ಬೆಂಗಳೂರು – ಕೇರಳದ (Kerala) ವಯನಾಡಿನಲ್ಲಿ ಆನೆ ದಾಳಿಗೆ ರೈತನೊಬ್ಬ ಮೃತಪಟ್ಟಿದ್ದರು.ಮೃತ ರೈತನ ಕುಟುಂಬಕ್ಕೆ ಕರ್ನಾಟಕ ಸರ್ಕಾರ ಪರಿಹಾರ ಬಿಡುಗಡೆ ಮಾಡಿದೆ.ಇದು ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ.ಅದರಲ್ಲೂ ಈ ಕುರಿತಂತೆ ಅರಣ್ಯ ಮಂತ್ರಿ ಈಶ್ವರ ಖಂಡ್ರೆ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿರುವುದು ಬಿಜೆಪಿ ನಾಯಕರ ಕೆಂಗಣ್ಣಿಗೆ ಕಾರಣವಾಗಿದೆ.
ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ದಂತರಹಿತ ಗಂಡು (ಮಕನಾ) ಆನೆಯನ್ನು ನವೆಂಬರ್ 30, 2023 ರಂದು ಸೆರೆಬಹಿಡಿಯಲಾಗಿತ್ತು. ನಂತರ ಈ ಆನೆಯನ್ನು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳಿಸಲಾಗಿತ್ತು.
ಈ ಆನೆಯು ಸುಮಾರು ಎರಡು ತಿಂಗಳ ನಂತರ ಕೇರಳ ರಾಜ್ಯದ ವಯನಾಡು ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿತ್ತು. ಫೆಬ್ರವರಿ 10 ರ ಬೆಳಗ್ಗೆ ವಯನಾಡು ಜಿಲ್ಲೆಯ ಬೇಗೂರಿನ ಚತಿಗಡದಲ್ಲಿ ಈ ಆನೆಯೊಂದಿಗೆ ಸಂಘರ್ಷದ ಘಟನೆಯಲ್ಲಿ ಶ್ರೀ ಅಜೀಶ್ ಅವರು ಪ್ರಾಣ ಕಳೆದುಕೊಂಡಿದ್ದರು. ಶ್ರೀ ಅಜೀಶ್ ರವರ ಸಾವಿಗೆ ಪರಿಹಾರವಾಗಿ ಅವರ ಕುಟುಂಬಕ್ಕೆ ಪರಿಹಾರ ನೀಡುವಂತೆ ಕೇರಳದ ಜನಪ್ರತಿನಿಧಿಗಳು ಮತ್ತು ಕೇರಳ ಸರ್ಕಾರವು ಕನಾ೯ಟಕದ ಸರ್ಕಾರವನ್ನು ಕೋರಿತ್ತು.ಜೊತೆಗೆ ವಯನಾಡು ಸಂಸದ ರಾಹುಲ್ ಗಾಂಧಿ ಕೂಡಾ ಪತ್ರ ಬರೆದಿದ್ದರು. ಇದರ ಬೆನ್ನಲ್ಲೇ ರಾಹುಲ್ ಗಾಂಧಿ ವಯನಾಡಿಗೆ ಭೇಟಿ ಕೊಟ್ಟು ಕುಟುಂಬಸ್ಥರನ್ನು ಸಂತೈಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಮುಖ್ಯಮಂತ್ರಿಗಳೊಂದಿಗೆ ಚಚಿ೯ಸಿ,ಆನೆದಾಳಿಯಲ್ಲಿ ಮೃತಪಟ್ಟ ಅಜೀಶ್ ಅವರ ಕುಟುಂಬಕ್ಕೆ ಪರಿಹಾರ ಬಿಡುಗಡೆಗೆ ಆದೇಶಿಸಿದ್ದರು.
