ದಾವಣಗೆರೆ,ಆ.3– ಲಕ್ಷಾಂತರ ಕಾರ್ಯಕರ್ತರು, ಅಭಿಮಾನಿಗಳ ಸಮ್ಮುಖದಲ್ಲಿ ಅದ್ಧೂರಿ ಸಿದ್ದರಾಮಯ್ಯನವರ ಅಮೃತ ಮಹೋತ್ಸವಕ್ಕೆ ಬೆಣ್ಣೆ ನಗರಿ ದಾವಣಗೆರೆ ಸಾಕ್ಷಿಯಾಯಿತು.
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರ 75ನೇ ಜನ್ಮದಿನ ಸಮಾರಂಭ ಸಿದ್ದರಾಮೋತ್ಸವದಲ್ಲಿ ಪಾಲ್ಗೊಳ್ಳಲು ರಾಜ್ಯದ ಮೂಲೆ ಮೂಲೆಯಿಂದ ಅಭಿಮಾನಿಗಳು ಆಗಮಿಸಿದ್ದರು.
ಶ್ಯಾಮನೂರು ಶಿವಶಂಕರಪ್ಪ ಮೈದಾನದಲ್ಲಿ ಏರ್ಪಡಿಸಿದ ಬೃಹತ್ ವೇದಿಕೆಯಲ್ಲಿ ಸಿದ್ದರಾಮಯ್ಯನವರ ವೈಭವದ ಅಮೃತ ಮಹೋತ್ಸವದಲ್ಲಿ ಪಾಲ್ಗೊಂಡ ಬಹುತೇಕ ಕಾಂಗ್ರೆಸ್ ನಾಯಕರು ಸಿದ್ದು ಗುಣಗಾನ ಮಾಡಿದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿಧಾನಸಭೆ ಚುನಾವಣೆಯನ್ನು ಸಿದ್ದರಾಮಯ್ಯ ನಾಯಕತ್ವದಲ್ಲಿ ಎದುರಿಸುವುದಾಗಿ ಘೋಷಿಸುವ ಮೂಲಕ ನಾಯಕತ್ವ ಕುರಿತಂತೆ ಇಲ್ಲಿಯವರೆಗೆ ಕೇಳಿಬಂದ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದರು.
ಈ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಆಗಿದೆ. ಅದೇ ಕಾಲದಲ್ಲಿ ನಮ್ಮ ನಿಮ್ಮೆಲ್ಲರ ನಾಯಕರಾದ ಸಿದ್ದರಾಮಯ್ಯನವರು ಕೂಡ ಹುಟ್ಟುಹಬ್ಬ ಆಚರಣೆಯನ್ನು ನಾವು ಮಾಡುತ್ತಿದ್ದೇವೆ. ದೇಶಕ್ಕೂ ಸಂಭ್ರಮ, ಕಾಂಗ್ರೆಸ್ಗೂ ಸಂಭ್ರಮ, ಸಿದ್ದರಾಮಯ್ಯನವರಿಗೂ ಸಂಭ್ರಮ, ನಮಗೂ ಸಂಭ್ರಮ ಎಂದು ಹೇಳಿದರು.
ನಮ್ಮ ಉದ್ದೇಶ ಈ ರಾಜ್ಯಕ್ಕೆ ನ್ಯಾಯ ಒದಗಿಸಬೇಕು. ಕಾಂಗ್ರೆಸ್ ಶಕ್ತಿಯೇ ಈ ದೇಶದ ಶಕ್ತಿ. ಕಾಂಗ್ರೆಸ್ ಇತಿಹಾಸವೇ ಈ ದೇಶದ ಇತಿಹಾಸ ಎಂದರು.
ಸಿದ್ದರಾಮಯ್ಯನವರ ಅಧಿಕಾರ ನಾವು ನೋಡಿದ್ದೇವೆ. ಸಿದ್ದರಾಮಯ್ಯ ಬಸವ ಜಯಂತಿಯ ದಿನ ಅಧಿಕಾರಕ್ಕೆ ಬಂದರು. ಬಸವಣ್ಣನವರ ತತ್ವವೇ ಕಾಂಗ್ರೆಸ್ ಪಕ್ಷದ ತತ್ವ. ಇದನ್ನು ಯಾರೂ ಮರೆಯಲು ಸಾಧ್ಯವಿಲ್ಲ. ನಿಮ್ಮ ಆಸೆ ನೀವೆಲ್ಲಾ ವಿಧಾನ ಸೌಧದ ಮೂರನೇ ಮೆಟ್ಟಿಲಿನ ಮೇಲೆ ನಡೆದುಕೊಂಡು ಓಡಾಡಬೇಕು. ಅದಕ್ಕೆ ನಾವು ನೀವು ಈ ಭ್ರಷ್ಟ ಸರ್ಕಾರವನ್ನು ತೆಗೆದುಹಾಕಲು ಇಂದು ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.
