡ ಸ್ಥಳ ಪರಿಶೀಲನೆ ನಡೆಸಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ.
ಘಟನೆ ಸಂಬಂಧ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಮಣಿಗಾಗಿ ಬಲೆ ಬೀಸಿದ್ದಾರೆ.