ಪರಿಹಾರ ಬಿಡುಗಡೆಯಾದ ನಂತರ ಅರಣ್ಯ ಸಚಿವ ಈಶ್ವರ್ ಖಂಡ್ರೆ ಪರಿಹಾರ ಘೋಷಣೆ ಮಾಡಿರುವ ಕುರಿತು ರಾಹುಲ್ ಗಾಂಧಿಗೆ ಪತ್ರ ಬರೆದಿದ್ದಾರೆ. ಇದರಲ್ಲಿ ರಾಹುಲ್ ಗಾಂಧಿಯವರೆ, ನಿಮ್ಮ ಸಲಹೆ ಮೇರೆ ಕರ್ನಾಟಕ ಸರ್ಕಾರ ವಯನಾಡಿನಲ್ಲಿ ಆನೆದಾಳಿಗೆ ಮೃತಪಟ್ಟಿರುವ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ನಿಮ್ಮ ಸಲಹೆಯನ್ನು ವೇಣುಗೋಪಾಲ್ ಅವರ ದೂರವಾಣಿ ಕರೆ ಮೂಲಕ ನನಗೆ ತಿಳಿಸಿದ್ದು, ಈ ಬಗ್ಗೆ ಸಿಎಂ ಸಿದ್ದರಾಮಯ್ಯನವರೊಂದಿಗೆ ಚರ್ಚಿಸಿದ ನಂತರ ಸಂತ್ರಸ್ತನ ಕುಟುಂಬಕ್ಕೆ 15 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿದೆ ಎಂದು ಬರೆದಿದ್ದಾರೆ. ರೈತನನ್ನು ಕೊಂದಿದ್ದ ಆನೆ ಹಾಸನದ ಬೇಲೂರಿನಿಂದ ಸೆರೆ ಹಿಡಿದು ಬಂಡೀಪುರದಲ್ಲಿ ಬಿಟ್ಟಿದ್ದ ಟಸ್ಕರ್ ಆನೆ ಎಂದು ತಿಳಿಸಿದ್ದಾರೆ.
ಸಚಿವರ ಈ ನಿರ್ಧಾರ ಬಿಜೆಪಿ ನಾಯಕರ ಕೆಂಗಣ್ಣಿಗೆ ಕಾರಣವಾಗಿದೆ. ಸರ್ಕಾರದ ನಿಲುವನ್ನು ಖಂಡಿಸಿರುವ ಪ್ರತಿಪಕ್ಷ ನಾಯಕ ಅಶೋಕ್ ಸೇರಿದಂತೆ ಬಿಜೆಪಿ ನಾಯಕರು ಬೇರೆ ರಾಜ್ಯದಲ್ಲಿ ಮೃತಪಟ್ಟ ವ್ಯಕ್ತಿಗೆ ಕರ್ನಾಟಕ ಸರ್ಕಾರ 15 ಲಕ್ಷ ಪರಿಹಾರ ಘೋಷಣೆ ಮಾಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇರಳದ ಸಂಸದ ರಾಹುಲ್ ಗಾಂಧಿ, ಕೆ.ಸಿ ವೇಣುಗೋಪಾಲ್ ನಿರ್ದೇಶನದ ಮೇರೆಗೆ ಪರಿಹಾರ ಬಿಡುಗಡೆ ಮಾಡಲಾಗಿದೆ. ಆದರೆ ಈ ಸರ್ಕಾರಕ್ಕೆ ಕರ್ನಾಟಕದಲ್ಲಿ ಆತ್ಮಹತ್ಯೆಗೆ ಶರಣಾದ ರೈತರಿಗೆ ನೀಡಲು ಪರಿಹಾರ ಹಣ ಇಲ್ಲ, ರಾಜಕೀಯ ಕಾರಣಕ್ಕೆ ಕೇರಳದವರಿಗೆ ಪರಿಹಾರವೇ? ಘೋಷಣೆ ಮಾಡಲಾಗಿದೆ ಎಂದು ಟ್ವೀಟ್ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ.