ದಿಕ್ಸೂಚಿಯಾಗಲಿರುವ ಫಲಿತಾಂಶ..
ಹಲವಾರು ಕಾರಣಗಳಿಂದಾಗಿ ದೇಶದ ಗಮನ ಸೆಳೆದಿದ್ದ ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. 2014ರ ಲೋಕಸಭಾ ಚುನಾವಣೆಯ ನಂತರದ ಚುನಾವಣೆಗಳ ಸಾತತ ಸೋಲಿನಿಂದ ಕಂಗೆಟ್ಟಿದ್ದ ಕಾಂಗ್ರೆಸ್ ಪಕ್ಷಕ್ಕೆ ಇದೊಂದೇ ರಾಜ್ಯ ಅತ್ಯಂತ ಭರವಸೆಯ ಪ್ರದೇಶವಾಗಿತ್ತು.
ಚುನಾವಣೆ ಫಲಿತಾಂಶ ಕಾಂಗ್ರೆಸ್ಸಿನ ನಿರೀಕ್ಷೆಯನ್ನು ಮಾಡಿಲ್ಲ ಸರಳವಾಗಿ ಹೇಳುವುದಾದರೆ ಈ ಚುನಾವಣೆಯ ಫಲಿತಾಂಶ ಕಾಂಗ್ರೆಸ್ಸಿನ ಆಶಾವಾದ ಮತ್ತು ಉತ್ಸಾಹವನ್ನು ಇಮ್ಮಡಿಗೊಳಿಸಿದೆ ಈ ಗೆಲುವು ಮರಳುಗಾಡಿನಲ್ಲಿ ಓಯಸಿಸ್ ಲಭಿಸಿದಂತಾಗಿದೆ.
ಈ ಫಲಿತಾಂಶದ ಬಗ್ಗೆ ಇಂತಹ ಸರಳ ವ್ಯಾಖ್ಯಾನ ಮಾಡಬಹುದಾದರೂ ಇದರ ಆಚೆಗೆ ಈ ಫಲಿತಾಂಶವನ್ನು ಅವಲೋಕಿಸ ಬೇಕಾಗುತ್ತದೆ. ಈ ಚುನಾವಣೆಯ ಫಲಿತಾಂಶ ರಾಷ್ಟ್ರ ರಾಜಕಾರಣಕ್ಕೆ ಹಲವು ಸಂದೇಶಗಳನ್ನು ನೀಡಿದೆ ಅದೇ ರೀತಿಯಲ್ಲಿ ಹಲವು ಸವಾಲುಗಳನ್ನು ಸೃಷ್ಟಿಸಿದೆ.
ಈ ಚುನಾವಣೆಯ ಫಲಿತಾಂಶವು ಪ್ರಮುಖವಾಗಿ ಬಿಜೆಪಿಯಲ್ಲಿ ಇಲ್ಲಿಯವರೆಗೆ ಹೇಳಲು ಸಾಧ್ಯವೇ ಇಲ್ಲದಂತ ವಿಷಯಗಳನ್ನು ಹೇಳುವಂತೆ ಮಾಡಿದೆ ಜೊತೆಗೆ ಪ್ರಶ್ನಿಸುವ ವ್ಯಕ್ತಿಗಳಿಗೆ ದೊಡ್ಡ ರೀತಿಯಲ್ಲಿ ಬಲವನ್ನು ತಂದುಕೊಟ್ಟಿದೆ.
ಮುಂಬರುವ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಕರ್ನಾಟಕ ವಿಧಾನಸಭೆ ಚುನಾವಣೆಯನ್ನು ರಿಹರ್ಸಲ್ ಎಂಬ ರೀತಿಯಲ್ಲಿ ನೋಡಲಾಗಿತ್ತು. ಕಾಂಗ್ರೆಸ್ ಪಕ್ಷ ಸೋಲಿನಿಂದ ಕಂಗೆಟ್ಟಿದ್ದು ತಿರುಗೇಟು ನೀಡಲು ಕಾಯುತ್ತಿತ್ತು ಅದರಲ್ಲೂ ಪ್ರಮುಖವಾಗಿ ದಲಿತ ಸಮುದಾಯಕ್ಕೆ ಸೇರಿದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಇಲ್ಲಿಯವರೆಗೆ ಕಾಂಗ್ರೆಸ್ ಪಕ್ಷ ಎದುರಿಸುತ್ತಿದ್ದ ಒಂದು ಕುಟುಂಬದ ನಿಯಂತ್ರಣ ಎಂಬ ಆರೋಪವನ್ನು ದೂರ ಮಾಡಲು ಪ್ರಯತ್ನ ನಡೆಸಿತು.
