ಬೆಂಗಳೂರು : ರಾಜ್ಯಸಲ್ಲಿ ನಿಧಾನವಾಗಿ ವಿಧಾನಸಭಾ ಚುನಾವಣೆಗೆ ತಾಲೀಮು ಆರಂಭಗೊಂಡಿದೆ. ರಾಜಕೀಯ ಪಕ್ಷಗಳು ತಮ್ಮದೇ ಶೈಲಿಯಲ್ಲಿ ಕಾರ್ಯತಂತ್ರ ರೂಪಿಸುತ್ತಿದ್ದರೆ, ಶಾಸಕ ಸ್ಥಾನದ ಮೇಲೆ ಕಣ್ಞಿಟ್ಟವರ ಪಕ್ಷಾಂತರ ಜೋರಾಗಿದೆ.
ಕಳೆದ ಚುನಾವಣೆಯಲ್ಲಿ ಸೋತವರು,ಇರುವ ಪಕ್ಷದ ಟಿಕೆಟ್ ಸಿಗುವ ಸಾಧ್ಯತೆಯಿಲ್ಲದವರು ಇದೀಗ ತಮಗೆ ಅನುಕೂಲ ಎಂಬ ಪಕ್ಷಗಳ ಕದ ತಟ್ಟುತ್ತಿದ್ದಾರೆ.
ಇದೀಗ ಲಿಂಗಾಯತ ಸಮುದಾಯದ ಮುಖಂಡ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಕಾಂಗ್ರೆಸ್ ಸೇರಲು ಸಜ್ಜಾಗಿದ್ದಾರೆ. ಬೀದರ್ ನ ಬಸವಕಲ್ಯಾಣ ಕ್ಷೇತ್ರದಿಂದ ಮೊದಲ ಬಾರಿಗೆ ಜೆಡಿಎಸ್ ನಿಂದ ಆಯ್ಕೆ ಯಾಗಿದ್ದ ಇವರು ನಂತರ ಬಿಜೆಪಿ ಸೇರಿದ್ದರು.
ಕಳೆದ ವರ್ಷ ನಡೆದ ಬಸವಕಲ್ಯಾಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿಯ ಪ್ರಬಲ ಆಕಾಂಕ್ಷಿ ಆಗಿದ್ದ ಇವರು ಕೊನೆ ಗಳಿಗೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು.
ಬಳಿಕ ಖೂಬಾ ಅವರು ಯಾವುದೇ ಪಕ್ಷದ ಜತೆ ಗುರುತಿಸಿಕೊಂಡಿರಲಿಲ್ಲ. ಆದರೆ ಈಚೆಗೆ ಕ್ಷೇತ್ರದಲ್ಲಿ ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದು ಮುಂಬರುವ ಚುನಾವಣೆಯಲ್ಲಿ ಇವರು ಮತ್ತೆ ಸ್ಪರ್ಧಿಸುವರು ಎಂಬ ಮಾತುಗಳು ಅವರ ಆಪ್ತ ವಲಯದಲ್ಲಿ ಕೇಳಿ ಬರುತ್ತಿವೆ.
ಈ ಹಿನ್ನೆಲೆಯಲ್ಲಿ ಅವರು ಇದೀಗ ಕಾಂಗ್ರೆಸ್ ಸೇರಲು ಸಜ್ಜಾಗಿದ್ದು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.