ಅಧಿಕಾರಕ್ಕಾಗಿ ಸಿದ್ದರಾಮಯ್ಯ ಏನು ಬೇಕಾದರೂ ಮಾಡುತ್ತಾರೆ! ಅಂದು ದಲಿತ ನಾಯಕ ಪರಮೇಶ್ವರ್ ಅವರ ವಿರುದ್ಧ ಸಂಚು ನಡೆಸಿ ಬಲಿ ಹಾಕಿದರು. ಇಂದು ಡಿಕೆಶಿ ಅವರ ರಾಜಕೀಯ ಜೀವನದ ಬಲಿ ತೆಗೆಯಲು ಹೊಂಚು ಹಾಕುತ್ತಿದ್ದಾರೆ. ಇಷ್ಟೆಲ್ಲ ತನ್ನ ಸುತ್ತ ನಡೆಯುತ್ತಿದ್ದರೂ, ಕೆಪಿಸಿಸಿ ಅಧ್ಯಕ್ಷರು ಅಸಹಾಯವಾಗಿರುವುದು ವಿಪರ್ಯಾಸ’ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಅಸಹಾಯಕ ಡಿಕೆಶಿ ಎಂಬ ಟ್ಯಾಗ್ ಬಳಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅವರ ಮೂಗಿನ ನೇರಕ್ಕೆ ಎಲ್ಲವೂ ನಡೆಯುತ್ತಿದೆ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಅಸಹಾಯಕರಾಗಿದ್ದಾರೆ ಎಂದು ಹೇಳಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ, ಅಧಿಕಾರಕ್ಕೆ ಬಂದರೆ ಫಿಫ್ಟಿ- ಫಿಫ್ಟಿ ಸಿಎಂ ಸ್ಥಾನ ಹಂಚಿಕೆ ಎಂಬ ಬಣ್ಣದ ಮಾತಿಗೆ ಮರುಳಾಗಬೇಡಿ. ಮೊದಲನೆಯದಾಗಿ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ, ಎರಡನೆಯದಾಗಿ ಕಾಂಗ್ರೆಸ್ ಪಕ್ಷದ ಜೊತೆ ನಿಮ್ಮನ್ನೂ ಮುಳುಗಿಸಲು ಸಿದ್ದರಾಮಯ್ಯ ಕಾಯುತ್ತಿದ್ದಾರೆ!’ ಎಂದು ಹೇಳಿದೆ.
ನಮ್ಮ ನಾಯಕರು, ನಮ್ಮ ನಾಯಕರು ಎಂದು ಕೈ ಕುಲುಕುವ ಡಿಕೆಶಿ ಅವರೇ, ಹೆಜ್ಜೆ ಹೆಜ್ಜೆಗೂ ನಿಮ್ಮ ಮಾತೋಶ್ರೀ ನೀಡಿದ ಎಚ್ಚರಿಕೆ ಮರೆಯಬೇಡಿ ಎಂದು ಹೇಳಿ, ಶಿವಕುಮಾರ್ ಅವರ ತಾಯಿ ವಾಹಿನಿಯೊಂದರಲ್ಲಿ ಮಾತನಾಡಿದ್ದಾರೆ ಎನ್ನಲಾದ ವಿಡಿಯೊ ಹಂಚಿಕೊಂಡಿದೆ.
ಸಿದ್ದರಾಮಯ್ಯ ಬಗಲಲ್ಲಿರುವ ಕತ್ತಿ ಸದಾ ನಿಮ್ಮ ಕತ್ತನ್ನೇ ದೃಷ್ಟಿಸುತ್ತಿರುತ್ತದೆ ಎಂಬುದರಲ್ಲಿ ಅನುಮಾನ ಬೇಡ’ ಎಂದು ಹೇಳಿದ್ದು, ಪದಾಧಿಕಾರಿಗಳ ಪಟ್ಟಿ, ಪ್ರಚಾರ ಸಮಿತಿಗೆ ಅಧ್ಯಕ್ಷರ ನೇಮಕ, ಚುನಾವಣಾ ಟಿಕೆಟ್ ಎಲ್ಲವೂ ಸಿದ್ದರಾಮಯ್ಯ ಮೂಗಿನ ನೇರಕ್ಕೆ ನಡೆದು ಹೋಗಿದೆ. ಕೆಪಿಸಿಸಿ ಅಧ್ಯಕ್ಷರು ಬರೇ ರಬ್ಬರ್ ಸ್ಟ್ಯಾಂಪ್ ಅಷ್ಟೇ!’ ಎಂದು ವ್ಯಂಗ್ಯವಾಡಿದೆ.