ಹಾಗೆಯೇ, ಪಕ್ಷದ ಅಧಿಕಾರದಿಂದ ದೂರ ಉಳಿದ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯ ಮೂಲಕ ಸೋಲಿನಿಂದ ಕಂಗೆಟ್ಟಿದ್ದ ಪಕ್ಷಕ್ಕೆ ಹೊಸ ಉತ್ಸಾಹ ತುಂಬುವ ರೀತಿಯಲ್ಲಿ ನಡೆಸಿದ ಪ್ರಯತ್ನ ಗಮನಸೆಳೆಯಿತು. ಇದನ್ನು ಪ್ರಮುಖವಾಗಿ ಆಧಾರವಾಗಿಟ್ಟುಕೊಂಡು ನಡೆದ ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಮಿಶ್ರ ಫಲಿತಾಂಶ ನೀಡಿತು. ಆದರೆ ಭಾರತ್ ಜೋಡೋ ಯಾತ್ರೆ ಈ ಎರಡು ರಾಜ್ಯಗಳಲ್ಲಿ ಹಾದು ಹೋಗಲಿಲ್ಲ ಇನ್ನೂ ಗಮನಾರ್ಹ ಸಂಗತಿ. ಆದರೆ ಕರ್ನಾಟಕದಲ್ಲಿ ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಈ ಯಾತ್ರೆ ಹಾದು ಹೋಗಿದೆ.
ಅದೇ ರೀತಿಯಲ್ಲಿ ನೆರೆಯ ಆಂಧ್ರಪ್ರದೇಶ ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಹಾದು ಹೋಗಿರುವ ಯಾತ್ರೆ ಮುಂದೆ ವಿಧಾನಸಭೆ ಚುನಾವಣೆ ಎದುರಿಸಲಿರುವ ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲೂ ಹಾದು ಹೋಗಿದೆ ಹೀಗಾಗಿ ಅಲ್ಲಿ ಯಾವ ರೀತಿಯ ಪರಿಣಾಮ ಬೀರಲಿದೆ ಎನ್ನುವುದು ಕುತೂಹಲ ಮೂಡಿಸಿದೆ.
ಬಿಜೆಪಿಯ ಪಾಲಿಗೆ ಚುನಾವಣೆ ಅತ್ಯಂತ ಮಹತ್ವದ್ದಾಗಿತ್ತು. ಕಳೆದ ಒಂಬತ್ತು ವರ್ಷಗಳಿಂದ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವದಲ್ಲಿ ಇದ್ದರೂ ಕೂಡ ಗುಜರಾತ್ ಮತ್ತು ಉತ್ತರ ಪ್ರದೇಶ ಹೊರತುಪಡಿಸಿ ಬೇರೆ ಯಾವುದೇ ರಾಜ್ಯಗಳಲ್ಲಿ ಬಿಜೆಪಿ ತನ್ನ ಸ್ವಂತ ಕಾಲ ಬಲದ ಮೇಲೆ ಸರ್ಕಾರ ರಚಿಸಿಲ್ಲ. ಅದರಲ್ಲೂ ಈ ಎರಡೂ ಸರ್ಕಾರಗಳು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ಕಾರಣಕ್ಕೆ ಬಂದ ಸರ್ಕಾರಗಳೆಲ್ಲ ಗುಜರಾತ್ ಮೊದಲಿಂದಲೂ ಬಿಜೆಪಿಯ ಭದ್ರಕೋಟೆಯಾದರೆ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರ ಕಾರಣಕ್ಕೆ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂಬ ವ್ಯಾಖ್ಯಾನ ಮಾಡಲಾಗುತ್ತಿದೆ.
ಹೀಗಾಗಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಜೋಡಿ ಕರ್ನಾಟಕ ವಿಧಾನಸಭೆ ಚುನಾವಣೆಯನ್ನು ತಮ್ಮ ವಯಕ್ತಿಕ ಸವಾಲು ಎಂದು ಪರಿಗಣಿಸಿ ಅಖಾಡಕ್ಕೆ ಇಳಿಯಿತು. ಚುನಾವಣೆಗೂ ಮುನ್ನ ಸರಣಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಮೂಲಕ ಪ್ರಧಾನಿ ಮೋದಿ ಬಿಜೆಪಿ ಎಂದರೆ ಅಭಿವೃದ್ದಿ. ಡಬಲ್ ಇಂಜಿನ್ ಸರ್ಕಾರದಿಂದ ರಾಜ್ಯದ ಪ್ರಗತಿ ಸಾಧ್ಯ ಎಂಬ ವಾದ ಮಂಡಿಸಿ ಹೊಸ ತಂತ್ರಗಾರಿಕೆಯನ್ನು ಮುಂದಿಟ್ಟರು. ಇದಕ್ಕೆ ಪೂರಕವೆಂಬಂತೆ ಅಮಿತ್ ಶಾ ಕೂಡ ರಾಜ್ಯದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದರೆ ಕೇಂದ್ರ ಸಚಿವರ ದಂಡೆ ರಾಜ್ಯದಲ್ಲಿ ನಿರಂತರ ಪ್ರವಾಸ ಮಾಡುವ ಮೂಲಕ ಕರ್ನಾಟಕದಲ್ಲಿ ದೊಡ್ಡ ಪ್ರಮಾಣದ ಅಭಿವೃದ್ಧಿಯ ಅಲೆ ಎದ್ದಿದೆ ಎಂದು ಬಿಂಬಿಸಲು ಮುಂದಾಯಿತು.
ನಂತರದಲ್ಲಿ ಅಭ್ಯರ್ಥಿಗಳ ಆಯ್ಕೆಯಿಂದ ಹಿಡಿದು ಮತದಾನ ಪ್ರಕ್ರಿಯೆಯವರೆಗೆ ಮೋದಿ ಮತ್ತು ಅಮಿತ್ ಶಾ ಜೋಡಿ ಕರ್ನಾಟಕದ ಬಿಜೆಪಿ ವಿದ್ಯಮಾನಗಳನ್ನು ತಮ್ಮ ಕೈಗೆ ತೆಗೆದುಕೊಂಡು ಕೆಲಸ ಮಾಡಿತು. ಮೋದಿ ಅವರಂತೂ ಕರ್ನಾಟಕದಲ್ಲಿ ಹಲವಾರು ಸಾರ್ವಜನಿಕ ಸಭೆ ರೋಡ್ ಶೋ ನಡೆಸುವ ಮೂಲಕ ಇದು ತಮ್ಮ ನಾಯಕತ್ವಕ್ಕೆ ನಡೆಯುತ್ತಿರುವ ಚುನಾವಣೆ ಎಂದೇ ಬಿಂಬಿಸಿದರು.
ಡಬಲ್ ಇಂಜಿನ್ ಸರ್ಕಾರ ಎಂದು ಪದೇ ಪದೇ ಹೇಳುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಕೇಳಿ ಬಂದ ಶೇಕಡ 40ರಷ್ಟು ಕಮಿಷನ್ ಆರೋಪ ಮತ್ತು ಭ್ರಷ್ಟಾಚಾರ ವಿರುದ್ಧದ ಕಾಂಗ್ರೆಸ್ಸಿನ ವ್ಯವಸ್ಥಿತ ಪ್ರಚಾರ ತಂತ್ರವನ್ನು ಹತ್ತಿಕ್ಕುವ ಪ್ರಯತ್ನ ನಡೆಸಿದರು. ಭ್ರಷ್ಟಾಚಾರ ವಿರುದ್ಧದ ಕಾಂಗ್ರೆಸ್ ಆರೋಪ ಜನರ ಮೇಲೆ ಯಾವುದೇ ಪರಿಣಾಮ ಬೀರಬಾರದು ಎಂದು ತಾವೇ ಸ್ವತಃ ಚುನಾವಣೆಯ ನೇತೃತ್ವ ವಹಿಸಿ ಸ್ಥಳೀಯ ನಾಯಕತ್ವವನ್ನು ಮುಂಚೂಣಿಗೆ ಬರಲು ಬಿಡಲಿಲ್ಲ.
ಮತ್ತೊಂದೆಡೆ ಜೆಡಿಎಸ್ ಪಂಚರತ್ನ ಯಾತ್ರೆಯ ಮೂಲಕ ಜನರಲ್ಲಿ ಹೊಸ ಆಲೋಚನೆ ಮೂಡಿಸುವ ಪ್ರಯತ್ನ ನಡೆಸಿತು. ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರಂತೂ ತಾವೇ ಮುಂದಿನ ಮುಖ್ಯಮಂತ್ರಿ ಎಂದು ಪ್ರಚಾರ ಮಾಡಿದರು ತೀವ್ರ ಅನಾರೋಗ್ಯದ ನಡುವೆಯೂ ಮಾಜಿ ಪ್ರಧಾನಿ ದೇವೇಗೌಡ ತಮ್ಮ ಪಕ್ಷದ ಪರ ಪ್ರಚಾರ ಮಾಡುವ ಮೂಲಕ ಗಮನ ಸೆಳೆದರು.
