ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದೆ. ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ಸತತ ನಾಲ್ಕು ದಿನಗಳಿಂದ ರಜೆ ಘೋಷಣೆ ಮಾಡಲಾಗಿದೆ. ಭಾರೀ ಮಳೆಗೆ ಪುಟ್ಟ ಪುಟಾಣಿ ಮಕ್ಕಳು ಮನೆಯಲ್ಲಿ ಬೆಚ್ಚಗೆ ಇದ್ದು ಮನೆಯಲ್ಲಿ ಮಾಡಿದ ಬಿಸಿ ಬಿಸಿ ತಿನಿಸುಗಳನ್ನು ಅಸ್ವಾದಿಸಿದರೆ ಕಡಬ ತಾಲೂಕಿನ ಕೊಕ್ಕಡದ ನೆಲ್ಲಿಯಾರ್ ನಿವಾಸಿ ಆರನೇ ತರಗತಿಯ ವಿದ್ಯಾರ್ಥಿ ವಿಖ್ಯಾತ್ ಮಾತ್ರ ಜಡಿಮಳೆಗೆ ಮನೆಯ ಗದ್ದೆಯಲ್ಲಿ ಉಳುಮೆ ಮಾಡುತ್ತಾನೆ. ಕೃಷಿ ಯಲ್ಲಿ ಅಪಾರ ಆಸಕ್ತಿ ಹೊಂದಿರುವ ವಿಖ್ಯಾತ್, ತಮ್ಮದೇ ಗದ್ದೆಯಲ್ಲಿ ಟಿಲ್ಲರ್‌ನಲ್ಲಿ ಉಳುಮೆ ಮಾಡುತ್ತಾನೆ. ಪುಟ್ಟ ಬಾಲಕನ ಕೃಷಿ ಆಸಕ್ತಿ ಎಲ್ಲರಲ್ಲೂ ಖುಷಿ ತಂದಿದೆ.
ನೆಲ್ಲಿಯಾರ್ ನಿವಾಸಿ ಕಿಶೋರ್ ಕುಮಾರ್ ಮತ್ತು ಲತಾ ದಂಪತಿಯ ಕಿರಿಯ ಪುತ್ರನಾಗಿರುವ ವಿಖ್ಯಾತ್, ಪಟ್ಟೂರು ಶ್ರೀರಾಮ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಆರನೇ ತರಗತಿಯ ವಿದ್ಯಾರ್ಥಿಯಾಗಿದ್ದಾನೆ. ತಂದೆ ಕಿಶೋರ್ ಕುಮಾರ್ ಪುತ್ತೂರು ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದು ಮಗನ ಕೃಷಿ ಪ್ರೀತಿಗೆ ಬೆಂಬಲ ನೀಡಿದ್ದಾರೆ. ತಾಯಿ ಲತಾ ಗೃಹಿಣಿಯಾಗಿದ್ದು ಮನೆಯ ಕೆಲಸದ ಜೊತೆಗೆ ಕೃಷಿ ಕೆಲಸ ವನ್ನು ನೋಡಿಕೊಳ್ಳುತ್ತಾರೆ. ತಾಯಿಗೆ ಕೃಷಿ ಕೆಲಸದಲ್ಲಿ ಸಹಾಯ ಮಾಡುವ ವಿಖ್ಯಾತ್ ಬಳಿಕ ಗದ್ದೆ ಕೆಲಸದಲ್ಲಿ ಪಾಲ್ಗೊಳ್ಳುತ್ತಾನೆ.
ಮೂಲತಃ ವಿಖ್ಯಾತ್ ನದ್ದು ಕೃಷಿ ಕುಟುಂಬವಾಗಿದ್ದು, ಮಳೆಗಾಲದ ಆರಂಭವಾದರೆ ಮನೆಯಲ್ಲಿ ಕೃಷಿ ಚಟುವಟಿಕೆಗಳು ಗದಿಗೆದರುತ್ತದೆ. ಅವಿಭಕ್ತ ಕುಟುಂಬವಾಗಿರುವ ಹಿನ್ನಲೆಯಲ್ಲಿ ಎಲ್ಲರೂ ಕೃಷಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಎಳವೆಯಿಂದಲೇ ಕೃಷಿ ಚಟುವಟಿಕೆಗಳನ್ನು ಆಸಕ್ತಿಯಿಂದ ಪಾಲ್ಗೊಂಡ ವಿಖ್ಯಾತ್ ಸದ್ಯ ಎಲ್ಲಾ ಕೆಲಸಗಳಲ್ಲಿ ಅಷ್ಟೇ ನೈಪುಣ್ಯತೆ ಹೊಂದಿದ್ದಾನೆ. ಪಾಠದ ಜೊತೆಗೆ ಮನೆಯ ಕೃಷಿ ಕೆಲಸದಲ್ಲೂ ವಿಖ್ಯಾತ್ ಖುಷಿಯಿಂದ ಪಾಲ್ಗೊಳ್ಳುತ್ತಾನೆ.
ಭಾರೀ ಮಳೆಯ ಹಿನ್ನಲೆಯಲ್ಲಿ ಜಿಲ್ಲಾಡಳಿತ ಕೊಟ್ಟ ನಾಲ್ಕೂ ರಜೆಗಳನ್ನು ಕೃಷಿ ಕೆಲಸಕ್ಕಾಗಿ ಸದುಪಯೋಗ ಮಾಡಿಕೊಂಡ ವಿಖ್ಯಾತ್ ಬೆಳಗ್ಗೆ ಬೇಗನೇ ಎದ್ದು ಕೃಷಿ ಕೆಲಸದಲ್ಲಿ ಪಾಲ್ಗೊಂಡಿದ್ದಾನೆ. ಗದ್ದೆಯಲ್ಲಿ ಟಿಲ್ಲರ್ ಮೂಲಕ ಉಳುಮೆ ಮಾಡುತ್ತಾನೆ. ಟಿಲ್ಲರ್ ನ ಎಲ್ಲಾ ತಾಂತ್ರಿಕ ಕೆಲಸದಲ್ಲೂ ಪರಿಣತಿಯನ್ನು ಹೊಂದಿದ್ದಾನೆ. ಗದ್ದೆಯನ್ನು ಉಳುಮೆ ಮಾಡಿ ಮಗ ನಮ್ಮ ಭಾರವನ್ನು ಕಡಿಮೆ ಮಾಡಿದ್ದಾನೆ ಅಂತಾ ವಿಖ್ಯಾತ್ ತಂದೆ ಕಿಶೋರ್ ಕುಮಾರ್ ಖುಷಿ ವ್ಯಕ್ತಪಡಿಸಿದ್ದಾರೆ..
ತನ್ನ ಕೆಲಸದ ಬಗ್ಗೆ ಮಾತನಾಡಿದ ವಿಖ್ಯಾತ್, ಗದ್ದೆ ಕೆಲಸ ಅಂದರೆ ನನಗೆ ತುಂಬಾ ಆಸಕ್ತಿ. ಮಳೆಗೆ ಮೈಗೆ ಕೆಸರು ಮೆತ್ತುತ್ತಾ, ಉಳುಮೆ ಮಾಡೋದು ತುಂಬಾ ಖುಷಿಯನ್ನು ತಂದುಕೊಡುತ್ತದೆ. ಮಳೆಯ ಹಿನ್ನಲೆಯಲ್ಲಿ ಸಿಕ್ಕ ರಜೆಯನ್ನು ಕೃಷಿಗೆ ಬಳಸಿಕೊಂಡಿದ್ದೇನೆ. ಮನೆಯಲ್ಲಿ ಎಲ್ಲರೂ ಕೃಷಿ ಕೆಲಸದಲ್ಲಿ ಪಾಲ್ಗೊಳ್ಳೋದರಿಂದ ಎಲ್ಲರ ಜೊತೆ ಕೂಡಿ ಕೆಲಸ ಮಾಡೋದು ತುಂಬಾ ಖುಷಿ ಕೊಡುತ್ತದೆ ಅಂತಾ ವಿಖ್ಯಾತ್ ಹೇಳಿದ್ದಾರೆ.