ಭಟ್ಟಂಗಿಗಳಿಂದ ದೂರವಿರಿ:
ಹಿರಿಯ ನಾಯಕ ರಮೇಶ್ ಕುಮಾರ್ ಮಾತನಾಡಿ ಇಂದು ಕಾಂಗ್ರೆಸ್ ಪಕ್ಷಕ್ಕೆ ಜನ ತೋರಿರುವ ಪ್ರೀತಿಗೆ ನಾವು ಋಣಿಯಾಗಿರಬೇಕು. ಸಿದ್ದರಾಮಯ್ಯನವರೇ ಬಗ್ಗಿ ಬಗ್ಗಿ ನಮಸ್ಕಾರ ಮಾಡುವವರನ್ನು ದೂರ ಇಟ್ಟಿರಿ, ಸುತ್ತಮುತ್ತಲೂ ಇರುವವರ ಬಗ್ಗೆ ಹುಷಾರಾಗಿರಿ ಎಂದು ಸಲಹೆ ಮಾಡಿದರು.
ಮುಂದೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಸಾರ್ವಜನಿಕ ಶಿಕ್ಷಣ, ಸಾರ್ವಜನಿಕ ಆರೋಗ್ಯ, ಪಂಚಾಯತ್ ರಾಜ್ ವಿಕೇಂದ್ರಿಕರಣ ಇವುಗಳನ್ನು ನಾವು ಯಶಸ್ವಿ ಮಾಡಬೇಕು. ಇಂದು ಕಾಂಗ್ರೆಸ್ ಪಕ್ಷಕ್ಕೆ ಜನ ತೋರಿರುವ ಪ್ರೀತಿಗೆ ನಾವು ಋಣಿಯಾಗಿರಬೇಕು ಎಂದು ಹೇಳಿದರು.
ಯಾರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಳ್ಳಲಿಲ್ಲವೋ, ಯಾರು ಹೋರಾಟದ ಪರವಾಗಿ ಇರಲಿಲ್ಲವೋ ಅವರು ಇಂದು ಈ ದೇಶದ ಚುಕ್ಕಾಣಿ ಹಿಡಿದಿದ್ದಾರೆ. ರಾಜ್ಯದಲ್ಲೂ ಅಧಿಕಾರ ಅವರ ಕೈಯಲ್ಲೇ ಇದೆ. ನಾವಿದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು. ಸಂವಿಧಾನ ಮನುಸೃತಿಯನ್ನು ವಿರೋಧ ಮಾಡುತ್ತದೆ. ಸಹಜವಾಗಿ ಮನುವಾದಿಗಳು ಈ ಸಂವಿಧಾನದ ವಿರುದ್ಧವಾಗಿದ್ದಾರೆ. ಇಂತಹ ಕಾರ್ಯಕ್ರಮಗಳ ಮೂಲಕ ಸಂವಿಧಾನ ಉಳಿಸುವ ಮನಸ್ಸು ನಮಗೆ ಬರಬೇಕು. ಇದು ಪ್ರತಿಯೊಬ್ಬರ ಕೆಲಸವಾಗಬೇಕು ಎಂದರು.
ಸಮಾರಂಭದ ನೇತೃತ್ವದ ವಹಿಸಿದ್ದ ಎಚ್.ಸಿ.ಮಹದೇವಪ್ಪ ಮಾತನಾಡಿ, ಈ ಅದ್ಭುತ ಕಾರ್ಯಕ್ರಮ ದೇಶಕ್ಕೆ ಒಂದು ಸಂದೇಶವನ್ನು ನೀಡುತ್ತಿದೆ. ಕಾಂಗ್ರೆಸ್ ಪುನಶ್ಚೇತನಕ್ಕೆ ನಾಂದಿಯಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಾಂಸ್ಕೃತಿಕ ನಾಯಕತ್ವ ರಾಜ್ಯಕ್ಕೆ ಅತ್ಯಗತ್ಯವಾಗಿದೆ. ರಾಜ್ಯದಲ್ಲಿ ಕೋಮು ಸೌಹಾರ್ದತೆ ನೆಲೆಸಬೇಕು. ದೇಶದಲ್ಲಿ ಸರ್ವಾಧಿಕಾರಿ ಧೋರಣೆ ತೊಲಗಬೇಕು. ಅದಕ್ಕಾಗಿ ಸಿದ್ದರಾಮಯ್ಯನವರ ನಾಯಕತ್ವ ಬೇಕಾಗಿದೆ ಎಂದು ಹೇಳಿದರು.
ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ಕರ್ನಾಟಕದ ಮಾಸ್ ಲೀಡರ್ ಸಿದ್ದರಾಮಯ್ಯನವರು ಹೋರಾಟಗಳಲ್ಲಿ ಬೆಳೆದು ಬಂದವರು. ಅವರು ನಮಗೆ ಒಂದು ಶಕ್ತಿ. ಇಲ್ಲಿನ ಜನಸ್ತೋಮ ಈ ಶಕ್ತಿಯ ಪ್ರತಿರೂಪವಾಗಿದೆ ಎಂದರು.
ದೇಶದಲ್ಲಿ ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಇದೆಲ್ಲದಕ್ಕೂ ಕಾಂಗ್ರೆಸ್ ಪರಿಹಾರ. ಮುಂಬರುವ ದಿನಗಳಲ್ಲಿ ಜನ ಕಾಂಗ್ರೆಸ್‍ನ ಬೆಂಬಲಕ್ಕೆ ನಿಲ್ಲಬೇಕು ಎಂದು ಅವರು ಹೇಳಿದರು.
ಬಿ.ಕೆ.ಹರಿಪ್ರಸಾದ್ ಮಾತನಾಡಿ, ಕಾಂಗ್ರೆಸ್ ಪಕ್ಷ ಸಂಘಟನೆಯ ಅಗತ್ಯತೆಯನ್ನು ಪ್ರತಿಪಾದಿಸಿದರು. ಜನವಿರೋ ಬಿಜೆಪಿಯನ್ನು ಜನ ತೊಲಗಿಸಬೇಕಾದ ಅಗತ್ಯವಿದೆ. ಜನಪರವಾದ ಕಾಂಗ್ರೆಸ್‍ನ್ನು ಅಕಾರಕ್ಕೆ ತರಬೇಕು ಎಂದು ಹೇಳಿದರು.
ಎಂ.ಬಿ.ಪಾಟೀಲ್, ಕೆ.ಜೆ.ಜಾರ್ಜ್, ರೆಹಮಾನ್ ಖಾನ್, ಡಾ.ಜಿ.ಪರಮೇಶ್ವರ್, ದಿನೇಶ್‍ಗುಂಡೂರಾವ್, ವೀರಪ್ಪ ಮೊಯ್ಲಿ, ಎಚ್.ಕೆ.ಪಾಟೀಲ್,ಎಚ್.ಎಂ.ರೇವಣ್ಣ, ರಾಮಲಿಂಗಾ ರೆಡ್ಡಿ, ಈಶ್ವರ್ ಖಂಡ್ರೆ, ಮೋಟಮ್ಮ, ರಾಣಿ ಸತೀಶ್, ಉಮಾಶ್ರೀ, ಸತೀಶ್ ಜಾರಕಿಹೊಳಿ, ಧ್ರುವನಾರಾಯಣ್, ಸಲೀಂ ಮೊಹಮ್ಮದ್, ಬಸವರಾಜರಾಯ ರೆಡ್ಡಿ ಹಲವು ಮುಖಂಡರು ಮಾತನಾಡಿ ದೇಶದಲ್ಲಿ ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ಬಗ್ಗೆ ಕಾಂಗ್ರೆಸ್ ಪಕ್ಷ ಸಂಘಟನಾತ್ಮಕ ಹೋರಾಟ ಮಾಡಬೇಕಾಗಿದೆ ಎಂದು ಕರೆ ನೀಡಿದರು.
ಕಾಂಗ್ರೆಸ್ ಪಕ್ಷದ ಸಂಘಟನೆ, ಚುನಾವಣೆಗೆ ಪಕ್ಷದ ತಯಾರಿಯ ಬಗ್ಗೆ ಸಲಹೆಗಳನ್ನು ನೀಡಿದ ಅವರು ಬಿಜೆಪಿ ಸರ್ಕಾರದ ಆಡಳಿತ ವೈಫಲ್ಯದ ಬಗ್ಗೆ ಕಿಡಿಕಾರಿದರು.
ಸಿದ್ದರಾಮೋತ್ಸವದಲ್ಲಿ ಒಗ್ಗಟ್ಟಿನ ಮಂತ್ರ ಪಠಣ..
Previous Articleಮಿಸ್ ನಂದಿನಿ ಟ್ರೈಲರ್ ಸಖತ್..
Next Article ಬಿಜೆಪಿ ಸರ್ಕಾರ ಕಿತ್ತೊಗೆಯುವ ಸಂಕಲ್ಪ..