ಬೆಂಗಳೂರು,ಆ.16-ಮದ್ಯ ಖರೀದಿಗಾಗಿ ಹಣ ಹೊಂದಿಸಲು ಬೈಕ್ಗಳ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ.
ಹುಳಿಮಾವುವಿನ ನದೀಂ ಅಹಮ್ಮದ್ ಹಾಗು ಗುಲಾಂ ಹುಸೇನ್ ಬಂಧಿತ ಆರೋಪಿಗಳಾಗಿದ್ದು,ಇವರೊಂದಿಗೆ ಕೃತ್ಯದಲ್ಲಿ ಭಾಗಿಯಾಗಿ ಪರಾರಿಯಾಗಿರುವ ಮತ್ತೊಬ್ಬ ಆರೋಪಿಯ ಬಂಧನಕ್ಕೆ ತೀವ್ರ ಶೋಧ ನಡೆಸಲಾಗಿದೆ.
ಬಂಧಿತರಿಂದ 2 ಆಟೋ, 6 ದ್ವಿಚಕ್ರ ವಾಹನ ಹಾಗು 1 ಕಾರು ಜಪ್ತಿ ಮಾಡಲಾಗಿದೆ.
ಪದೇ ಪದೆ ಅಪರಾಧ ಎಸಗುತ್ತಿದ್ದ ಆರೋಪಿಗಳು, ಕೆಲ ಪ್ರಕರಣಗಳಲ್ಲಿ ಜೈಲಿಗೂ ಹೋಗಿ ಜಾಮೀನು ಪಡೆದು ಹೊರ ಬಂದಿದ್ದರು.
ಮದ್ಯ ಖರೀದಿಗೆ ಹಣ ಹೊಂದಿಸಲು ಸಾರ್ವಜನಿಕ ಸ್ಥಳ ಹಾಗೂ ಮನೆ ಮುಂದೆ ನಿಲ್ಲಿಸುತ್ತಿದ್ದ ವಾಹನಗಳನ್ನು ನಕಲಿ ಕೀ ಬಳಸಿ ಇಲ್ಲವೇ ಹ್ಯಾಂಡಲ್ ಲಾಕ್ ಮುರಿದು ಕಳವು ಮಾಡುತ್ತಿದ್ದರು.
ಕಳವು ವಾಹನಗಳ ನಂಬರ್ ಪ್ಲೇಟ್ ಬದಲಾಯಿಸಿ, ಕಡಿಮೆ ಬೆಲೆಗೆ ಮಾರುತ್ತಿದ್ದರು. ಕೆಲ ಮನೆಗಳಲ್ಲೂ ಆರೋಪಿಗಳು ಕಳ್ಳತನ ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.