ಆದರೆ ಇದೆಲ್ಲಕ್ಕಿಂತ ವ್ಯತಿರಿಕ್ತವಾಗಿ ಕಾಂಗ್ರೆಸ್ ತಂತ್ರವನ್ನು ಹೆಣೆಯಿತು. ಧನಾತ್ಮಕ ಪ್ರಚಾರ ಮತ್ತು ಆಕ್ರಮಣಕಾರಿ ರಾಜಕಾರಣ ಮಾಡಿತು. ಪ್ರಮುಖವಾಗಿ ಜನರಿಗೆ ಭರವಸೆಗಳ ಗ್ಯಾರಂಟಿ ನೀಡಿದ್ದು ಹೆಚ್ಚು ಪರಿಣಾಮಕಾರಿಯಾದರೆ ಈ ಚುನಾವಣೆಯಲ್ಲಿ ರಾಷ್ಟ್ರೀಯ ಹಿತಾಸಕ್ತಿ, ಓಲೈಕೆ ರಾಜಕಾರಣ ಸೇರಿದಂತೆ ಹಲವು ವಿಷಯಗಳನ್ನು ಬದಿಗೊತ್ತಿ ಸ್ಥಳೀಯ ವಿಷಯಗಳತ್ತ ಹೆಚ್ಚು ಗಮನ ಸೆಳೆಯಿತು.
ಕನ್ನಡ ಕನ್ನಡಿಗ ಮತ್ತು ಕರ್ನಾಟಕ ಎಂಬುದನ್ನೇ ಪ್ರಮುಖವಾಗಿ ನಡೆಸಿದ ವ್ಯವಸ್ಥಿತ ಕಾರ್ಯತಂತ್ರ
ಫಲ ನೀಡಿದ್ದು, ಪಕ್ಷದ ಬಲವನ್ನು ಹೆಚ್ಚಿಸಿದ್ದಲ್ಲದೆ, ಮುಂದಿನ ಲೋಕಸಭೆ ಚುನಾವಣೆಗೆ ದಿಕ್ಸೂಚಿಯಾಗಿದೆ.
ಕಳೆದ 2018ರವರೆಗಿನ ಚುನಾವಣೆಗಳವರೆಗೂ ಬಿಜೆಪಿ ಆಕ್ರಮಣಕಾರಿ ರಾಜಕಾರಣ ಮಾಡುತ್ತಿತ್ತು, ಕಾಂಗ್ರೆಸ್ ನಾಯಕರು ಬಿಜೆಪಿ ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡುವ ಮೂಲಕ ಪಕ್ಷ ಅಪರಾಧಿ ಸ್ಥಾನದಲ್ಲಿ ನಿಲ್ಲುತ್ತಿತ್ತು. ಹೆಚ್ಚು ಕಾಲ ಅಧಿಕಾರ ಅನುಭವಿಸಿದ ಕಾರಣಕ್ಕೆ ಎಲ್ಲಾ ಲೋಪಗಳಿಗೂ ಕಾಂಗ್ರೆಸ್ ಪಕ್ಷವೇ ಉತ್ತರದಾಯಿತ್ವ ಹೊಂದಿತ್ತು. ಹೀಗಾಗಿ 70 ವರ್ಷಗಳಲ್ಲಿ ಏನು ಮಾಡಿದೆ ಎಂಬ ಪ್ರಶ್ನೆ ಎದುರಾದಾಗ ಕಾಂಗ್ರೆಸ್ ಮಂಕಾಗುತ್ತಿತ್ತು
ಇಂತಹದ್ದೆ ಪ್ರಶ್ನೆಗಳನ್ನು ಜನರ ಮುಂದಿಟ್ಟು ಹಂತ ಹಂತವಾಗಿ ಮೇಲೆರಿ ಬಂದ ಬಿಜೆಪಿ ಕೇಂದ್ರದಲ್ಲಿ ಕಳೆದ 9 ವರ್ಷಗಳಿಂದ ಆಡಳಿತದಲ್ಲಿದೆ. ಈಗಲೂ 70 ವರ್ಷಗಳ ಸಾಧನೆ ಏನು ಎಂದು ಪ್ರಶ್ನಿಸುತ್ತಲೇ ಕಾಲ ಕಳೆಯುತ್ತಿದೆ.ಕಾಂಗ್ರೆಸ್ ಪ್ರತಿ ಹಂತದಲ್ಲೂ ಈ ಬಾರಿ ಬಿಜೆಪಿಯನ್ನು ಪ್ರಶ್ನಿಸುವ ಮೂಲಕ ಆಕ್ರಮಣಕಾರಿ ತಂತ್ರಗಾರಿಕೆಯನ್ನು ಅನುಸರಿಸಿತ್ತು. ಕೇಂದ್ರ ಮತ್ತು ರಾಜ್ಯ ಎರಡು ಕಡೆಯಲ್ಲೂ ಅಧಿಕಾರದಲ್ಲಿದ್ದ ಬಿಜೆಪಿಗೆ ಉತ್ತರ ನೀಡಲು ಸಾಧ್ಯವಾದ ಇಕ್ಕಟ್ಟನ್ನು ಕಾಂಗ್ರೆಸ್ ನಿರ್ಮಿಸಿತು.
