ಮಂಗಳೂರು: ಲೀಫ್ ಆರ್ಟ್, ಚಾರ್ ಕೋಲ್ ಆರ್ಟ್, ಮೊಳೆಯಲ್ಲಿ ತಮ್ಮ ಕೈಚಳಕ ತೋರಿಸಿರುವ ಯುವ ಕಲಾವಿದ ತಿಲಕ್ ಕುಲಾಲ್ ಇದೀಗ ಧಾನ್ಯಗಳಿಂದಲೇ ವಿನೂತನ ಕಲಾ ಮಾದರಿಯೊಂದನ್ನು ತಯಾರಿಸಿದ್ದಾರೆ.
ಹೌದು ತಿಲಕ್ ಕುಲಾಲ್ ಅವರು ಧಾನ್ಯಗಳಿಂದಲೇ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯ ಪೋಟ್ರೇಟ್ ರಚಿಸಿದ್ದಾರೆ. ಇದನ್ನು ಹೆಸರು, ಬೆಳ್ತಿಗೆ ಅಕ್ಕಿ, ಸಾಸಿವೆ, ಕಪ್ಪು ಎಳ್ಳು, ಸಬ್ಬಕ್ಕಿ, ಕಪ್ಪು ಹೆಸರನ್ನು 250ಗ್ರಾಂನಂತೆ ಸರೀ ಪ್ರಮಾಣದಲ್ಲಿ ತೆಗೆದುಕೊಂಡು ರಚಿಸಿದ್ದಾರೆ. 2 ಅಡಿ ಉದ್ದವುಳ್ಳ, 1/2 ಅಡಿ ಅಗಲದ ಈ ಪೋಟ್ರೇಟ್ ರಚನೆಗೆ ಮೂರು ದಿನಗಳ ಕಾಲ ತೆಗೆದುಕೊಳ್ಳಲಾಗಿದೆಯಂತೆ. ಮೊದಲಿಗೆ ಕಟೀಲು ಶ್ರೀದುರ್ಗೆಯ ಸ್ಕೆಚ್ ಬಿಡಿಸಿ ಪೊರಕೆ ಕಡ್ಡಿ ಮೂಲಕ ತಾಳ್ಮೆಯಿಂದ ಧಾನ್ಯಗಳನ್ನು ಅಂಟಿಸಲಾಗಿದೆ. ಬಳಿಕ ಧಾನ್ಯಗಳು ಹಾಳಾಗದಂತೆ ವುಡ್ ಫಾಲಿಶ್ ಮಾಡಲಾಗಿದೆ. ಇದರಿಂದ ಈ ಪೋಟ್ರೇಟ್ ಸಾಕಷ್ಟು ವರ್ಷಗಳ ಕಾಲ ಬಾಳಿಕೆ ಬರುತ್ತದಂತೆ.
ಮೊದಲ ಬಾರಿಗೆ ಕಟೀಲು ಶ್ರೀದುರ್ಗೆಯನ್ನು ಧಾನ್ಯದ ಮೂಲಕ ಮೂಡಿದ್ದು, ಈ ಹಿಂದೆ ಯಾರೂ ಇಂತಹ ಪ್ರಯತ್ನ ಮಾಡಿಲ್ಲವಂತೆ. ಈ ಪೋಟ್ರೇಟ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿರುವ ತಿಲಕ್ ಕುಲಾಲ್ ಗೆ ನೆಟ್ಟಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಈ ಪೋಟ್ರೇಟ್ ಅನ್ನು ಕಟೀಲು ದೇವಸ್ಥಾನಕ್ಕೆ ಕೊಡುವ ಆಲೋಚನೆ ಹೊಂದಿದ್ದಾರಂತೆ ತಿಲಕ್ ಕುಲಾಲ್. ಅಲ್ಲದೆ ಯಾರಾದರೂ ಖರೀದಿ ಮಾಡಲು ಮುಂದೆ ಬಂದಲ್ಲಿ ಅವರಿಗೆ ಈ ಪೋಟ್ರೇಟ್ ಅನ್ನು ಮಾಡಿಕೊಡುವ ಉದ್ದೇಶವನ್ನೂ ತಿಲಕ್ ಕುಲಾಲ್ ಹೊಂದಿದ್ದಾರೆ. ಮೂಡುಬಿದಿರೆಯ ಒಂಟಿಕಟ್ಟೆ ನಿವಾಸಿಯಾಗಿರುವ ಫೈನ್ ಆರ್ಟ್ಸ್ ಕಲಾವಿದ ತಿಲಕ್ ಕುಲಾಲ್ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ತಮ್ಮ ಕಲಾ ಶಿಕ್ಷಣ ಪೂರೈಸಿದ್ದಾರೆ.