ಬೆಂಗಳೂರು: ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಜೆಡಿಎಸ್ ತಯಾರಿ ನಡೆಸಿರುವ ಬೆನ್ನಲ್ಲೇ ಆಡಳಿತಾರೂಡ ಬಿಜೆಪಿ ಕೂಡಾ ಈ ಸಂಬಂಧ ಸಿದ್ದತೆ ಆರಂಭಿಸಿದೆ.
ಪಕ್ಷದ ಶಾಸಕರು ಮತ್ತು ಸಚಿವರೊಂದಿಗೆ ಸಮಾಲೋಚನೆ ಆರಂಭಿಸಿದ್ದು ಅವಧಿಪೂರ್ಣ ಚುನಾವಣೆ ಕುರಿತಂತೆಯೂ ಚರ್ಚೆ ನಡೆಸಿದೆ.
ಇತ್ತೀಚೆಗೆ ನಡೆಸಿರುವ ಕೆಲವು ಸಮೀಕ್ಷಾ ವರದಿಗಳು ರಾಜ್ಯದಲ್ಲಿ ಬಿಜೆಪಿ ಜನಪ್ರಿಯತೆ ಕುಸಿದಿದೆ. ಸರ್ಕಾರದ ಪರವಾಗಿ ಜನರಲ್ಲಿ ಸಕಾರಾತ್ಮಕ ಧೋರಣೆಯಿದೆ. ಭ್ರಷ್ಟಾಚಾರ ಆರೋಪಗಳ ಬಗ್ಗೆ ಜನ ಬೇಸರಗೊಂಡಿದ್ದಾರೆ. ಈ ನಡುವೆ ಸಿದ್ದರಾಮೋತ್ಸವ ಸೇರಿ ಕಾಂಗ್ರೆಸ್ ಸಭೆಗಳು ಜನರ ಗಮನ ಸೆಳೆಯತ್ತಿವೆ ಎಂದು ತಿಳಿಸಿವೆ.
ಈ ವರದಿಗಳನ್ನು ಗಂಭೀರವಾಗಿ ಪರಿಗಣಿಸಿರುವ ಹೈಕಮಾಂಡ್ ಮತ್ತು ಸಂಘ ಪರಿವಾರ ಇದನ್ನು ಯಶಸ್ವಿಯಾಗಿ ಹತ್ತಿಕ್ಕಿ ಪಕ್ಷದ ಪರ ವಾತಾವರಣ ಮೂಡಿಸಬೇಕು, ಈ ವಿಚಾರದಲ್ಲಿ ಅವಧಿ ಪೂರ್ವ ಚುನಾವಣೆಯೂ ಸೇರಿ ಯಾವೆಲ್ಲಾ ಕ್ರಮ ಸಾಧ್ಯವೋ ಆ ಬಗ್ಗೆ ಚರ್ಚಿಸಿ ವರದಿ ನೀಡುವಂತೆ ಸೂಚನೆ ನೀಡಿದೆ.
ಈ ಹಿನ್ನೆಲೆಯಲ್ಲಿ ಬೆಂಗಳೂರು ಹೊರವಲಯದ ದೇವನಹಳ್ಳಿಯ ರೆಸಾರ್ಟ್‌ವೊಂದರಲ್ಲಿ ಸಭೆ ನಡೆಯುತ್ತಿದ್ದು, ಆಯ್ದ ಶಾಸಕರು ಮತ್ತು ಸಚಿವರನ್ನು ಈ ಸಭೆಗೆ ಆಹ್ವಾನಿಸಲಾಗಿದೆ.
ವಿಧಾನಸಭೆ ಚುನಾವಣೆ ಎದುರಿಸುವ ನಿಟ್ಟಿನಲ್ಲಿ ಯಾವ ರೀತಿಯಲ್ಲಿ ಸಿದ್ದತೆ ಕೈಗೊಳ್ಳಬೇಕು ಹಾಗು ಯಾವ ರೀತಿಯ ಕಾರ್ಯತಂತ್ರಗಳನ್ನು ಹಮ್ಮಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಸಭೆಯಲ್ಲಿ ಚರ್ಚೆ ನಡೆಯುತ್ತಿದೆ.
