ಬೆಂಗಳೂರು, ಜು. 1-ಕಳೆದ 15 ವರ್ಷಗಳಿಂದ ಕಳವು ಮಾಡುತ್ತಿದ್ದ ಕುಖ್ಯಾತ ಮನೆಗಳ್ಳ ಇಮ್ರಾನ್ ಅಲಿಯಾಸ್ ಚೋರ್ ಇಮ್ರಾನ್ ನನ್ನು ಕಾರ್ಯಾಚರಣೆ ನಡೆಸಿ ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಚೋರ್ ಇಮ್ರಾನ್ ನಿಂದ 65 ಲಕ್ಷ ಮೌಲ್ಯದ 1ಕೆಜಿ 300ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡು ಹೆಚ್ಚಿನ ಪ್ರಮಾಣದಲ್ಲಿ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ರಮಣ್ ಗುಪ್ತ ತಿಳಿಸಿದ್ದಾರೆ.
ಮನೆಗಳ್ಳತನವನ್ನೇ ಕರಗತ ಮಾಡಿಕೊಂಡ ಚೋರ್ ಇಮ್ರಾನ್ ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕ್ಷಣಾರ್ಧದಲ್ಲಿ ಕಳವು ಮಾಡಿ ಪರಾರಿಯಾಗುತ್ತಿದ್ದ ಹಲವು ಬಾರಿ ಪೊಲೀಸರಿಗೆ ಸಿಕ್ಕಿಬಿದ್ದು ಜೈಲಿಗೆ ಹೋದರೂ ಮತ್ತೆ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದು ಕೃತ್ಯ ನಡೆಸುತ್ತಿದ್ದ.
ಚೋರ್ ಇಮ್ರಾನ್ ಬಂಧನದಿಂದ ಹಲಸೂರು ಗೇಟ್, ಸಿಟಿ ಮಾರುಕಟ್ಟೆ, ಚಾಮರಾಜಪೇಟೆ,ಸಿದ್ದಾಪುರ, ಅನ್ನಪೂರ್ಣೇಶ್ವರಿ ನಗರ, ಕಾಟನ್ ಪೇಟೆ ಸೇರಿದಂತೆ ನಗರ ವಿವಿಧ ಠಾಣಾ ವ್ಯಾಪ್ತಿಯ 15 ಹಗಲು ರಾತ್ರಿ ಕನ್ನಗಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಎಂತಹ ಹೈ ಸೆಕ್ಯೂರಿಟಿ ಇದ್ದರೂ ಚಾಣಾಕ್ಷತನದಿಂದ ಕಳ್ಳತನ ಮಾಡುವುದನ್ನು ಕರಗತ ಮಾಡಿಕೊಂಡ ಚೋರ್ ಇಮ್ರಾನ್ ನನ್ನು ಖಚಿತವಾದ ಮಾಹಿತಿಯನ್ನು ಆಧರಿಸಿ ಡಿಸಿಪಿ ಡಾ.ಶರಣಪ್ಪ ಅವರ ನೇತೃತ್ವದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದರು.
ಸಾಲು ಸಾಲು ಕನ್ನಗಳ್ಳತನದಿಂದ ಚೋರ್ ಇಮ್ರಾನ್ ನಗರ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದ್ದು ಆತನ ಬಂಧನದಿಂದ ನಿಟ್ಟುಸಿರು ಬಿಡುವಂತಾಗಿದೆ ಎಂದು ಗುಪ್ತಾ ತಿಳಿಸಿದರು.