ಬೆಂಗಳೂರು,ಜು.23–ರಾಜಕೀಯ ಪ್ರಭಾವ ಬೀರುವ ಸಾಧ್ಯತೆ ಹಿನ್ನೆಲೆಯಲ್ಲಿ ಕೇರಳದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದ್ದ 14 ಕೋಟಿ ಮೌಲ್ಯದ ಚಿನ್ನ ಕಳ್ಳಸಾಗಣೆ ಪ್ರಕರಣದ ಕೋರ್ಟ್ ವಿಚಾರಣೆಯನ್ನು ಕರ್ನಾಟಕಕ್ಕೆ ವರ್ಗಾಯಿಸುವಂತೆ ಜಾರಿ ನಿರ್ದೇಶನಾಲಯ (ಇಡಿ) ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದೆ. ತ್ವರಿತ ಹಾಗು ಪಾರದರ್ಶಕ ವಿಚಾರಣೆ ನಡೆಯುವ ದೃಷ್ಟಿಯಿಂದ ಬೆಂಗಳೂರು ವಿಶೇಷ ಕೋರ್ಟ್ಗೆ ವರ್ಗಾವಣೆ ಮಾಡುವಂತೆ ಮನವಿ ಮಾಡಿದೆ.
ಸ್ಯಾಂಡಲ್ವುಡ್ ಡ್ರಗ್ಸ್ ದಂಧೆಯಲ್ಲಿ ಬಂಧಿತರಾಗಿರುವವರ ಜತೆ ಕೇರಳದ ಸ್ಮಗ್ಲಿಂಗ್ ರಾಣಿ ಎಂದೇ ಕುಖ್ಯಾತಿಯಾಗಿರುವ ಸ್ವಪ್ನಾ ಸುರೇಶ್ ಗ್ಯಾಂಗ್ ಸಂಪರ್ಕದಲ್ಲಿತ್ತು. ಅಷ್ಟೇ ಅಲ್ಲ ಚಿನ್ನದ ಕಳ್ಳಸಾಗಣೆಗೆ ಚಂದನವನದ ಡ್ರಗ್ಸ್ ದಂಧೆಯಲ್ಲಿರುವ ಪ್ರಭಾವಿಗಳೂ ಸ್ವಪ್ನಾಗೆ ನೆರವು ನೀಡಿದ್ದರು ಎಂಬ ಸಂಗತಿ ಈ ಹಿಂದೆ ಇಡಿ ಅಧಿಕಾರಿಗಳ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಈಗ ಇಡಿ ಅಧಿಕಾರಿಗಳು, ಇಡೀ ಪ್ರಕರಣದ ವಿಚಾರಣೆಯನ್ನು ಕರ್ನಾಟಕಕ್ಕೆ ವರ್ಗಾಯಿಸಲು ಕೋರಿರುವುದರಿಂದ ಸುಪ್ರೀಂಕೋರ್ಟ್ ಪುರಸ್ಕರಿಸಿದರೆ ಸ್ಯಾಂಡಲ್ವುಡ್ ಡ್ರಗ್ಸ್ ದಂಧೆಯ ರಹಸ್ಯ ಮಾಹಿತಿಗಳೂ ವಿಚಾರಣೆ ವೇಳೆ ಹೊರಬರುವ ನಿರೀಕ್ಷೆ ಇದೆ.