ಸರ್ಕಾರದ ಕಾಮಗಾರಿಗಳಲ್ಲಿ ಶೇ.40. ಕಮಿಷನ್ ಆರೋಪ, ಪಿಎಸ್‌ಐ ಪರೀಕ್ಷೆ ಅಕ್ರಮ ವಿಚಾರಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ರಾಜ್ಯ ಸರ್ಕಾರದ ವಿರುದ್ಧ ಅಭಿಯಾನ ಕೈಗೊಳ್ಳುತ್ತಿದೆ. ಭ್ರಷ್ಟಾಚಾರದ ಆರೋಪ ಸರ್ಕಾರಕ್ಕೂ ಮುಜುಗರ ತಂದೊಡ್ಡಿದೆ. ಅಷ್ಟೇ ಅಲ್ಲದೆ ಇಬ್ಬರು ಹಿರಿಯ ಅಧಿಕಾರಿಗಳ ಬಂಧನ ಹಾಗು ಅದರ ಸುತ್ತ ನಡೆಯುತ್ತಿರುವ ಬೆಳವಣಿಗೆಗಳು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಇದನ್ನು ಅಸ್ತ್ರವಾಗಿ ಪ್ರಯೋಗ ಮಾಡುತ್ತಿದ್ದು, ಇದಕ್ಕೆ ಕೌಂಟರ್ ನೀಡಲು ಏನೆಲ್ಲಾ ಪ್ರತಿ ಅಸ್ತ್ರಗಳನ್ನು ಪ್ರಯೋಗ ಮಾಡಬೇಕು ಎಂಬ ನಿಟ್ಟಿನಲ್ಲೂ ಚಿಂತನಾ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ.
ಬೂತ್ ಮಟ್ಟದಲ್ಲಿ ಸಂಘಟನೆಯನ್ನು ಚುರುಕುಗೊಳಿಸುವ ಬಗ್ಗೆ ಮತ್ತು ಪಕ್ಷದ ಶಾಸಕರ ಅಥವ ಸಂಭಾವ್ಯ ಅಭ್ಯರ್ಥಿಗಳ ಶಕ್ತಿ– ಸಾಮರ್ಥ್ಯವನ್ನು ಒರೆಗೆ ಹಚ್ಚುವ ಕೆಲಸವೂ ಆಗಲಿದೆ. ವಿಧಾನಸಭಾ ಕ್ಷೇತ್ರಗಳಲ್ಲಿ ಶಾಸಕರು ಮತ್ತು ಸರ್ಕಾರದ ಮಟ್ಟದಲ್ಲಿ ಸಚಿವರು ಪರಿಣಾಮಕಾರಿಯಾಗಿ ಕೆಲಸ ಮಾಡುವ ಮೂಲಕ ಉಳಿದಿರುವ ಅವಧಿಯಲ್ಲಿ ಜನರ ಮನಸ್ಸು ಗೆಲ್ಲುವ ಬಗ್ಗೆ ಸಭೆಯಲ್ಲಿ ಸೂಚನೆ ನೀಡಲಾಗುವುದು ಎಂದು ಉನ್ನತ ಮೂಲಗಳು ತಿಳಿಸಿವೆ.
ಆರ್‌ಎಸ್‌ಎಸ್ ಮೇಲೆ ಟೀಕಾ ಪ್ರಹಾರ ನಡೆಸುವ ಮೂಲಕ ಮುಸ್ಲಿಂ ಮತ್ತು ಕ್ರೈಸ್ತ ಮತಗಳ ಕ್ರೋಡೀಕರಣಕ್ಕೆ ಕಾಂಗ್ರೆಸ್ ಪ್ರಯತ್ನಿಸುತ್ತಿದ್ದು, ಇದಕ್ಕೆ ಯಾವ ರೀತಿ ಪ್ರತ್ಯುತ್ತರ ನೀಡಬೇಕು ಅಥವಾ ಈ ಟೀಕೆಗಳಿಗೆ ನಿರ್ಲಕ್ಷ್ಯಮಾಡಬೇಕೆ ಎಂಬ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ಮೂಲಗಳು ಹೇಳಿವೆ.
Previous Articleನೀರಿನ ಹೊಂಡಕ್ಕೆ ಬಿದ್ದ ಮಗು ಇನ್ನಿಲ್ಲ
Next Article ನದಿಯಲ್ಲಿ ಮುಳುಗಿ ಸತ್ತ ಪ್ರಕರಣಕ್ಕೆ ಟ್ವಿಸ್ಟ್ !!!