ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಜೆಡಿಎಸ್ ತಯಾರಿ ನಡೆಸಿರುವ ಬೆನ್ನಲ್ಲೇ ಆಡಳಿತಾರೂಡ ಬಿಜೆಪಿ ಕೂಡಾ ಈ ಸಂಬಂಧ ಸಿದ್ದತೆ ಆರಂಭಿಸಿದೆ.
ಪಕ್ಷದ ಶಾಸಕರು ಮತ್ತು ಸಚಿವರೊಂದಿಗೆ ಸಮಾಲೋಚನೆ ನಡೆಸಿತು. ಅವಧಿಪೂರ್ಣ ಚುನಾವಣೆ ಕುರಿತಂತೆಯೂ ಚರ್ಚೆ ನಡೆಸಿತು.
ಆದರೆ ಈ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳು ಬಿಜೆಪಿಯ ಚಿಂತೆಯನ್ನು ಹೆಚ್ಚಿಸಿದ್ದು ವಿಶೇಷವಾಗಿದೆ.
ಇತ್ತೀಚೆಗೆ ನಡೆಸಿರುವ ಕೆಲವು ಸಮೀಕ್ಷಾ ವರದಿಗಳು ರಾಜ್ಯದಲ್ಲಿ ಬಿಜೆಪಿ ಜನಪ್ರಿಯತೆ ಕುಸಿದಿದೆ. ಸರ್ಕಾರದ ಪರವಾಗಿ ಜನರಲ್ಲಿ ಸಕಾರಾತ್ಮಕ ಧೋರಣೆಯಿದೆ. ಭ್ರಷ್ಟಾಚಾರ ಆರೋಪಗಳ ಬಗ್ಗೆ ಜನ ಬೇಸರಗೊಂಡಿದ್ದಾರೆ.ಈ ನಡುವೆ ಸಿದ್ದರಾಮೋತ್ಸವ ಸೇರಿ ಕಾಂಗ್ರೆಸ್ ಸಭೆಗಳು ಜನರ ಗಮನ ಸೆಳೆಯತ್ತಿವೆ ಎಂದು ತಿಳಿಸಿವೆ.
ಈ ವರದಿಗಳನ್ನು ಗಂಭೀರವಾಗಿ ಪರಿಗಣಿಸಿರುವ ಹೈಕಮಾಂಡ್ ಮತ್ತು ಸಂಘ ಪರಿವಾರ ಇದನ್ನು ಯಶಸ್ವಿಯಾಗಿ ಹತ್ತಿಕ್ಕಿ ಪಕ್ಷದ ಪರ ವಾತಾವರಣ ಮೂಡಿಸಬೇಕು,ಈ ವಿಚಾರದಲ್ಲಿ ಅವಧಿ ಪೂರ್ವ ಚುನಾವಣೆಯೂ ಸೇರಿ ಯಾವೆಲ್ಲಾ ಕ್ರಮ ಸಾಧ್ಯವೋ ಆ ಬಗ್ಗೆ ಚರ್ಚಿಸಿ ವರದಿ ನೀಡುವಂತೆ ಸೂಚನೆ ನೀಡಿದೆ.
ವಿಧಾನಸಭೆಗೆ ಅವಧಿಪೂರ್ವ ಚುನಾವಣೆ ವಿಷಯದಲ್ಲಿ ಬಹುತೇಕ ಎಲ್ಲಾ ಶಾಸಕರು ತಮ್ಮ ಆತಂಕ ತೋಡಿಕೊಂಡಿದ್ದಾರೆ. ದೇಶದಲ್ಲಿ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ಬೀಸುತ್ತಿದೆ, ಇದೇನಿದ್ದರೂ ಲೋಕಸಭಾ ಚುನಾವಣೆಗೆ ಅನುಕೂಲವಾಗಲಿದೆ, ವಿಧಾನಸಭೆಗೆ ನಮ್ಮ ಮುಂದಿರುವ ಅಸ್ತ್ರಗಳೇನು ಎಂದು ಪ್ರಶ್ನಿಸಿದ್ದಾರೆ.
