ಬೆಂಗಳೂರು, ಆ.12- ಅಜ್ಜಿಯೊಬ್ಬರು ಮೊಮ್ಮಗಳ ಹೆಸರಿನಲ್ಲಿ ಬ್ಯಾಂಕ್ನಲ್ಲಿಟ್ಟಿದ್ದ ಹಣವನ್ನು ಕಬಳಿಸಲು ಅಜ್ಜಿಯ ಸಂಬಂಧಿಕ ದಂಪತಿ ನಕಲಿ ದಾಖಲೆ ಹಾಗು ನಕಲಿ ಮೊಮ್ಮಗಳನ್ನು ಬ್ಯಾಂಕ್ಗೆ ಕರೆತಂದು ಹಣ ವರ್ಗಾವಣೆ ಮಾಡಿಸಿಕೊಂಡಿರುವ ಪ್ರಕರಣ ಬಿಡದಿಯಲ್ಲಿ ನಡೆದಿದೆ.
ರಾಮನಹಳ್ಳಿಯ ವೃದ್ಧೆ ನಂಜಮ್ಮ ಅವರು ಬಿಡದಿಯ ಕೆನರಾ ಬ್ಯಾಂಕ್ನಲ್ಲಿ ಮೊಮ್ಮಗಳು ಜ್ಞಾನೇಶ್ವರಿ ಹೆಸರಿನಲ್ಲಿ 5 ಲಕ್ಷ ರೂ.ಗಳನ್ನು ಠೇವಣಿ ಇಟ್ಟಿದ್ದು ಅವರು ಕೆಲದಿನಗಳ ಹಿಂದೆ ಮೃತಪಟ್ಟಿದ್ದರು. ಇದಾದ ಕೆಲ ದಿನಗಳ ನಂತರ ರತ್ಮಮ್ಮ ಮತ್ತು ಜಗದೀಶ್ ಎಂಬುವರು ಬ್ಯಾಂಕ್ಗೆ ಜ್ಞಾನೇಶ್ವರಿ ಹೆಸರಿನ ಮಗಳನ್ನು ಕರೆತಂದು ನಂಜಮ್ಮ ಠೇವಣಿಗೆ ಜ್ಞಾನೇಶ್ವರಿ ತಂದೆ ಜಗದೀಶ್ ಅವರನ್ನು ಮೈನರ್ ಗಾರ್ಡಿಯನ್ ಮಾಡಿ ಠೇವಣಿ ಹಣ ವರ್ಗಾವಣೆ ಮಾಡಿ ಎಂದು ಹೇಳಿದ್ದರು.
ಅಲ್ಲದೆ ನಂಜಮ್ಮರ ಮರಣ ಪ್ರಮಾಣಪತ್ರ, ಠೇವಣಿ ಹಣದ ಬಾಂಡ್ನ ನಂಬರ್ ಸಹಿತ ದಾಖಲೆಗಳನ್ನು ಬ್ಯಾಂಕ್ಗೆ ನೀಡಿದ್ದರು. ಇದರ ಆಧಾರದ ಮೇಳೆ ದಾಖಲೆಗಳನ್ನು ಪರಿಶೀಲಿಸಿದ ಬ್ಯಾಂಕ್ ಸಿಬ್ಬಂದಿ ಮೊಮ್ಮಗಳು ಜ್ಞಾನೇಶ್ವರಿ ಹೆಸರಿನಲ್ಲಿ ನಂಜಮ್ಮ ಇಟ್ಟಿದ್ದ 5 ಲಕ್ಷ ರೂ.ಗಳಲ್ಲಿ 4,99,989 ರೂ.ಗಳನ್ನು ಜ್ಞಾನೇಶ್ವರಿ ತಂದೆ ಮೈನರ್ ಗಾರ್ಡಿಯನ್ ಜಗದೀಶ್ ಅವರ ಹೆಸರಿನಲ್ಲಿ ತೆರೆದಿದ್ದ ಜಂಟಿ ಉಳಿತಾಯ ಖಾತೆಗೆ 2022ರ ಜೂನ್ 23ರಂದು ಹಣ ವರ್ಗಾವಣೆ ಮಾಡಿದ್ದರು.
ಇದಾದ ನಂತರ ಕಳೆದ ಜು.1ರಂದು ಮೃತ ನಂಜಮ್ಮ ಅವರ ಮಗ ಚಂದ್ರಶೇಖರ್ ಬ್ಯಾಂಕ್ಗೆ ಬಂದು ನನ್ನ ಮಗಳು ಜ್ಞಾನೇಶ್ವರಿ ಹೆಸರಿನಲ್ಲಿ ತಾಯಿ ಇಟ್ಟಿರುವ ಠೇವಣಿ ಹಣ ಪಡೆಯಲು ಬಂದಿದ್ದರು. ಈ ವೇಳೆ ಬ್ಯಾಂಕ್ ಸಿಬ್ಬಂದಿ ದಾಖಲೆಗಳ ಪರಿಶೀಲಿಸಿದಾಗ, ರತ್ನಮ್ಮ ಹಾಗು ಜಗದೀಶ್ ಅವರು ಬ್ಯಾಂಕ್ಗೆ ಸಲ್ಲಿಸಿರುವ ದಾಖಲೆಗಳು ನಕಲಿ ಅಲ್ಲದೆ, ಬ್ಯಾಂಕ್ಗೆ ಕರೆತಂದಿದ್ದ ಜ್ಞಾನೇಶ್ವರಿಯೂ ನಕಲಿ ಎಂದು ಗೊತ್ತಾಗಿದೆ.
ಬಿಡದಿ ಠಾಣೆಯಲ್ಲಿ ರತ್ನಮ್ಮ ಹಾಗು ಜಗದೀಶ್ ವಿರುದ್ಧ ಬ್ಯಾಂಕ್ ಮ್ಯಾನೇಜರ್ ಕೇಶವಮೂರ್ತಿ ದೂರು ದಾಖಲಿಸಿದ್ದಾರೆ.
ಈ ಸಂಬಂಧ ಬಿಡದಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.