ಧಾರವಾಡ: ರಾಜ್ಯದಲ್ಲಿ ಎಸ್‌ಡಿಪಿಐ, ಪಿಎಫ್ಐ ಸೇರಿದಂತೆ ಇತರ ಸಂಘಟನೆಗಳು ಬ್ಯಾನ್ ಆಗಬೇಕು ಎಂಬ ವಿಚಾರಕ್ಕೆ ನನ್ನ ಬೆಂಬಲವೂ ಇದೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇವಲ ಸಂಘಟನೆಗಳು ಮಾತ್ರ ಬ್ಯಾನ್ ಆದರೆ ಸಾಲದು ಸಂಘಟನೆ ಹಾಗು ಸಂಘಟನೆಯಲ್ಲಿರುವವರ ಮೇಲೂ ಕ್ರಮ ಆಗಬೇಕು. ಒಂದು ಸಂಘಟನೆ ಬ್ಯಾನ್ ಆದರೆ ಇನ್ನೊಂದು ಸಂಘಟನೆಯಲ್ಲಿ ಬಂದು ಸೇರಿಕೊಳ್ಳುತ್ತಾರೆ. ಹೀಗಾಗಿ ಸಂಘಟನೆಯಲ್ಲಿರುವವರ ಮೇಲೂ ಕ್ರಮ ಆಗಬೇಕು ಎಂದು ಬೆಲ್ಲದ ಒತ್ತಾಯಿಸಿದರು.
ಮಂಗಳೂರಿನಲ್ಲಿ ಪ್ರವೀಣ್ ಹತ್ಯೆ ನಡೆಯಬಾರದಿತ್ತು. ಇದು ನಮಗೂ ಮನಸ್ಸಿಗೆ ನೋವು ತರಿಸಿದೆ. ನಾವು ಏನೇ ಇದ್ದರೂ ಪಕ್ಷದ ಕಾರ್ಯಕರ್ತರು ಹಾಗು ಹಿಂದೂ ಕಾರ್ಯಕರ್ತರು. ಕಾರ್ಯಕರ್ತರಿಂದಲೇ ನಾವು ಈ ಸ್ಥಾನ ತಲುಪಿದ್ದೇವೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ 20 ಜನ ಹಿಂದೂ ಕಾರ್ಯಕರ್ತರ ಹತ್ಯೆಯಾಗಿತ್ತು. ಇದರಿಂದಾಗಿಯೇ ಜನ ಬಿಜೆಪಿಗೆ ಅಧಿಕಾರ ಕೊಟ್ಟಿದ್ದಾರೆ. ನಮ್ಮ ಅವಧಿಯಲ್ಲೂ ಹಿಂದೂ ಕಾರ್ಯಕರ್ತರ ಹತ್ಯೆಯಾಗುತ್ತಿರುವುದಕ್ಕೆ ನಮ್ಮ ಕಾರ್ಯಕರ್ತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಈಗಾಗಲೇ ಸಿಎಂ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಕಾನೂನಿನ ಬಗ್ಗೆ ಹೆದರಿಕೆ ಹುಟ್ಟುವಂತೆ ನಾವು ಕೆಲಸ ಮಾಡುತ್ತೇವೆ ಎಂದರು.