ಪ್ರಮುಖವಾಗಿ ಶಾಸಕ ರಾಜೂಗೌಡ ಹಲವು ವಿಷಯಗಳನ್ನು ಪ್ರಸ್ತಾಪಿಸಿದ್ದು ಇವುಗಳ ಚಿಂತನಾ ಸಭೆ ಆಯೋಜಿಸಿದವರ ಚಿಂತೆ ಹೆಚ್ಚುವಂತೆ ಮಾಡಿದೆ.
ಅವಧಿಪೂರ್ವವಾಗಲಿ, ಅವಧಿ ಪೂರ್ಣವಾಗಲಿ ಯಾವ ವಿಷಯದ ಆಧಾರದಲ್ಲಿ ಚುನಾವಣೆ ಎದುರಿಸಬೇಕು…? ಭಾವನಾತ್ಮಕ ವಿಷಯಗಳು ಕರಾವಳಿಯಲ್ಲಿ ಮತಗಳಿಸಿಕೊಟ್ಟಂತೆ, ಉತ್ತರ ಕರ್ನಾಟಕದಲ್ಲಿ ಗಳಿಸುವುದಿಲ್ಲ. ಅದರಲ್ಲೂ ಹೈದರಾಬಾದ್ ಕರ್ನಾಟಕದಲ್ಲಂತೂ ಇವುಗಳು ಅಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುವುದಿಲ್ಲ ಎಂದು ಹೇಳಿದ ಅವರು ಸತತವಾಗಿ ಒಂದೇ ಕ್ಷೇತ್ರದಲ್ಲಿ ಗೆದ್ದು ಬರುತ್ತಿರುವ ಜನಪ್ರಿಯ ನಾಯಕರು ಬೇರೆ ಕ್ಷೇತ್ರಗಳಲ್ಲಿ ನಿಂತು ಗೆದ್ದು ಬರಲಿ,ಅದರಲ್ಲೂ ಬೆಂಗಳೂರಿನ ಹಿರಿಯರು ಇಲ್ಲೇ ಆಯ್ಕೆಯಾಗುತ್ತಾರೆ ಮಂತ್ರಿಗಳೂ ಆಗುತ್ತಾರೆ. ಹೀಗಾಗಿ ರಾಜ್ಯದ ಇತರೆ ಭಾಗಕ್ಕೆ ಮಂತ್ರಿ ಸ್ಥಾನ ಸಿಗದೆ ಪ್ರಾದೇಶಿಕ ಅಸಮಾನತೆ ಉಂಟಾಗುತ್ತಿದೆ ಎಂಬ ವಾಸ್ತವ ತೆರದಿಟ್ಟಿದ್ದಾರೆ.
ನಿಜ,ಐದು ವರ್ಷಗಳಿಗೊಮ್ಮೆ ಚುನಾವಣೆ ಎದುರಿಸಲೇಬೇಕು.ಈ ಚುನಾವಣೆ ಎದುರಿಸಲು ನಿರ್ದಿಷ್ಟ ವಿಷಯಗಳಿರಬೇಕು ಎನ್ನುವುದು ವಾಡಿಕೆ. ಮೂರು ವರ್ಷಗಳ ಬಿಜೆಪಿಯ ಆಡಳಿತವನ್ನು ಗಮನಿಸಿದಾಗ ಇಬ್ಬರು ಮುಖ್ಯಮಂತ್ರಿಗಳು, ಒಂದಷ್ಟು ಭ್ರಷ್ಟಾಚಾರದ ಆರೋಪಗಳು ಎನ್ನುವುದನ್ನು ಬಿಟ್ಟರೆ ಈ ಸರ್ಕಾರದ ಅವಧಿಯಲ್ಲಿ ಯಾವುದೇ ಹೇಳಿಕೊಳ್ಳುವಂತಹ ಕೆಲಸಗಳಾಗಿಲ್ಲ.
ಯಡಿಯೂರಪ್ಪ ಅವರನ್ನು ಮಾಜಿಯಾಗುವಂತೆ ಮಾಡಿದ್ದು ಅವರಿಗೆ ವಯಸ್ಸಾಗಿತ್ತು ಎನ್ನುವುದು ಮೇಲ್ನೋಟಕ್ಕೆ ಕಾಣುವ ಸತ್ಯವಾದರೂ ಅವರು ಸಿಎಂ ಆಗುವಾಗ, ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸುವಾಗ ವಯಸ್ಸಾಗಿರಲಿಲ್ಲವೇ ಎನ್ನುವ ಪ್ರಶ್ನೆ ಎದುರಾಗುತ್ತದೆ.
