ಬೆಂಗಳೂರು, ಜು.8- ಸರ್ಕಾರಿ ಶಾಲೆಯ ಮಕ್ಕಳಿಗೆ ಶೂ, ಸಾಕ್ಸ್ ಅಗತ್ಯವಿಲ್ಲ ಎಂದು ಹೇಳುವ ಸಚಿವ ನಾಗೇಶ್ ಏಕೆ ಒಳ್ಳೆಯ ಬಟ್ಟೆ ಧರಿಸುತ್ತಾರೆ. ಎಂದು ಪ್ರಶ್ನಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಚಿವರೂ ಲಂಗೋಟಿ ಧರಿಸಿಕೊಂಡು ಓಡಾಡಲಿ ನೋಡೋಣʼ ಎಂದು ಸವಾಲು ಹಾಕಿದ್ದಾರೆ.
ವಿಧಾನಸಭೆ ಪ್ರತಿ ಪಕ್ಷ ನಾಯಕ ಸಿದ್ದರಾಮಯ್ಯ ನಿವಾಸದಲ್ಲಿ ಉಪಾಹಾರ ಸಭೆ ನಡೆಸಿ ಪಕ್ಷ ಸಂಘಟನೆ ಕುರಿತು ಚರ್ಚಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಮಕ್ಕಳು ಶೂ, ಸಾಕ್ಸ್‌ಗಾಗಿ ಶಾಲೆಗೆ ಬರುವುದಿಲ್ಲ ಎಂಬ ಹೇಳಿಕೆ ನೀಡಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ಗೆ ಸಾಮಾನ್ಯ ಜ್ಞಾನ ಇಲ್ಲ. ಒಳ್ಳೆಯ ಶೂ, ಸಾಕ್ಸ್ ತನ್ನ ಮಕ್ಕಳಿಗೂ ಸಿಗಲಿ ಎಂಬ ಆಸೆ ಎಲ್ಲ ಪೋಷಕರಿಗೂ ಇರುತ್ತದೆ. ಇವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆʼ ಎಂದರು.
‘ಶೂ, ಸಾಕ್ಸ್ ನೀಡಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ಹೇಳಲಿ. ಕರ್ನಾಟಕದ ಜನರು ಒಳ್ಳೆಯವರಿದ್ದಾರೆ. ಅವರ ಬಳಿ ಭಿಕ್ಷೆ ಬೇಡಿ ಮಕ್ಕಳಿಗೆ ಶೂ, ಸಾಕ್ಸ್ ವಿತರಿಸಲು ವ್ಯವಸ್ಥೆ ಮಾಡುವೆ. ನಾನೂ ದೇಣಿಗೆ ನೀಡುವೆ. ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ದೇಣಿಗೆಯನ್ನೂ ಕೇಳುವೆʼ ಎಂದು ಹೇಳಿದರು.
ಪಕ್ಷದ ಪದಾಧಿಕಾರಿಗಳ ಜತೆ ಗುರುವಾರ ಸಭೆ ನಡೆಸಲಾಗಿತ್ತು. ಆ ಕುರಿತು ಸಿದ್ದರಾಮಯ್ಯ ಅವರಿಗೆ ತಿಳಿಸಿದ್ದೆ. ಶುಕ್ರವಾರ ಉಪಾಹಾರಕ್ಕೆ ಮನೆಗೆ ಬಾ ಎಂದಿದ್ದರು. ಬಂದು ಉಪಾಹಾರ ಸೇವಿಸಿ ಅವರೊಂದಿಗೆ ಚರ್ಚೆ ನಡೆಸಿದ್ದೇನೆʼ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಪಕ್ಷ ಸಂಘಟನೆ, ಬಿಜೆಪಿಯ ದುರಾಡಳಿತದ ವಿರುದ್ಧದ ಹೋರಾಟ, ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ ಕುರಿತು ಚರ್ಚಿಸಲಾಗಿದೆ ಎಂದರು.
ಪಕ್ಷದಿಂದ ಹುಟ್ಟು ಹಬ್ಬ:
ಇದೇ ವೇಳೆ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ನನಗೆ 75 ವರ್ಷ ತುಂಬುತ್ತಿರುವುದರಿಂದ ನಮ್ಮ ಪಕ್ಷದವರೇ ಸೇರಿಕೊಂಡು ಹುಟ್ಟುಹಬ್ಬ ಆಚರಣೆ ಮಾಡುತ್ತಿದ್ದಾರೆ. ಪಕ್ಷದ ಹೊರತಾಗಿ ಯಾರೂ ಮಾಡುತ್ತಿಲ್ಲʼ ಎಂದು ಹೇಳಿದರು.
ಪಕ್ಷದ ನಾಯಕರೇ ಹುಟ್ಟುಹಬ್ಬ ಆಚರಣೆ ಸಮಿತಿಯಲ್ಲಿದ್ದಾರೆ. ಕಾಂಗ್ರೆಸ್ ನಾಯಕರ ಹೊರತಾಗಿ ಯಾರಿಗೂ ಆಹ್ವಾನ ನೀಡಿಲ್ಲ. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಬಿ.ಕೆ. ಹರಿಪ್ರಸಾದ್, ಡಿ.ಕೆ. ಶಿವಕುಮಾರ್, ಎಂ.ಬಿ. ಪಾಟೀಲ ಸೇರಿದಂತೆ ಪಕ್ಷದ ನಾಯಕರಿಗೆ ಸಮಾರಂಭಕ್ಕೆ ಆಹ್ವಾನ ನೀಡಲಾಗಿದೆʼ ಎಂದರು.
ಸಮಿತಿಯಲ್ಲಿರುವ ಆರ್.ವಿ. ದೇಶಪಾಂಡೆ, ಶಾಮನೂರು ಶಿವಶಂಕರಪ್ಪ, ಕೆ.ಎನ್. ರಾಜಣ್ಣ, ಎಚ್.ಸಿ. ಮಹದೇವಪ್ಪ, ಬಸವರಾಜ ರಾಯರಡ್ಡಿ ಎಲ್ಲರೂ ಕಾಂಗ್ರೆಸ್ ನಾಯಕರೇ. ಪಕ್ಷದ ಹೆಸರಿನಲ್ಲಿ ಕಾರ್ಯಕ್ರಮ ನಡೆದಿದ್ದರೂ, ಇದು ಪಕ್ಷದವರೇ ಮಾಡುತ್ತಿರುವ ಕಾರ್ಯಕ್ರಮ ಎಂದು ಹೇಳಿದರು.
‘ಸಿದ್ದರಾಮೋತ್ಸವ ಎಂದು ನಾನಾಗಲೀ, ಸಮಿತಿಯವರಾಗಲೀ ಎಲ್ಲಿಯೂ ಹೇಳಿಕೊಂಡಿಲ್ಲ. ಮಾಧ್ಯಮದವರೇ ಹಾಗೆ ಹೇಳಿರುವುದು. ಜೀವನದಲ್ಲಿ 75 ವರ್ಷ ತುಂಬುವುದು ಒಂದು ಮೈಲಿಗಲ್ಲು ಇದ್ದಂತೆ. ಆ ಕಾರಣದಿಂದ ಎಲ್ಲರೂ ಸೇರಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆʼ ಎಂದರು.
Previous Articleತಮಿಳು ಸ್ಟಾರ್ ನಟ ವಿಕ್ರಮ್ ಗೆ ಹಾರ್ಟ್ ಅಟ್ಯಾಕ್
Next Article ಗುಜರಾತ್ ನ ಆರು ಜನರ ಸೆರೆ..