ಕಳೆದ ಜು.5ರಂದು ತಿರುವನಂತಪುರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು 14.82 ಕೋಟಿ ರೂ ಮೌಲ್ಯದ 30 ಕೆ.ಜಿ ಬಂಗಾರದ ಗಟ್ಟಿಗಳನ್ನು ವಶಪಡಿಸಿಕೊಂಡಿದ್ದರು. ತಿರುವನಂತಪುರಂನಲ್ಲಿರುವ ಯುಎಇ ಕಾನ್ಸುಲೇಟ್ ಕಚೇರಿಯ ವಿಳಾಸ ಹೊಂದಿದ್ದ ಆ ಪಾರ್ಸಲ್ ಅನ್ನು ಯುಎಇಯಿಂದ ರಾಜತಾಂತ್ರಿಕ ಮಾರ್ಗದ ಮೂಲಕ ಕಳುಹಿಸಿರುವುದು ಬಹಿರಂಗಗೊಂಡಿತ್ತು. ಎನ್ಐಎ ತನಿಖೆ ನಡೆಸಿದಾಗ ಗೋಲ್ಡ್ ಸ್ಮಗ್ಲಿಂಗ್ನಿಂದ ಬಂದ ಹಣವನ್ನು ಉಗ್ರ ಚಟುವಟಿಕೆಗೆ ಬಳಸುತ್ತಿರುವ ವಿಚಾರವೂ ದೃಢಪಟ್ಟಿದೆ. ಚಿನ್ನ ಸ್ಮಗ್ಲಿಂಗ್ ಪ್ರಕರಣದಲ್ಲಿ ಸ್ವಪ್ನಾ ಸುರೇಶ್, ಸರಿತಾ, ಫಾಜಿಲ್ ಫರೀದ್ ಮತ್ತು ಸಂದೀಪ್ ನಾಯರ್ ಪ್ರಮುಖ ಆರೋಪಿಗಳಾಗಿದ್ದಾರೆ. ಇವರ ವಿಚಾರಣೆ ವೇಳೆ ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾ ಜತೆ ನಂಟಿರುವ ವಿಚಾರವನ್ನೂ ಬಾಯ್ಬಿಟ್ಟಿದ್ದರು. ಅಲ್ಲದೆ, ಇದೇ ಜು.12ರಂದು ಪ್ರಕರಣದ ಸಂಬಂಧ ಬೆಂಗಳೂರು ಸೇರಿ ವಿವಿಧೆಡೆ ಹೊಂದಿರುವ 16 ಕೋಟಿ ಮೌಲ್ಯದ ಚರ ಮತ್ತು ಸ್ಥಿರಾಸ್ತಿಯನ್ನು ಪತ್ತೆಹಚ್ಚಿದ್ದ ಇಡಿ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದರು.
ಕೋರ್ಟ್ಗೆ ಹೇಳಿದ್ದ ಇಡಿ:
ಚಿನ್ನದ ಸ್ಮಗ್ಲಿಂಗ್ ಹಗರಣ ಬೆಳಕಿಗೆ ಬಂದ ಸಂದರ್ಭದಲ್ಲಿ ಪ್ರಮುಖ ಆರೋಪಿಗಳಾದ ಸ್ವಪ್ನಾ ಸುರೇಶ್ ಹಾಗು ಸಂದೀಪ್ ನಾಯರ್ ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದರು. ಆರೋಪಿಗಳ ಫೋನ್ ಕರೆ ಬೆನ್ನತ್ತಿದ್ದ ಎನ್ಐಎ ತಂಡ ಕೋರಮಂಗಲದ ಖಾಸಗಿ ಹೋಟೆಲ್ವೊಂದರಲ್ಲಿ ಬಂಧಿಸಿತ್ತು.
ಇಡಿ ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡ ನಂತರ ಬೆಂಗಳೂರು ಡ್ರಗ್ಸ್ ದಂಧೆಗೂ ಚಿನ್ನ ಸ್ಮಗ್ಲಿಂಗ್ಗೂ ನಂಟಿದೆ ಎಂಬುದು ಗೊತ್ತಾಗಿತ್ತು. ಕೊಚ್ಚಿಯ ವಿಶೇಷ ಕೋರ್ಟ್ಗೆ ಮಾಹಿತಿ ಈ ಹಿಂದೆ ಮಾಹಿತಿ ನೀಡಿದ್ದರು.
ಚಿನ್ನ ಕಳ್ಳಸಾಗಣೆ ಕೋರ್ಟ್ ವಿಚಾರಣೆ ಕರ್ನಾಟಕಕ್ಕೆ ರವಾನೆ
Previous Articleಗೊರವನಹಳ್ಳಿ ದೇವಾಲಯದ ಪ್ರಧಾನ ಅರ್ಚಕ ಇನ್ನಿಲ್ಲ
Next Article BSY ನಿವೃತ್ತಿ ಘೋಷಣೆ ಮಾಡಿದ್ದು ಬೇಸರದ ಸಂಗತಿ!