ಬೆಂಗಳೂರು: ಬಸವರಾಜ ಬೊಮ್ಮಾಯಿ ರಾಜ್ಯದ ಮುಖ್ಯಮಂತ್ರಿಯಾಗಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಾಧನಾ ಸಮಾವೇಶ ಮಾಡಲು ಬೊಮ್ಮಾಯಿ ನಿರ್ಧರಿಸಿದ್ದಾರೆ. ಆದರೆ ಈ ಸಮಾವೇಶ ಸರ್ಕಾರದ ಯಾವ ಸಾಧನೆಗಾಗಿ.?
ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ಗುತ್ತಿಗೆದಾರರಿಂದ 40% ಕಮೀಷನ್ ಪಡೆದಿದ್ದಕ್ಕೋ.? ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದಕ್ಕೋ.? ಅಥವ ಈಶ್ವರಪ್ಪರಿಗೆ ‘ಬಿ ರಿಪೋರ್ಟ್’ ಕೊಡಿಸಿದಕ್ಕೋ.? ಸಮಾವೇಶ ಯಾವ ಪುರುಷಾರ್ಥಕ್ಕೆ.? PSI ನೇಮಕಾತಿ ಹಗರಣ, ಉಪನ್ಯಾಸಕರ ನೇಮಕಾತಿ ಹಗರಣ ನಡೆಸಿದಕ್ಕೆ ಈ ಸಮಾವೇಶವೇ.? ಎಂದು ಹೇಳಿದ್ದಾರೆ.
ಬೊಮ್ಮಾಯಿಯವರು ಸಾಧನಾ ಸಮಾವೇಶ ಮಾಡುವ ಬದಲು ಹಗರಣದ ಸಮಾವೇಶ ನಡೆಸುವುದು ಸೂಕ್ತವಲ್ಲವೇ.? ಹಗರಣದಿಂದಲೇ ಕುಖ್ಯಾತಿ ಗಳಿಸಿರುವ ಈ ಸರ್ಕಾರ ಯಾವ ಮುಖ ಇಟ್ಟುಕೊಂಡು ಸಾಧನೆಯ ಮಾತಾನಾಡುತ್ತಿದೆ ಎಂದು ಕಿಡಿಕಾರಿದ್ದಾರೆ.
ಒಂದು ವರ್ಷದ ಅವಧಿಯಲ್ಲಿ ರಾಜ್ಯದ ಅಭಿವೃದ್ಧಿಗೆ ಪೂರಕವಾದ ಯಾವ ಯೋಜನೆ ತಂದಿದ್ದಾರೆ.? ಹೋಗಲಿ ಕೇಂದ್ರದಿಂದ ಎಷ್ಟು ಅನುದಾನ ತಂದಿದ್ದಾರೆ.? ಕ್ರಿಯೆಗೆ ಪ್ರತಿಕ್ರಿಯೆ ಇರಲಿದೆ ಎಂದು ಕೋಮುಗಲಭೆಗೆ ಪ್ರಚೋದಿಸಿ ಸಮಾಜ ಒಡೆದಿದ್ದು ಬೊಮ್ಮಾಯಿಯವರ ಸಾಧನೆಯೆ.? ಹಿಜಾಬ್, ಹಲಾಲ್ ವಿವಾದ ಸೃಷ್ಟಿಸಿದ್ದು ಸಾಧನೆಯೆ.? ಎಂದು ಟೀಕಿಸಿದ್ದಾರೆ.
ತಿಂಗಳಿಗೊಮ್ಮೆ ದೆಹಲಿ ಟ್ರಿಪ್ ಹೋಗುವ ಬೊಮ್ಮಾಯಿಯವರು ಒಂದೇ ಒಂದು ಸಾರಿಯಾದರೂ ಕೇಂದ್ರದಿಂದ ಆಗುತ್ತಿರುವ GST ಅನ್ಯಾಯದ ಬಗ್ಗೆ ಬಾಯಿ ಬಿಟ್ಟಿದ್ದಾರೆಯೆ.? ನಾಳೆಯ ಸಮಾವೇಶ ಯಾವ ಸಾಧನೆಗಾಗಿ.? ಬೊಮ್ಮಾಯಿ CM ಆದಾಗ ಜನರಿಗೆ ಒಂದಷ್ಟು ನಿರೀಕ್ಷೆಗಳಿದ್ದವು. ಆದರೆ ಆ ನಿರೀಕ್ಷೆಗಳೆಲ್ಲಾ ಒಡೆದ ಬಲೂನ್‌ಗಳಾಗಿವೆ ಎಂದು ವಿಷಾದಿಸಿದ್ದಾರೆ.
Previous ArticlePSI Scam ಆರೋಪ ಪಟ್ಟಿ
Next Article ಮಕ್ಕಳ ಶಾಲಾ ದಾಖಲಾತಿ ವಯಸ್ಸು ಹೆಚ್ಚಿಸಿದ ರಾಜ್ಯ ಸರ್ಕಾರ