ಹುಬ್ಬಳ್ಳಿ: ಮಣ್ಣೆತ್ತಿನ ಅಮವಾಸ್ಯೆ ಅಂಗವಾಗಿ ಬಸವಣ್ಣ ಮೂರ್ತಿಗಳ ಮಾರಾಟ ಬಲು ಜೋರಾಗಿದೆ.
ಮಣ್ಣು, ಎತ್ತುಗಳು ರೈತರ ಜೀವನಾಡಿ. ಎತ್ತುಗಳ ಸಹಾಯದಿಂದ ಬಿತ್ತುವ ರೈತರಿಗೆ, ಮಣ್ಣು ಒಂದಕ್ಕೆ ಹತ್ತರಷ್ಟನ್ನು ಕೊಡುವ ಕಾಮಧೇನು. ಮಣ್ಣಿನ ಪೂಜೆ ಮಾಡುವ ರೈತಾಪಿ ಜನರು, ಬಸವಣ್ಣನಿಗೂ ಅಷ್ಟೇ ಆರಾಧ್ಯ ಸ್ಥಾನವನ್ನು ನೀಡಿದ್ದಾರೆ. ಇದಕ್ಕಾಗಿಯೇ ಪ್ರತಿ ವರ್ಷ ಮಣ್ಣೆತ್ತಿನ ಅಮಾವಾಸ್ಯೆಯಂದು ಎತ್ತುಗಳನ್ನು ಪೂಜಿಸಿ, ಭಕ್ತಿ ಸಮರ್ಪಿಸುತ್ತಾರೆ.
ಹಬ್ಬ ಹರಿದಿನಗಳ ಸಂಭ್ರಮವೂ ಹಳ್ಳಿಗಳಲ್ಲಿ ಇನ್ನೂ ಕಡಿಮೆ ಆಗಿಲ್ಲ. ಅದರಲ್ಲಿಯೂ ಮಣ್ಣೆತ್ತಿನ ಅಮಾವಾಸ್ಯೆ ಎಂದರೆ ಮತ್ತಷ್ಟು ಸಂಭ್ರಮ ಮನೆ ಮಾಡುತ್ತದೆ. ಎತ್ತುಗಳಿಗೆ ಪೂಜೆ ಮಾಡುವುದು ಒಂದೆಡೆಯಾದರೆ, ಎತ್ತುಗಳನ್ನು ಪೂಜೆ ಮಾಡಲು ಆಗದವರು, ಮಣ್ಣಿನ ಎತ್ತುಗಳನ್ನು ತಂದು ಪೂಜಿಸುತ್ತಾರೆ. ಹೀಗಾಗಿ ಮಣ್ಣಿನ ಎತ್ತುಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ.
ಈ ಭಾಗದಲ್ಲಿ ಮಣ್ಣೆತ್ತಿನ ಅಮಾವಾಸ್ಯೆಯನ್ನು ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತದೆ. ಬಿಸಿಲಿನ ತಾಪದಿಂದ ಕಾಯ್ದಿರುವ ಭೂಮಿಗೆ ತಂಪು ನೀಡಲು ವರುಣನ ಆಗಮನದ ಸಂದರ್ಭದಲ್ಲಿಯೇ ಮಣ್ಣೆತ್ತಿನ ಅಮಾವಾಸ್ಯೆ ಬರುತ್ತದೆ. ಮಣ್ಣಿನ ಎತ್ತುಗಳನ್ನು ತಂದು ಪೂಜಿಸಿದರೆ, ಮಳೆ, ಬೆಳೆ ಸಮೃದ್ಧವಾಗಿ ಬರುತ್ತದೆ ಎಂಬ ನಂಬಿಕೆ ರೈತರಲ್ಲಿದೆ.
ಮಣ್ಣಿನ ಎತ್ತುಗಳಿಗೆ ಮಾಡುವ ಶೃಂಗಾರ ಕಣ್ಣಿಗೆ ಹಬ್ಬವನ್ನು ಉಂಟು ಮಾಡುತ್ತದೆ. ಬಣ್ಣ ಹಚ್ಚಿದ ಮಣ್ಣಿನ ಎತ್ತುಗಳ ಕೋಡು, ಹಣೆ ಸೇರಿದಂತೆ ಮೈಯೆಲ್ಲಾ ದವಸ ಧಾನ್ಯಗಳನ್ನು ಹಚ್ಚುತ್ತಾರೆ.