ಪ್ರತಿಯಾಗಿ ಆಡಳಿತ ರೂಢ ಬಿಜೆಪಿ ಸಂಘ ಪರಿವಾರದ ನೆರವಿನೊಂದಿಗೆ ಜಟ್ಕಾ ಕಟ್, ಆಝಾನ್, ಹಿಜಾಬ್, ವ್ಯಾಪಾರ ನಿರ್ಬಂಧ, ಗೋ ಸಾಗಾಣಿಕೆ ಮೇಲೆ ಪ್ರಾಯೋಜಿತ ದಾಳಿಗಳು ಸೇರಿದಂತೆ ಅನೇಕ ಮಾದರಿಯ ಕೋಮು ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಲೇ ಬಿಜೆಪಿ ಜನರ ಗಮನವನ್ನು ಬೇರೆ ಸೆಳೆಯುವ ಪ್ರಯತ್ನ ನಡೆಸಿತು. ಆದರೆ ಕಾಂಗ್ರೆಸ್ ಈ ವಿಷಯಗಳ ಬಗ್ಗೆ ಹೆಚ್ಚು ಗಮನ ಹರಿಸದೆ, ಶೇ.40ರಷ್ಟು ಕಮಿಷನ್, ಭ್ರಷ್ಟಚಾರ, ಬೆಲೆ ಏರಿಕೆ, ಪೆಟ್ರೋಲ್ ಡಿಸೇಲ್, ಅಡುಗೆ ಅನಿಲ ದರ ಹೆಚ್ಚಳ, ನಿಷ್ಕ್ರೀಯ ಆಡಳಿತ ಮೊದಲಾದ ವಿಷಯಗಳನ್ನು ಪ್ರಸ್ತಾಪಿಸುವ ಮೂಲಕ ಬೇರೆಯ ತಂತ್ರಗಾರಿಕೆ ಅನುಸರಿಸಿತು.
ದೇಶದ ರಾಜಕೀಯ ಚಿತ್ರಣವನ್ನು ಗಮನಿಸಿದರೆ ಇಲ್ಲಿಯವರೆಗೆ ಉತ್ತರ ಭಾರತದಲ್ಲಿ ಸಂಭವಿಸುವ ರಾಜಕೀಯ ಬದಲಾವಣೆಗಳು ರಾಷ್ಟ್ರ ರಾಜಕಾರಣದ ಮೇಲೆ ಪರಿಣಾಮ ಬೀರುತ್ತವೆ ಎಂದು ಹೇಳಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಕರ್ನಾಟಕದ ಚುನಾವಣೆಯನ್ನು ಗಮನದಲ್ಲಿಟ್ಟು ದಕ್ಷಿಣ ರಾಜ್ಯದ ವಿದ್ಯಮಾನ ರಾಷ್ಟ್ರ ರಾಜಕಾರಣದ ಮೇಲೆ ಪರಿಣಾಮ ಬೀರಲಿದೆ ಎಂದು ಬಿಂಬಿಸಲಾಯಿತು. ಇದಕ್ಕೆ ಪೂರಕವೆಂಬಂತೆ ಕರ್ನಾಟಕದ ಗೆಲುವಿನ ಮೂಲಕ ಬಿಜೆಪಿ ಮುಂಬರುವ ಲೋಕಸಭಾ ಚುನಾವಣೆಗೆ ಭಾರತದ ಗೆಲುವಿನ ಹೆಬ್ಬಾಗಿಲು ತೆರೆಯಲಿದೆ ಎಂದು ಭಾವಿಸಿ ಕಾರ್ಯತಂತ್ರ ಮಾಡಲಾಯಿತು.ಒಟ್ಟಾರೆ ಲೆಕ್ಕಾಚಾರದಲ್ಲಿ ಬಿಜೆಪಿಯ ತಂತ್ರಗಾರಿಕೆ ಸಂಪೂರ್ಣ ತಿರಸ್ಕರಿಸಲ್ಪಟ್ಟಿದೆ. ಮೋದಿ ಮತ್ತು ಅಮಿತ್ ಶಾ ಕರ್ನಾಟಕ ರಾಜ್ಯದಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ ಎನ್ನುವುದನ್ನು ಮತದಾರರು ತೋರಿಸಿಕೊಟ್ಟಿದ್ದಾರೆ.
