ರಾಜ್ಯದ ವಿವಿಧೆಡೆ ಕಂದಾಯ ಭೂಮಿಯಲ್ಲಿ ಅನಧಿಕೃತವಾಗಿ ಸಾಗುವಳಿ ಮಾಡುತ್ತಿರುವ ರೈತರಿಗೆ ಸರ್ಕಾರಿ ಜಮೀನುಗಳನ್ನು ಗುತ್ತಿಗೆಗೆ ನೀಡಲು ಕರ್ನಾಟಕ ಭೂಕಂದಾಯ ಕಾಯ್ದೆಗೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ಸಿದ್ದತೆ ನಡೆಸಿದೆ.
ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಕಂದಾಯ ಸಚಿವ ಆರ್. ಅಶೋಕ ವಾಣಿಜ್ಯ ಬೆಳೆ ಬೆಳೆಯುವ ಕೃಷಿಕರು ಸುಮಾರು ಒಂದು ಲಕ್ಷ ಎಕರೆಗೂ ಹೆಚ್ಚು ವಿಸ್ತೀರ್ಣದ ಸರ್ಕಾರಿ ಜಮೀನುಗಳನ್ನು ಅನಧಿಕೃತವಾಗಿ ಸಾಗುವಳಿ ಮಾಡುತ್ತಿದ್ದಾರೆ. ಭೂಕಂದಾಯ ಕಾಯ್ದೆಗೆ ತಿದ್ದುಪಡಿ ತಂದು ಈ ಜಮೀನುಗಳನ್ನು ಅವರಿಗೆ ದೀರ್ಘಾವಧಿಗೆ ಗುತ್ತಿಗೆಗೆ ನೀಡಲು ಅವಕಾಶ ಕಲ್ಪಿಸಲಾಗುವುದು. ಈ ತಿಂಗಳಲ್ಲಿ ನಡೆಯುವ ವಿಧಾನಮಂಡಲದ ಅಧಿವೇಶನದಲ್ಲಿ ತಿದ್ದುಪಡಿ ಮಸೂದೆ ಮಂಡಿಸಲಾಗುವುದು’ ಎಂದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ 45,000 ಎಕರೆ, ಹಾಸನ ಜಿಲ್ಲೆಯಲ್ಲಿ 30,000 ಎಕರೆ ಮತ್ತು ಕೊಡಗು ಜಿಲ್ಲೆಯಲ್ಲಿ 9,000 ಎಕರೆ ಸರ್ಕಾರಿ ಜಮೀನುಗಳನ್ನು ವಾಣಿಜ್ಯ ಬೆಳೆಗಾರರು ಅನಧಿಕೃತವಾಗಿ ಸಾಗುವಳಿ ಮಾಡುತ್ತಿದ್ದಾರೆ. ಗುತ್ತಿಗೆಗೆ ನೀಡುವ ಮೂಲಕ ಈ ಜಮೀನುಗಳ ಮೇಲಿನ ಸರ್ಕಾರದ ಹಕ್ಕನ್ನು ಖಾತರಿಪಡಿಸಲಾಗುವುದು ಎಂದು ತಿಳಿಸಿದರು.
6 ಲಕ್ಷ ಹೆಕ್ಟೇರ್ ಸರ್ಕಾರಿ ಜಮೀನು ಶೀಘ್ರದಲ್ಲಿ ಡೀಮ್ಡ್ ಅರಣ್ಯದ ವ್ಯಾಪ್ತಿಯಿಂದ ಹೊರ ಬರಲಿವೆ. ಅವುಗಳನ್ನು ಶಾಲೆ, ಕಾಲೇಜು, ಆಸ್ಪತ್ರೆ ಮತ್ತಿತರ ಸಾರ್ವಜನಿಕ ಉದ್ದೇಶಕ್ಕೆ ಆದ್ಯತೆ ಮೇಲೆ ಹಂಚಿಕೆ ಮಾಡಲಾಗುವುದು ಎಂದರು.
ತಜ್ಞರ ತಂಡದಿಂದ ಅಧ್ಯಯನ:
ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಗಡಿ ಭಾಗದಲ್ಲಿ ಪದೇ ಪದೇ ಭೂಕಂಪನ ಆಗುತ್ತಿರುವ ಪ್ರದೇಶದಲ್ಲಿ ಹೈದರಾಬಾದ್ ನ ತಜ್ಞರ ತಂಡದಿಂದ ಅಧ್ಯಯನ ನಡೆಸಲಾಗುವುದು. ಈ ತಂಡವು ಒಂದು ವಾರ ಆ ಭಾಗದಲ್ಲಿ ವಾಸ್ತವ್ಯ ಹೂಡಿ ಅಧ್ಯಯನ ನಡೆಸಲಿದೆ ಎಂದು ಹೇಳಿದರು.
‘ನಾನು ಕೂಡ ಅಧಿಕಾರಿಗಳ ತಂಡದೊಂದಿಗೆ ಕೊಡಗು, ದಕ್ಷಿಣ ಕನ್ನಡ ಜಿಲ್ಲೆಗಳ ಗಡಿಭಾಗಕ್ಕೆ ಭೇಟಿನೀಡುತ್ತೇನೆ. ಒಂದು ದಿನ ಅಲ್ಲಿಯೇ ವಾಸ್ತವ್ಯ ಮಾಡಿ, ಪರಿಸ್ಥಿತಿ ಅವಲೋಕಿಸುತ್ತೇನೆ’ ಎಂದರು.