ನವದೆಹಲಿ(ಅ.15) ಕೇಂದ್ರ ಚುನಾವಣಾ ಆಯೋಗ ಕರ್ನಾಟಕದ ಚನ್ನಪಟ್ಟಣ(ರಾಮನಗರ), ಶಿಗ್ಗಾಂವಿ(ಹಾವೇರಿ), ಮತ್ತು ಸಂಡೂರು(ಬಳ್ಳಾರಿ ಜಿಲ್ಲೆ) ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆಗೆ ದಿನಾಂಕ ಪ್ರಕಟಿಸಿದ್ದು, ಗಜೆಟ್ ನೋಟಿಫಿಕೇಶನ್ ಅಕ್ಟೋಬರ್ 18ರಂದು ಹೊರಡಿಸಲಾಗುತ್ತದೆ. ನಾಮಪತ್ರ ಸಲ್ಲಿಕೆಗೆ ಅಕ್ಟೋಬರ್ 25 ಕೊನೆಯ ದಿನವಾಗಿದ್ದು, ಅಭ್ಯರ್ಥಿಗಳು ಸಲ್ಲಿಸಿದ ನಾಮಪತ್ರ ಪರಿಶೀಲನೆ ಅಕ್ಟೋಬರ್ 28ಕ್ಕೆ ನಡೆಯಲಿದೆ. ನಾಮಪತ್ರ ಹಿಂತೆಗೆದುಕೊಳ್ಳಲು ಅಕ್ಟೋಬರ್ 30 ಕೊನೆಯ ದಿನವಾಗಿದೆ. ನವೆಂಬರ್ 13ರಂದು ಮೂರು ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಇನ್ನು ನವೆಂಬರ್ 23ರಂದು ಈ ಮೂರು ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ.
ಮಹಾರಾಷ್ಟ್ರ, ಜಾರ್ಖಂಡ್ ಜೊತೆಗೆ ಕರ್ನಾಟಕದ ಚನ್ನಪಟ್ಟಣ, ಸಂಡೂರು, ಶಿಗ್ಗಾವಿ ಕ್ಷೇತ್ರಗಳ ಉಪ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದ್ದು ರಾಜ್ಯದ ಮೂರು ಪಕ್ಷಗಳಲ್ಲಿ ಬೈ ಎಲೆಕ್ಷನ್ ಚುನಾವಣೆ ಕಾವು ರಂಗೇರಲಿದೆ. 2024 ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದಿದ್ದ ಶಾಸಕರಾದ ಎಚ್ ಡಿ ಕುಮಾರಸ್ವಾಮಿ – ಚನ್ನಪಟ್ಟಣ ಶಾಸಕ ಸ್ಥಾನ, ಬಸವರಾಜ ಬೊಮ್ಮಾಯಿ ಶಿಗ್ಗಾವಿ ಶಾಸಕ ಸ್ಥಾನ ಹಾಗೂ ತುಕಾರಾಂ ಸಂಡೂರು ಶಾಸಕ ಸ್ಥಾನ ರಾಜೀನಾಮೆ ನೀಡಿದ್ದು ಈಗ ಈ ವಿಧಾನ ಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.