ಈ ಚುನಾವಣೆಯಲ್ಲಿ ನಿರುದ್ಯೋಗ, ಬಡತನ, ಬೆಲೆ ಏರಿಕೆ, ಭ್ರಷ್ಟಾಚಾರ ಆರೋಪ ,ಆಡಳಿತ ವಿರೋಧಿ ಅಲೆ ಎನ್ನುವುದು ಎಷ್ಟರಮಟ್ಟಿಗೆ ಪರಿಣಾಮ ಬೀರಿದವೋ ಅದೇ ರೀತಿಯಲ್ಲಿ ವಂಶಾಡಳಿತವನ್ನು ವಿರೋಧಿಸುವ ಬಿಜೆಪಿ ಟಿಕೆಟ್ ಹಂಚಿಕೆಯ ಸಮಯದಲ್ಲಿ ಕುಟುಂಬ ರಾಜಕಾರಣಕ್ಕೆ ಆದ್ಯತೆ ನೀಡಿದ್ದು ಕೂಡ ಪರಿಣಾಮ ಬೀರಿದೆ.
ಮತದಾರರು ಯಾರು ಯಾರ ವಿರುದ್ಧ ಸ್ಪರ್ಧೆ ಮಾಡಿದ್ದಾರೆ ಎನ್ನುವುದನ್ನು ಪ್ರಮುಖವಾಗಿ ಪರಿಗಣಿಸಿದ್ದಾರೆ ಹೀಗಾಗಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಸ್ಪರ್ಧಿಸಿದೆ ಎಂದು ಪರಿಗಣಿಸಿ ಮತಗಳ ಕ್ರೂಡೀಕರಣವಾಗಿದೆ. ಈ ರೀತಿಯ ಕ್ರೂಡೀಕರಣ ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ನಡೆದಿತ್ತು ಕರ್ನಾಟಕದಲ್ಲೂ ಅದು ಪುನರಾವರ್ತನೆಯಾಗಿದೆ ಬಿಜೆಪಿಯನ್ನು ಕಟ್ಟಿ ಹಾಕಲು ಜಾತ್ಯತೀತ ಜನತಾ ದಳದಿಂದ ಸಾಧ್ಯವಿಲ್ಲ ಎಂದು ನಿರ್ಧರಿಸಿದ ಮತದಾರರುಸಂಪೂರ್ಣವಾಗಿ ಕಾಂಗ್ರೆಸ್ ಅನ್ನು ಬೆಂಬಲಿಸಿದ್ದಾರೆ.
ಪ್ರಮುಖವಾಗಿ ಬಿಜೆಪಿಯ ವಿರುದ್ಧ ಇಂತಹ ಅಲೆ ಕಂಡು ಬರಲು ಆ ಪಕ್ಷ ನಡೆಸಿಕೊಂಡು ಬರುತ್ತಿರುವ ವೈಖರಿ, ಸಾಂವಿಧಾನಿಕ ಸಂಸ್ಥೆಗಳ ದುರ್ಬಳಕೆ ಅತಿಯಾದ ಹಿಂದುತ್ವ ಪ್ರತಿಪಾದನೆ ರಾಷ್ಟ್ರೀಯತೆಯ ಹೆಸರಿನ ರಾಜಕಾರಣದ ಮೂಲಕ ಜನರ ನೈಜ ಸಮಸ್ಯೆಗಳತ್ತ ಗಮನ ಹರಿಸದಿರುವುದು ದೊಡ್ಡ ಪ್ರಮಾಣದ ಆಡಳಿತ ವಿರೋಧಿ ಅಲೆಯಾಗಿ ಪರಿಣಮಿಸಿದೆ.
