ಬೆಳಗಾವಿ,ಆ.24- ಗ್ರಾಮಸ್ಥರು ಮಾನಸಿಕ ಅಸ್ವಸ್ಥ ಯುವಕನನ್ನು ಮರಕ್ಕೆ ಕಟ್ಟಿ ಹಲ್ಲೆ ನಡೆಸಿ ಕೊಲೆ ಮಾಡಿರುವ ದಾರುಣ ಘಟನೆ
ಮಾಳಮಾರುತಿಯ ಬಸವನಕುಡಚಿ ಗ್ರಾಮದಲ್ಲಿ ನಡೆದಿದೆ.
ಬಸವನಕುಡಚಿ ಗ್ರಾಮದ ಗಾಂಧಿ ಗಲ್ಲಿಯ ವಿಶಾಲ ಕಲ್ಲಪ್ಪಾ ಪಟಾಯಿ (28)ಮೃತಪಟ್ಟವರು.
ಕಳೆದ ನಾಲ್ಕು ದಿನಗಳ ಹಿಂದೆ ಮಾನಸಿಕ ಅಸ್ವಸ್ಥನಂತೆ ಗ್ರಾಮಗಳಲ್ಲಿ ಓಡಾಡುತ್ತಾ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ.
ಇದಲ್ಲದೇ, ನಾಲ್ಕು ದಿನಗಳ ಹಿಂದೆ ಕಲ್ಲಿನಿಂದ ಸುಮಾರು 9 ಶಿಕ್ಷಕರ ಮೇಲೆ ಹಲ್ಲೆ ಮಾಡಿದ್ದನಂತೆ. ಈ ವೇಳೆ, ಗಾಯಗೊಂಡಿದ್ದ ಶಿಕ್ಷಕರಿಗೆ ಚಿಕಿತ್ಸೆ ಕೊಡಿಸಲಾಗಿದೆ.
ಕಳೆದ ಆ. 18ರಂದು ಸರಾಯಿಗಾಗಿ ಬೇರೆಯವರ ಮನೆ ಕದ ತಟ್ಟಿದ್ದಾನೆ. ಇದನ್ನು ಪ್ರಶ್ನೆ ಮಾಡಿದವರ ಜೊತೆ ಜಗಳವಾಡಿದ ವಿಶಾಲ್ ಮೂವರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವಿಚಾರ ತಿಳಿದ ಗ್ರಾಮದ ಯುವಕರ ತಂಡ ವಿಶಾಲ್ ಮೇಲೆ ಪ್ರತಿ ದಾಳಿ ನಡೆಸಿದ್ದು, ಕೈಕಾಲು ಕಟ್ಟಿಹಾಕಿ ಮನಬಂದಂತೆ ಹಲ್ಲೆ ನಡೆಸಿದ್ದು, ಗ್ರಾಮದ ಸುತ್ತಲೂ ಮೆರವಣೆಗೆ ಮಾಡಿದ್ದಾರೆ.
ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ವಿಶಾಲ್ ನನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ರಾತ್ರಿ ಸಾವನ್ನಪ್ಪಿದ್ದಾರೆ.
ಅಮಾನವೀಯ ಘಟನೆ ನಡೆದರೂ ಮಾಳಮಾರುತಿ ಠಾಣೆ ಪೊಲೀಸರು ಈ ಬಗ್ಗೆ ಕ್ರಮ ಕೈಗೊಳ್ಳದ ಆರೋಪ ಕೇಳಿಬಂದಿದೆ.