ಚಾಮರಾಜನಗರ: ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರದ ಸಮೂಹ ದೇವಾಲಯಗಳಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದ್ದು ಈ ವೇಳೆ ಶಿಂಷಾ ಮಾರಮ್ಮನಿಗೆ ಭಕ್ತರು ಬಗೆಬಗೆ ಬೇಡಿಕೆ ಪತ್ರ ಬರೆದಿದ್ದಾರೆ.
ಹುಂಡಿ ಎಣಿಕೆ ವೇಳೆ ಮಹಿಳೆಯರು ತಮ್ಮ ಇಷ್ಟಾರ್ಥ ಈಡೇರಿಕೆಗಾಗಿ ಪತ್ರ ಬರೆದು ಹುಂಡಿಯಲ್ಲಿ ಹಾಕಿದ್ದು ಕೆಲವು ಪತ್ರಗಳು ಓದಲು ಅರ್ಥವಾದರೆ, ಕೆಲವು ಪತ್ರಗಳು ಅಸ್ಪಷ್ಟವಾಗಿದೆ. ಇನ್ನೂ, ಕೆಲವು ಪತ್ರಗಳಲ್ಲಿ ಉದ್ದದ ಪಟ್ಟಿಯನ್ನೇ ಭಕ್ತರು ದೇವಿಗೆ ಅರ್ಪಿಸಿದ್ದಾರೆ.
ಭಕ್ತೆಯೊಬ್ಬರು ತಮ್ಮ ಪತ್ರದಲ್ಲಿ ” ತಾಯಿ ನನ್ನವ್ವ ನನ್ನಿಂದ ಹಣ ಪಡೆದವರಿಂದ ಹಣ ಕೊಡಿಸು ಎಂದು ಸಾಲಗಾರರ ಹೆಸರು ಬರೆದು ತಿಂಗಳಲ್ಲಿ ಅವರು ನನಗೆ ಹಣ ಹಿಂತಿರುಗಿಸುವಂತೆ ಬುದ್ಧಿ ಕೊಡು ಎಂದು ಹರಕೆ ಕಟ್ಟಿಕೊಂಡಿದ್ದಾರೆ. ನನ್ನ ಹಣ ನನಗೆ ಕೊಡದಿದ್ದರೆ ಅವರಿಗೆ ಕಷ್ಟ ಕೊಡು ಎಂದು ಹರಕೆ ಕಟ್ಟಿಕೊಂಡಿರುವುದನ್ನು ಕಂಡು ಸಿಬ್ಬಂದಿಯೇ ಹೌಹಾರಿದ್ದಾರೆ.
ಇನ್ನು, ಮತ್ತೋರ್ವ ಮಹಿಳೆ ತನ್ನ ಗಂಡ ತನ್ನೊಟ್ಟಿಗೆ ಇರುವಂತೆ ಮಾಡು, ಆಶಾ ಜೊತೆ ಸಂಬಂಧ ಇಲ್ಲದಂತೆ ಮಾಡು, ನಾನು ನನ್ನ ಗಂಡ, ಮಕ್ಕಳು ಚೆನ್ನಾಗಿರಬೇಕು, ನಿನಗೆ ಮರಿಯೊಂದನ್ನು ಬಲಿ ಕೊಡುತ್ತೇನೆ ಎಂದು ಕೇಳಿಕೊಂಡಿದ್ದಾರೆ.
ಇನ್ನೊಬ್ಬರು ಭಕ್ತರು ತನಗೆ ಇನ್ನೂ 20 ವರ್ಷ ಹೆಚ್ಚಿನ ಆಯಸ್ಸು ಕೊಡು, ಅಂಗನವಾಡಿ ಕೆಲಸ ಖಾಯಂ ಮಾಡು ಎಂದು ಕೇಳಿಕೊಂಡಿದ್ದು ಮತ್ತೊಬ್ಬಾಕೆ ಇಂಗ್ಲಿಷ್ ನಲ್ಲಿ ತಮ್ಮ ಮನೆಮಂದಿಯ ಎಲ್ಲರ ವಿವಿಧ ಆಕಾಂಕ್ಷೆಗಳನ್ನು ಪಟ್ಟಿ ಮಾಡಿ ಹುಂಡಿಗೆ ಹಾಕಿದ್ದಾರೆ.