ಇದೇ ರೀತಿಯಾದ ಜನಾಭಿಪ್ರಾಯವನ್ನು ಸದ್ಯದಲ್ಲೇ ವಿಧಾನಸಭೆ ಚುನಾವಣೆ ಎದುರಿಸಲಿರುವ ಮಧ್ಯಪ್ರದೇಶ ರಾಜಸ್ತಾನ ಛತ್ತೀಸ್ ಗಡ ರಾಜ್ಯಗಳಲ್ಲಿ ನೋಡಬಹುದಾಗಿದೆ ಇಲ್ಲಿ ಬಿಜೆಪಿಯನ್ನು ಎದುರಿಸುವ ಶಕ್ತಿ ಕಾಂಗ್ರೆಸ್ಸಿಗೆ ಮಾತ್ರ ಇದೆ ನೇರ ಹಣಾಹಣಿ ಎರಡು ಪಕ್ಷಗಳ ನಡುವೆ ನಡೆಯಲಿದೆ ಅದೇ ರೀತಿಯಲ್ಲಿ ಚುನಾವಣೆ ನಡೆಯಲಿರುವ ತೆಲಂಗಾಣ ಮತ್ತು ಮಿಜೋರಾಂನಲ್ಲಿ ಪರಿಸ್ಥಿತಿ ಬೇರೆ ಇದೆ ಇಲ್ಲಿ ಯಾವ ಪಕ್ಷ ಬಿಜೆಪಿಯನ್ನು ಎದುರಿಸಲಿದೆ ಎಂಬುದನ್ನು ಮತದಾರರು ಗಮನಿಸುತ್ತಾರೆ.
ಇದಕ್ಕೆ ವ್ಯತಿರಿಕ್ತವಾಗಿ ಬಿಹಾರದಲ್ಲಿ ನಡೆದ ವಿಧಾನಸಭೆ ಚುನಾವಣೆಯನ್ನು ಗಮನಿಸಬೇಕು ಇಲ್ಲಿ ಮಹಾಘಟಬಂಧನ ನೇತೃತ್ವದಲ್ಲಿ ಚುನಾವಣೆ ಎದುರಿಸಿದ ಪ್ರತಿಪಕ್ಷಗಳು ಮತಗಳ ಕ್ರೂಡಿಕರಣದಲ್ಲಿ ವಿಫಲವಾದವು ಪ್ರಮುಖವಾಗಿ ಅಲ್ಪಸಂಖ್ಯಾತರು ಮತ್ತು ದಲಿತ ಸಮುದಾಯದ ಮತಗಳು ವಿಭಜನೆಯಾದವು.
ಈ ಚುನಾವಣೆಯ ಫಲಿತಾಂಶ ಅಲ್ಪಸಂಖ್ಯಾತ ಮತ್ತು ಬಿಜೆಪಿ ವಿರೋಧಿ ಮತಗಳಿಗೆ ಎಚ್ಚರಿಕೆ ಗಂಟೆಯಾಗಿದ್ದು ಅವುಗಳೆಲ್ಲ ಈಗ ಒಂದಾಗಿ ಯಾರು ಬಿಜೆಪಿಯನ್ನು ಎದುರಿಸುವ ಶಕ್ತಿ ಹೊಂದಿದ್ದಾರೆ ಎಂದು ಅವಲೋಕಿಸಿ ಅವರ ಪರವಾಗಿ ಹಕ್ಕು ಚಲಾಯಿಸುತ್ತಿದ್ದಾರೆ.
ಹೀಗಾಗಿ ಈ ಫಲಿತಾಂಶ ಬಹು ಪಕ್ಷಗಳ ಪ್ರಾಬಲ್ಯವಿರುವ ನೆರೆಯ ಮಹಾರಾಷ್ಟ್ರದಂತಹ ರಾಜ್ಯಗಳಲ್ಲಿ ಯಾವ ಪರಿಣಾಮ ಬೀರಲಿದೆ ಎನ್ನುವುದು ನೋಡಬೇಕಿದೆ ಸಾಧ್ಯ ಇಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನ ದೇಶದ ಗಮನ ಸೆಳೆದಿದೆ. ಮಹಾರಾಷ್ಟ್ರದ ಮಹಾವಿಕಾಸ ಅಘಾಡಿ ತಮ್ಮ ಹೋರಾಟ ಬಿಜೆಪಿ ವಿರುದ್ಧ ಎಂಬ ಖಚಿತ ಸಂದೇಶ ರವಾನಿಸಬೇಕು ಜೊತೆಗೆ ಸ್ಥಳೀಯ ವಿಷಯಗಳನ್ನು ಪ್ರಮುಖವಾಗಿಟ್ಟುಕೊಂಡು ಸ್ಥಳೀಯ ನಾಯಕತ್ವದ ಮೇಲೆ ಸಂಪೂರ್ಣ ಭರವಸೆ ಇಟ್ಟರೆ ಮಾತ್ರ ಚಿತ್ರಣ ಬದಲಾಗಬಹುದಾಗುತ್ತದೆ ಇದು ದೇಶದ ರಾಜಕಾರಣಕ್ಕೆ ನೀಡಿರುವ ಸಂದೇಶವಾದರೆ ಕಾಂಗ್ರೆಸ್ ಪಕ್ಷಕ್ಕೆ ಹೊಸ ಚೈತನ್ಯವನ್ನು ಮೂಡಿಸಿದೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡು ಅವರು ಪ್ರತಿನಿಧಿಸುವ ರಾಜ್ಯ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಜನರಿಂದ ತಿರಸ್ಕರಿಸಲ್ಪಟ್ಟರೆ ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರತಿನಿಧಿಸುವ ರಾಜ್ಯ ಕರ್ನಾಟಕದಲ್ಲಿ ಕಾಂಗ್ರೆಸ್ ಜನಾಭಿಪ್ರಾಯ ಗಳಿಸಿದೆ. ಈ ಫಲಿತಾಂಶ ನಿಸ್ಸಂದೇಹವಾಗಿ ಕಾಂಗ್ರೆಸ್ನ ಉತ್ಸಾಹವನ್ನು ಇಮ್ಮಡಿಗೊಳಿಸಿದೆ.
ಮತ್ತೊಂದೆಡೆಯಲ್ಲಿ ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್ಸಿನಿಂದ ಸಾಧ್ಯವಿಲ್ಲ ಎಂದು ಭಾವಿಸಿ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ನೇತೃತ್ವದ ತಂಡ ನಡೆಸಿದ ತೃತೀಯ ರಂಗ ಬಲವರ್ಧನೆ ಚಟುವಟಿಕೆಗಳಿಗೆ ಕೊಂಚಮಟ್ಟಿಗೆ ಬ್ರೇಕ್ ಬೀಳುವ ಸಾಧ್ಯತೆ ಇದೆ ಬಿಜೆಪಿಯೇತರ ಪ್ರತಿಪಕ್ಷ ಗಳು ಮತ್ತೊಮ್ಮೆ ಕಾಂಗ್ರೆಸ್ ನೇತೃತ್ವದಲ್ಲಿ ಒಟ್ಟಾಗಿ ಲೋಕಸಭೆ ಚುನಾವಣೆ ಎದುರಿಸುವ ಸಾಧ್ಯತೆಗಳು ದಟ್ಟವಾಗಿವೆ.
ಇದಕ್ಕೆ ವ್ಯತಿರಿಕ್ತವಾಗಿ ಬಿಜೆಪಿ ಪಾಳಯದಲ್ಲಿ ಕಂಪನದ ಸೂಚನೆಗಳನ್ನು ನೀಡಿದೆ ಇಲ್ಲಿವರೆಗೆ ಬಿಜೆಪಿಯ ಪ್ರಶ್ನಾತ್ತಿತ ನಾಯಕರಾಗಿ ಕೆಲಸ ಮಾಡುತ್ತಿರುವ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ವಿರುದ್ಧದ ಧ್ವನಿಗಳು ಏಳುವ ಸೂಚನೆಗಳು ಗೋಚರಿಸಿವೆ.
ಮೋದಿ ಮತ್ತು ಅಮಿತ್ ಶಾ ಅವರಂತೆ ಪಕ್ಷದ ಸಂಘಟನೆಗಾಗಿ ಕೆಲಸ ಮಾಡಿದ ನಾಗಪುರ ಮೂಲದ ನಿತಿನ್ ಗಡ್ಕರಿ ಮತ್ತು ಅವರ ತಂಡ ಸಂಘ ಪರಿವಾರದ ಆಶೀರ್ವಾದ ಇದ್ದರೂ ಕೂಡ ಮೋದಿ ಮತ್ತು ಅಮಿತ್ ಶಾ ಪ್ರಭಾವದಲ್ಲಿ ನೆಲೆ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದರು. ಇದೀಗ ಕರ್ನಾಟಕದ ಪಲಿತಾಂಶ ಇವರಿಗೆ ಬಲ ತಂದಿದೆ ಮೋದಿ ಮತ್ತು ಅಮಿತ್ ಶಾ ಅವರ ನಿಲುವುಗಳನ್ನು ಪ್ರಶ್ನಿಸುವ ಧೈರ್ಯ ಮಾಡುವ ವಾತಾವರಣ ಮೂಡಿಸಿದ್ದು ಮುಂಬರುವ ಲೋಕಸಭಾ ಚುನಾವಣೆಗೆ ಸ್ಪಷ್ಟವಾಗಿ ಇದು ದಿಕ್ಸೂಚಿಯಾಗಿ ಪರಿಣಮಿಸಿದೆ.
ಆರ್ ಎಚ್ ನಟರಾಜ್
ಹಿರಿಯ ಪತ್ರಕರ್ತ.