ಬೆಂಗಳೂರು :ಕಳೆದ ರಾತ್ರಿ ದುಷ್ಕರ್ಮಿಯಿಂದ ಚಾಕು ಇರಿತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯ ಅಯೂಬ್ ಖಾನ್ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ.
ಮಾಜಿ ಸಚಿವ ಬಿ.ಝಡ್.ಜಮೀರ್ ಅಹಮದ್ ಖಾನ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಇವರನ್ನು ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಚಾಕುವಿನಿಂದ ಇರಿಯಲಾಗಿತ್ತು. ಅಯೂಬ್ ಖಾನ್ ಚಾಮರಾಜ ಪೇಟೆಯ ತಮ್ಮ ಮನೆ ಮುಂದೆ ನಿಂತಿದ್ದಾಗ ಅವರ ಸಂಬಂಧಿಕ ಎನ್ನಲಾದ ದುಷ್ಕರ್ಮಿ ಚಾಕುವಿನಿಂದ ಇರಿದು ಪರಾರಿಯಾಗಿದ್ದ. ಕೂಡಲೇ ಅಯೂಬ್ ಅವರನ್ನು ಚಿಕಿತ್ಸೆಗೆ ಏಷ್ಯನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅಯೂಬ್ ಸಹೋದರನ ಮಗ ಮತೀನ್ ವಿರುದ್ಧ ಕೊಲೆ ಆರೋಪ ಕೇಳಿ ಬಂದಿದೆ.
ಮಾಜಿ ಕಾರ್ಪೋರೇಟರ್ ನಜೀಮಾ ಅವರ ಪತಿ ಮೃತ ಆಯೂಬ್ ಕಳೆದ ಹದಿನೈದು ವರ್ಷಗಳಿಂದ ಟಿಪ್ಪುನಗರದ ಖುದಾದತ್ ಮಸೀದಿ ಪ್ರೆಸಿಡೆಂಟ್ ಆಗಿದ್ದು, ಆರೋಪಿ ಮತೀನ್ ಕಳೆದ ಒಂದು ವರ್ಷದಿಂದ ಪ್ರೆಸಿಡೆಂಟ್ ಹುದ್ದೆ ತನಗೆ ಬೇಕೆಂದು ಪೀಡಿಸುತ್ತಿದ್ದ ಎನ್ನಲಾಗಿದೆ. 6 ತಿಂಗಳ ಹಿಂದೆಯೂ ಒಮ್ಮೆ ಚಾಕು ತೋರಿಸಿ ಕೊಲೆ ಬೆದರಿಕೆ ಹಾಕಿದ್ದ ಮತೀನ್ ನೀನು ಬದುಕಿರುವವರೆಗೂ ನಾನು ಪ್ರೆಸಿಡೆಂಟ್ ಆಗಲ್ಲವೆಂದು ಧಮ್ಕಿ ಹಾಕಿದ್ದ ಎಂದು ನಜೀಮಾ ಆರೋಪಿಸಿದ್ದಾರೆ.
ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ಚಾಕು ಹಿಡಿದು ಆಯೂಬ್ ಮನೆ ಬಳಿ ಬಂದಿದ್ದ ಮತೀನ್, ಗಲಾಟೆ ಆರಂಭಿಸಿ ಚಾಕು ಇರಿದಿದ್ದಾನೆ ಎಂದು ಆಯೂಬ್ ಪತ್ನಿ ನಜೀಮಾ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಪತ್ತೆಗಾಗಿ ತನಿಖೆ ಆರಂಭಿಸಿದ್ದಾರೆ.