ಬೆಂಗಳೂರು,ಆ.22- ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬರಿಗೆ ಸುರಕ್ಷಿತ ಹೆರಿಗೆಯಾಗಲು ಸಹಾಯ ಮಾಡುವ ಮೂಲಕ ನಗರದ ರೈಲ್ವೆ ಪೊಲೀಸ್ ಮಹಿಳಾ ಸಿಬ್ಬಂದಿ ಮಾನವೀಯತೆ ಮೆರೆದಿದ್ದಾರೆ. ನಗರದಿಂದ ಚಂಡಿಘಡಕ್ಕೆ ತೆರಳಬೇಕಾಗಿದ್ದ ಮಹಿಳೆಗೆ ಫ್ಲಾಟ್ಫಾರ್ಮ್ ಒಂದರಲ್ಲಿ ನಿಂತಿದ್ದಾಗ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಅಲ್ಲಿಯೇ ನೋವಿನಿಂದ ಹೊರಳಾಡಲು ಶುರು ಮಾಡಿದ್ದಾರೆ.
ಇದನ್ನು ಗಮನಿಸಿದ ರೈಲ್ವೆ ಪೊಲೀಸ್ ಪಡೆಯ ಮಹಿಳಾ ಸಿಬ್ಬಂದಿ ಮೀನಾ ಮಹಿಳೆಯ ನೆರವಿಗೆ ಬಂದು ಉಳಿದ ಪ್ರಯಾಣಿಕರ ಸಹಾಯದೊಂದಿಗೆ ಮಹಿಳೆಗೆ ಅಲ್ಲೇ ಪ್ರಥಮ ಚಿಕಿತ್ಸೆ ನೀಡಿ ಅಲ್ಲೇ ಹೆರಿಗೆ ಮಾಡಿಸಿದ್ದಾರೆ. ನಂತರ ತಾಯಿ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಮೀಪದ ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಯಿ ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ತಕ್ಷಣವೇ ಸ್ಪಂದಿಸಿದ ತಾಯಿ ಮಗುವಿನ ಜೀವ ಉಳಿಸುವಲ್ಲಿ ನೆರವಾದ ಆರ್ಪಿಎಫ್ ಸಿಬ್ಬಂದಿ ಮೀನಾ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ. ರೈಲ್ವೆ ಹಿರಿಯ ಅಧಿಕಾರಿಗಳು ಕೂಡ ಮೀನಾ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಕೆಲ ದಿನಗಳ ಹಿಂದೆ ತುಂಬು ಗರ್ಭಿಣಿಯೊಬ್ಬರು ಚಲಿಸುತ್ತಿರುವ ರೈಲಿನಲ್ಲಿ ಮಗುವಿಗೆ ಜನ್ಮ ನೀಡಿದ್ದರು. ಸೂರತ್ನಿಂದ ಮುಜಾಫರ್ಪುರಗೆ ತೆರಳುತ್ತಿದ್ದ ಅಹ್ಮದಾಬಾದ್-ಬರುನಿ ಎಕ್ಸ್ಪ್ರೆಸ್ ರೈಲಿನಲ್ಲಿ ಮಹಿಳೆ ಮಗುವಿಗೆ ಜನ್ಮ ನೀಡಿದ್ದರು. ಆ ಮಹಿಳೆಗೆ ಹೆರಿಗೆಯಾಗಲು ರೈಲ್ವೆ ಪೊಲೀಸ್ ಪೋರ್ಸ್ನ ಮಹಿಳಾ ಸಿಬ್ಬಂದಿ ನೆರವಾಗಿದ್ದರು. ಮಹಿಳೆ ಅಹ್ಮದಾಬಾದ್ ಬರುನಿ ಎಕ್ಸ್ಪ್ರೆಸ್ ರೈಲಿನಲ್ಲಿ ಮುಜಾಫರ್ಪುರಕ್ಕೆ ತೆರಳುತ್ತಿದ್ದರು. ಸೂರತ್ನಿಂದ ಮುಜಾಫರ್ಪುರಕ್ಕೆ ತೆರಳುವಾಗ ಮಾರ್ಗಮಧ್ಯೆ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಮಹಿಳೆ ಪತಿ ಈ ಬಗ್ಗೆ ಟಿಕೇಟ್ ಪರಿವೀಕ್ಷಕರಿಗೆ ಮಾಹಿತಿ ನೀಡಿದ್ದಾರೆ. ನಂತರ ಆರ್ಪಿಎಫ್ ಸಿಬ್ಬಂದಿ ಸ್ಥಳಕ್ಕೆ ಬಂದು ಇಡೀ ರೈಲು ಬೋಗಿಯನ್ನು ಬಟ್ಟೆಗಳಿಂದ ಮುಚ್ಚಿ ಸುಲಭವಾಗಿ ಹೆರಿಗೆ ಮಾಡಲು ಸಹಾಯ ಮಾಡಿದ್ದಾರೆ. ನಂತರ ರೈಲು ಮುಜಾಫರ್ ಪುರ ಜಂಕ್ಷನ್ ತಲುಪಿದ ನಂತರ ತಾಯಿ ಹಾಗೂ ಮಗು ಇಬ್ಬರನ್ನು ಮುಜಾಫರ್ಪುರದ ಸದರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
Previous Articleಬೈಕ್ ಲೈಟ್ ಕಂಬಕ್ಕೆ ಡಿಕ್ಕಿ ಇಂಜಿನಿಯರ್ ಸಾವು
Next Article ಬ್ಯಾಟರಿಗಳ ಕಳವು ಗುಜರಿ ಅಂಗಡಿ ಮಾಲೀಕ ಸೇರಿ ನಾಲ್ವರು ಸೆರೆ