ಇವರನ್ನು ಮಾಜಿಯಾಗುವಂತೆ ಮಾಡಿದ್ದು ವಯಸ್ಸಲ್ಲ, ಬದಲಿಗೆ ಅವರ ನೇತೃತ್ವದ ಸರ್ಕಾರದ ವಿರುದ್ಧ ಕೇಳಿಬಂದ ಭ್ರಷ್ಟಾಚಾರ ಆರೋಪ, ಆಡಳಿತದಲ್ಲಿ ಅವರ ಕುಟುಂಬ ಸದಸ್ಯರ ಅತಿಯಾದ ಹಸ್ತಕ್ಷೇಪ ಆರೋಪ ಎನ್ನುವುದು ಅಂಗೈ ಹುಣ್ಣಿನಷ್ಟು ವಾಸ್ತವ.
ಹೀಗಾಗಿ ಮುಖ್ಯಮಂತ್ರಿ ಬದಲಾದರು. ಜನಸಾಮಾನ್ಯರ ಮುಖ್ಯಮಂತ್ರಿ ಎಂಬ ಪ್ರಚಾರ ಪಡೆದ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಏನಾದರೂ ಗಮನಾರ್ಹ ಬದಲಾವಣೆಯಾಗಿದೆಯಾ ಎಂದು ದುರ್ಬೀನು ಹಿಡಿದು ಹುಡುಕಿದರೂ ಹೊಸದೇನೂ ಸಿಗುವುದಿಲ್ಲ. ಕುಟುಂಬದ ಹಸ್ತಕ್ಷೇಪ ಇಲ್ಲವಾಗಿದೆ ಎಂಬ ಸಮಧಾನ ಬಿಟ್ಟರೆ ಬೇರೆನೂ ಕಾಣಸಿಗುವುದಿಲ್ಲ.
ಯಡಿಯೂರಪ್ಪ ಮೊದಲಬಾರಿಗೆ ಸಿಎಂ ಆದಾಗ ಶಾಲಾಮಕ್ಕಳಿಗೆ ಬೈಸಿಕಲ್, ಹೆಣ್ಣುಮಕ್ಕಳಿಗೆ ಭಾಗ್ಯಲಕ್ಷ್ಮಿ, ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳಿಗೆ ಆರ್ಥಿಕಾನುದಾನ, ಸಾವಯವ ಕೃಷಿಗೆ ಉತ್ತೇಜನ ಆರೋಗ್ಯ ಶ್ರೀ,ಮಾತೃಪೂರ್ಣ, ಗುಡಿಸಲು ಮುಕ್ತ ಕರ್ನಾಟಕದಂತಹ ಹಲವಾರು ನೆನಪಿನಲ್ಲಿ ಉಳಿಯುವ ಯೋಜನೆ ಜಾರಿಗೊಳಿಸಿದ್ದರು. ಸಿದ್ದರಾಮಯ್ಯ ಸರ್ಕಾರ ಭಾಗ್ಯಗಳ ಸರ್ಕಾರವೆಂದೇ ಜನಪ್ರಿಯತೆ ಪಡೆಯುವ ಪ್ರಯತ್ನ ನಡೆಸಿತ್ತು. ಆದರೆ ಈಗಿನ ಸರ್ಕಾರದ ಇಂತಹ ಯಾವುದೇ ಯೋಜನೆ ಕೂಡಾ ಹೇಳಲು ಸಿಗುವುದಿಲ್ಲ. ಇದು ನಿಜವಾಗಿ ಎಲ್ಲಾ ಶಾಸಕರ ದೊಡ್ಡ ಅಳಲಾಗಿದ್ದು ಬಿಜೆಪಿ ನಾಯಕರ ಚಿಂತೆಗೆ ಕಾರಣವಾಗಿದ್ದು, ಅವಧಿಪೂರ್ವ ಚುನಾವಣೆ ಎಂಬ ಹೈಕಮಾಂಡ್ ಅಸ್ತ್ರ ಪ್ರಯೋಗ ಕಷ್ಟವೆನ್ನಲಾಗುತ್ತಿದೆ.
ಇನ್ನೂ ಕೆಲವು ಹಿರಿಯ ನಾಯಕರು ತಮ್ಮ ಕ್ಷೇತ್ರ ಬದಲಾಯಿಸಿ ಅಲ್ಲಿಂದ ಗೆದ್ದು ಬರುವುದಲ್ಲದೆ ಈ ಹಿಂದೆ ತಾವು ಗೆಲ್ಲುತ್ತಿದ್ದ ಕ್ಷೇತ್ರಗಳಿಂದ ತಮ್ಮ ಉತ್ತರಾಧಿಕಾರಿಗಳನ್ನು ಗೆಲ್ಲಿಸಿಕೊಂಡು ಬರಬೇಕೆನ್ನುವ ಪ್ರಸ್ತಾವನೆ ಹೊಸ ಬೆಳವಣಿಗೆಯಾಗಿದೆ.
ಇದೇ ಏನಾದರೂ ಕಾರ್ಯರೂಪಕ್ಕೆ ಬಂದಲ್ಲಿ ಹಲವು ಮಹತ್ವದ ಬದಲಾವಣೆಗಳಾಗಲಿವೆ. ಅದು ಹೇಗೆಂದರೆ ಕಂದಾಯ ಸಚಿವ ಆರ್. ಅಶೋಕ್ ಸದ್ಯ ಪದ್ಮನಾಭನಗರ ಕ್ಷೇತ್ರದಿಂದ ಸ್ಪರ್ಧಿಸ್ತಿದ್ದು, ಇದರ ಪ್ರಕಾರ ಬ್ಯಾಟರಾಯನಪುರ ಅಥವ ಮಂಡ್ಯದಲ್ಲಿ ಸ್ಪರ್ಧೆ ಮಾಡಬೇಕಾಗಬಹುದು. ಇನ್ನು, ಮಲ್ಲೇಶ್ವರಂನ ಡಾ.ಅಶ್ವತ್ಥ್ ನಾರಾಯಣ್ ಮಾಗಡಿ ಅಥವ ರಾಮನಗರಕ್ಕೆ ಹೋಗಬೇಕು. ಸಿ.ಟಿ.ರವಿ ಚಿಕ್ಕಮಗಳೂರಿಗೆ ಬದಲಾಗಿ ಹಾಸನ ಜಿಲ್ಲೆ ಗೆ ಹೋಗಬೇಕು.
ಯಲಹಂಕ ಕ್ಷೇತ್ರದ ಎಸ್.ಆರ್. ವಿಶ್ವನಾಥ್ ದೊಡ್ಡ ಬಳ್ಳಾಪುರ ಇಲ್ಲವೇ ಗೌರಿಬಿದನೂರಿನಿಂದ ಸ್ಪರ್ಧೆ ಮಾಡಬೇಕಾಗಬಹುದು. ಸತೀಶ್ ರೆಡ್ಡಿ ಬೊಮ್ಮನಹಳ್ಳಿ ಕ್ಷೇತ್ರ ಬಿಡಬೇಕಾಗಿ ಬಂದ್ರೆ ಬಿಟಿಎಂ ಲೇಔಟ್ ನಿಂದ ಅದೃಷ್ಟ ಪರೀಕ್ಷೆಗೆ ಇಳಿಯಬಹುದು. ಹಿರಿಯ ನಾಯಕ ವಿ.ಸೋಮಣ್ಣ ಗೋವಿಂದರಾಜನಗರ ಬಿಟ್ಟು ಚಾಮರಾಜನಗರ ಅಥವಾ ಹನೂರು ಕ್ಷೇತ್ರದತ್ತ ಚಿತ್ತ ಹರಿಸಬೇಕಾಗುತ್ತದೆ.
ಎಂ.ಕೃಷ್ಣಪ್ಪ ಬೆಂಗಳೂರು ದಕ್ಷಿಣದಿಂದ ಜಯನಗರಕ್ಕೆ ಸ್ಥಳಾಂತರ ಆಗಬೇಕಾಗಬಹುದು. ಇನ್ನು, ಡಾ.ಕೆ ಸುಧಾಕರ್ ಹಾಲಿ ಕ್ಷೇತ್ರ ಚಿಕ್ಕಬಳ್ಳಾಪುರ ಬಿಟ್ಟು, ಶ್ರೀನಿವಾಸಪುರದತ್ತ ಹೆಜ್ಜೆ ಹಾಕಬೇಕಾಗುತ್ತದೆ ವಿಶ್ವೇಶ್ವರ ಹೆಗಡೆ ಕಾಗೇರಿ ಶಿರಸಿ ಬದಲು ಹಳಿಯಾಳದತ್ತ ಹಳಿ ಬದಲಿಸಬೇಕಾಗುತ್ತದೆ.
ಹೀಗೆ ಸಾಗುತ್ತದೆ ಈ ಲೆಕ್ಕಾಚಾರ ಇದು ಕಾರ್ಯರೂಪಕ್ಕೆ ಬಂದಲ್ಲಿ ಬಿಜೆಪಿ ಹಾಲಿ ಇರುವ ಕ್ಷೇತ್ರಗಳ ಜೊತೆಗೆ ಹೆಚ್ಚುವರಿಯಾಗಿ ಸುಮಾರು ಮೂವತ್ತರವರೆಗೆ ಗೆಲ್ಲಬಹುದು ಎಂಬ ಅಂದಾಜು.
ಯಾರೋ ಒಬ್ಬಿಬ್ಬರು ಕ್ಷೇತ್ರ ಬದಲಾವಣೆ ಮಾಡಿದರೆ,ಸೋಲುವ ಕಾರಣಕ್ಕೆ ಬದಲಾವಣೆ ಎಂಬ ಟೀಕೆ ಬರಲಿದೆ. ಆದರೆ ಸುಮಾರು ಮೂವತ್ತರಷ್ಟು ಶಾಸಕರ ಕ್ಷೇತ್ರ ಬದಲಾವಣೆ ಹೊಸ ಬೆಳವಣಿಗೆಯಾಗಿ ಸರ್ಕಾರದ ವಿರುದ್ದವಾದ ನಕಾರಾತ್ಮಕ ಮತಗಳನ್ನು ಸಕಾರಾತ್ಮಕವಾಗಿ ಬದಲಾಯಿಸಲು ಸಾಧ್ಯ ಎನ್ನುವುದು ಬಿಜೆಪಿ ಚಿಂತಕರ ಚಾವಡಿಗೆ ಆಹಾರ ಒದಗಿಸಿದೆ.
ಇವೆಲ್ಲವೂ ಹಾಗೆ, ಹೀಗೆ ಎಂಬ ಲೆಕ್ಕಾಚಾರಗಳಷ್ಟೆ. ಚುನಾವಣೆಯ ಸಮಯದಲ್ಲಿ ಯಾವ ವಿಷಯಗಳು ಮುನ್ನೆಲೆಗೆ ಬರಲಿವೆ ಎಂಬುದರ ಆಧಾರದಲ್ಲಿ ಮತದಾರರು ಹಕ್ಕು ಚಲಾಯಿಸಲಿದ್ದಾರೆ. ಅಂದಹಾಗೆ ಕಳೆದ ಎಂಟು ವರ್ಷಗಳ ಬಿಜೆಪಿ ಚುನಾವಣೆ ಕಾರ್ಯತಂತ್ರ ಗಮನಿಸಿದಾಗ ಹೈಕಮಾಂಡ್ ಯಾವ ತಂತ್ರ ರೂಪಿಸಿ ಅದನ್ನು ಯಾವ ರೀತಿ ಅನುಷ್ಠಾನಕ್ಕೆ ತರಲಿದೆ ಎಂಬುದನ್ನು ಯಾವ ರಾಜಕೀಯ ಪಂಡಿತರು ಊಹಿಸಲು ಸಾಧ್ಯವಾಗಿಲ್ಲ. ಹೀಗಾಗಿ ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿ ಹೈಕಮಾಂಡ್ ಬಳಿ ಯಾವ ಅಸ್ತ್ರವಿದೆಯೋ ಸ್ವಲ್ಪ ದಿನ ಕಾದು ನೋಡಬೇಕಿದೆ.
ಆರ್.ಎಚ್.ನಟರಾಜ್, ಹಿರಿಯ ಪತ್ರಕರ್ತ